-ಚೈತನ್ಯ ಮಜಲುಕೋಡಿ
ಹಿರಿಯ ವಿದ್ವನ್ಮಣಿಗಳಾದ ಶ್ರೀ ಶ್ರೀಧರ ಡಿ.ಎಸ್ ಅವರು ಯಕ್ಷಗಾನ ಕ್ಷೇತ್ರದ ಎಲ್ಲ ವಿಭಾಗಗಳಲ್ಲೂ ಸಾರ್ಥಕ ಸೇವೆಯನ್ನು ಮಾಡಿ ಸೈ ಎನಿಸಿಕೊಂಡವರು. ಅವರ ಬಹುಕಾಲದ ಅಧ್ಯಯನ-ಅಧ್ಯಾಪನಗಳ ಫಲವೆಂಬಂತೆ ಪ್ರಸಿದ್ಧ ಪುರಾಣಪಾತ್ರವಾದ ಶುಕ್ರಾಚಾರ್ಯರ ಜೀವನದ ಮೂಲಚೂಲಗಳನ್ನು ಸಮೀಕ್ಷಿಸುವ ಪೌರಾಣಿಕ ಕಾದಂಬರಿ ‘ಅಸುರಗುರು ಶುಕ್ರಾಚಾರ್ಯ’ವು ಮೂಡಿಬಂದಿದೆ. ಭೃಗುಕುಲತಿಲಕನಾದ ಶುಕ್ರಾಚಾರ್ಯನು ಜನಸಾಮಾನ್ಯರಿಗೆಲ್ಲಾ ಒಂದು ರೀತಿಯ ಋಣಾತ್ಮಕ ವ್ಯಕ್ತಿತ್ವವಾಗಿ ಮಾತ್ರವೇ ಕಂಡಿರುವುದು. ಅದಕ್ಕೆ ಕಾರಣವೂ ಇದೆ; ಆತನ ಮುಂಗೋಪ, ಅಸುರಗುರುತ್ವ ಮತ್ತು ಪಕ್ಷಪಾತ, ಸ್ವಭಾವದಲ್ಲಿರುವ ರಾಜಸ ಗುಣ, ಸುರೆ ಕುಡಿಯುವ ದೌರ್ಬಲ್ಯ, ಬಲಿಗೆ ದಾನ ನೀಡಲು ಬಿಡದೆ ಒಕ್ಕಣ್ಣನಾದ ಎಂಬ ಕತೆಗಳೆಲ್ಲ ಕೂಡಿ ಒಂದು ಪೂರ್ವಗ್ರಹದ ಚಹರೆಯು ನಮ್ಮೊಳಗೆ ನಿಂತುಬಿಟ್ಟಿದೆ. ತಪಸ್ಸಿನಲ್ಲಿದ್ದ ವಿಶ್ವಾಮಿತ್ರ ಮೇನಕೆಯ ಬಲೆಗೆ ಬಿದ್ದ, ವಸಿಷ್ಠರ ವಿರುದ್ಧ ತೊಡೆತಟ್ಟಿ ಮಕ್ಕಳನ್ನೆಲ್ಲ ಕೊಂದು ಹಾಕಿದ ಎಂಬುವ ವಿಷಯಗಳನ್ನೇ ಗುನುಗುತ್ತಿದ್ದ ಜನಗಳು, ಅವನೇ ಗಾಯತ್ರಿಯ ಸಾಕ್ಷಾತ್ಕಾರಕ್ಕೂ ಕಾರಣನಾದವನೆಂಬ ಹಿರಿದಾದ ಸತ್ಯವು ಮುನ್ನೆಲೆಗೆ ಬಂದು ಗಟ್ಟಿಯಾದುದು ದೇವುಡುರವರ ಮಹಾಬ್ರಾಹ್ಮಣ ಕಾದಂಬರಿ ಬಂದ ನಂತರ. ಅಂತೆಯೇ ಶುಕ್ರನ ಸಾಹಸ, ಪುರುಷ ಪ್ರಯತ್ನದ ಪರಾಕಾಷ್ಠೆಯಿಂದ ಶಿವಪುತ್ರನೇ ಆಗುವ, ಅಸುರರನ್ನು ದೇವತ್ವಕ್ಕೇರಿಸಲು ಹೆಣಗುವ, ಅವರ ಉದ್ಧಾರಕ್ಕೆ ಸಮರ್ಪಿತವಾಗುವ ಜೀವನವನ್ನು ಉಜ್ವಲವಾಗಿ ಶ್ರೀಧರರವರು ಚಿತ್ರಿಸಿದ್ದಾರೆ. ಯುಗ ಯುಗಗಳನ್ನು ಮೀರಿ ಬೆಳೆದು ಬಾಳಿದ ಆ ಪುರಾಣಪುರುಷನು ನಮ್ಮಿಂದ ಎಷ್ಟೋ ದೂರದಲ್ಲಿ ಬೆಳಗುತ್ತಿರುವ ಗ್ರಹಾಧಿಪತಿ ಶುಕ್ರನಾಗಿ ಕಾದಂಬರಿಯ ಎಲ್ಲ ದಿಕ್ಕುದೆಸೆಗಳಲ್ಲಿ ವ್ಯಾಪಿಸಿದ್ದಾನೆ.
ಲೇಖಕರ ಕೃತಿಕಲ್ಪದಲ್ಲಿ ಪುರಾಣ ಭಂಜನೆಯಿಲ್ಲ, ಅಂತೆಯೇ ವೃಥಾ ರಂಜನೆಯೂ ಇಲ್ಲ. ಪುರಾಣಪಾತ್ರಗಳ ನಡೆಯಲ್ಲಿ ಸಾರವನ್ನು ಹುಡುಕುವ ವಿಚಕ್ಷಣ ದೃಷ್ಟಿ, ಅದನ್ನು ಸೊಗಸಾದ ನುಡಿಗಳಲ್ಲಿ ಕಡೆದು ನಿಲ್ಲಿಸುವ ಅರ್ಥಗಾರಿಕೆಯ ಬಲ, ಸ್ವಭಾವತಃ ಕವಿಯಾಗಿರುವುದರಿಂದ ಭಾವನಾತ್ಮಕ ಸನ್ನಿವೇಶಗಳಲ್ಲಿ ಅಪ್ರಯತ್ನವಾಗಿ ಮೂಡಿಬರುವ ಕಾವ್ಯದ ಸೊಬಗು ಇವೆಲ್ಲ ಕಾದಂಬರಿಯನ್ನು ಘನವಾಗಿಸಿವೆ. ಶುಕ್ರನ ಜೀವನ ಯುಗದಾಚೆಗೂ ನಿಲ್ಲುವಂತದ್ದು. ಆತನ ಬದುಕಿನ ಘಟ್ಟಗಳನ್ನು ಅನುಕ್ರಮವಾಗಿ ಕಟ್ಟಿಕೊಡುತ್ತ, ಸುಸಂಬದ್ಧವಾಗಿ ಕತೆಯನ್ನು ಮುಂದುವರೆಸುವುದು ಇಲ್ಲಿನ ಬಹುಮುಖ್ಯ ಸವಾಲು. ಅದನ್ನು ಸಮರ್ಥವಾಗಿ ನಿರ್ವಹಿಸುತ್ತ, ಜೊತೆಗೆ ದೇವಾಸುರರ ನಡುವಿನ ಸಂಘರ್ಷವನ್ನು ಭೌತಿಕ ನೆಲೆಗಷ್ಟೇ ಸೀಮಿತಗೊಳಿಸದೆ ಆಧ್ಯಾತ್ಮದ ಮಟ್ಟಕ್ಕೆ ಇಳಿಸುವುದರಿಂದ ನಮಗೆ ಕಾದಂಬರಿಯ ಓದು ಒಂದು ಸುದೀರ್ಘವಾದ ತತ್ತ್ವಚಿಂತನೆಯಾಗಿಯೂ ಮನದಲ್ಲಿ ಮನೆ ಮಾಡುತ್ತದೆ. ದೇರಾಜೆಯವರಂತಹ ಮಹಾನ್ ಕಲಾವಿದರು ಹಾಕಿಕೊಟ್ಟ ಲೇಖನದ ಹಾದಿಯಲ್ಲಿ ಮಾನ್ಯ ಶ್ರೀಧರರು ಗಟ್ಟಿಯಾದ ಹೆಜ್ಜೆಯನ್ನಿಟ್ಟು ಮುಂದುವರೆದಿದ್ದಾರೆ. ಓದುವಾಗ ಅಲ್ಲಲ್ಲಿ ಯಕ್ಷಗಾನದ ಸವಿಯ ಪುಳಕವೂ ಆಗುವುದು ಖಚಿತ. ಇಂತಹವರು ಪುರಾಣದ ಸ್ವಾರಸ್ಯವನ್ನ ಹೆಚ್ಚಾಗಿ ಬರೆವಣಿಗೆಯಲ್ಲಿ ತಾರದಿರುವುದರಿಂದಲೇ ಇಂದು ಮಾರುಕಟ್ಟೆಯಲ್ಲಿ ಅಂದಾದುಂದಿಯಾಗಿ ಕತೆ ಹೊಸೆಯುವವರು ಪ್ರಸಿದ್ಧರಾಗುತ್ತಿದ್ದಾರೆ ಎನ್ನುವುದು ಸುಳ್ಳಿನ ಮಾತಲ್ಲ. ಇಂತಹ ದುಷ್ಕಾಲದಲ್ಲಿ ಮತ್ತೆ ಪೌರಾಣಿಕ ಪ್ರಸಂಗಕ್ಕೆ ಸಾಹಿತ್ಯಕ್ಷೇತ್ರದೊಳಗೆ ಹೀಗೊಂದು ಶುಕ್ರದೆಸೆ ಒದಗಿದೆ. ಅದು ಬಲಿತು ಬೆಳಗಲಿ ಎಂಬುದು ಸಹೃದಯರ ಆಶಯವೂ ಆಗಿದೆ.
ಅಸುರಗುರು ಶುಕ್ರಾಚಾರ್ಯ (ಕಾದಂಬರಿ)ಶ್ರೀಧರ ಡಿ.ಎಸ್.ಸಾಹಿತ್ಯ ಭಂಡಾರ, ಬಳೆಪೇಟೆ, ಬೆಂಗಳೂರುಬೆಲೆ: ರೂ. 350/-