-ಸಂಜಯ್ ಚಿತ್ರದುರ್ಗ
ಬಾಲ್ಯ ಎಂದ ತಕ್ಷಣ ಕಣ್ಮುಂದೆ ಬರುವುದೇ ನಮ್ಮೂರು. ನಮ್ಮೂರು ಎಂದ ತಕ್ಷಣವೇ ಕಣ್ಮುಂದೆ ಬರುವುದು ಬಾಲ್ಯ. ನನ್ನ ಪಾಲಿಗೆ ಇವೆರಡಕ್ಕೂ ಬಾರಿ ನಂಟಿದೆ. ಎಷ್ಟೆಂದರೆ ಒಂದನ್ನು ಬಿಟ್ಟರೆ ಇನ್ನೊಂದು ಅಪೂರ್ಣ ಎನ್ನುವಷ್ಟು. ಏಕೆಂದರೆ ನಾನು ಹೆಚ್ಚು ಸಮಯ ನಮ್ಮೂರಿನಲ್ಲಿ ಕಳೆದಿದ್ದು ಬಾಲ್ಯದಲ್ಲೇ. ನಂತರ ಏನಿದ್ದರೂ ವರ್ಷಕ್ಕೊಮ್ಮೆ ಬರುವ ಬೇಸಿಗೆ ರಜ, ದಸರ ರಜಾದಲ್ಲಿ ಅಷ್ಟೇ ಊರಿನ ದರ್ಶನ ಭಾಗ್ಯ.
ಇನ್ನೂ ನಮ್ಮೂರ ವಿಷ್ಯಕ್ಕೆ ಬಂದರೆ, ಪಕ್ಕಾ ಬಯಲುಸೀಮೆಯ ಪುಟ್ಟದು ಎಂದರೆ ತುಂಬಾ ಪುಟ್ಟದು ಅಲ್ಲದ, ದೊಡ್ಡದು ಎನ್ನಲು ಮನಸೂ ಆಗದ ಊರು. ನೂರರ ಮೇಲೆ ಮತ್ತೊಂದಿಷ್ಟು ಮನೆಗಳು, ಅದರಲ್ಲಿ ಅರ್ಧ ಮನೆಗಳ ಬಾಗಿಲಿಗೆ ವರ್ಷದ ಮುನ್ನೂರು ದಿನಗಳಂತೂ ಪಕ್ಕಾ ಬೀಗ ಬಿದ್ದಿರುತ್ತದೆ. ಇನ್ನೂ ಅತ್ತ ಆಂಧ್ರದ ಗಡಿ ಇತ್ತ ಬಳ್ಳಾರಿ ಗಡಿ. ವಾತಾವರಣದ ಬಗ್ಗೆ ಹೆಚ್ಚಿನ ವಿವರಣೆ ಬೇಕಿಲ್ಲ ಅಲ್ಲವೇ. ಊರಿನ ಪಕ್ಕದಲ್ಲಿರುವ ನದಿ ಎನ್ನಲಾಗದೆ ಹಳ್ಳ ಎಂದು ಕರೆಯುವ ಅದರಲ್ಲಿ ನೀರು ಹರಿದೇ ಎಷ್ಟೋ ದಶಕಗಳು ಕಳೆದು ಬಿಟ್ಟಿವೆ. ಇಂತಹ ಸ್ಥಳದಲ್ಲಿಯೇ ಬಾಲ್ಯವೆಂಬ ಅದ್ಭುತವನ್ನು ನಾನು ಕಳೆದಿದ್ದು. ಚಿತ್ರದುರ್ಗ ಜಿಲ್ಲೆಗೆ ಸೇರಿದ ಬಳ್ಳಾರಿಯ ಬಗಲಲ್ಲಿ ಇರುವ ಈ ಪುಟ್ಟ ಊರಿನಲ್ಲೇ.
ಬಾಲ್ಯದ ದಿನಗಳಿಗೆ ತಕ್ಕಂತೆ ವಿಶಾಲವಾದ ಮನೆ, ಆ ಮನೆಯ ಜಾಗವೂ ಸಾಲದಷ್ಟು ಜನ. ಅಜ್ಜ, ಅಜ್ಜಿ, ಅಪ್ಪ, ಅಮ್ಮ ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ಅಕ್ಕ, ತಮ್ಮ , ತಂಗಿ ಇನ್ನೂ ಏನೇನೆಲ್ಲಾ ಸಂಬಂಧಗಳು ಇವೆಯೋ ಎಲ್ಲವೂ ಒಂದೇ ಸೂರಿನಡಿಯಲ್ಲಿ ಬದುಕಿನ ಬಂಡಿ ಎಳೆಯುತ್ತಿದ್ದೆವು.
ಮನೆಯ ಅಷ್ಟೂ ಹಿರಿಯರಿಗೆ ಸದಾ ಕೆಲಸ ಕೊಡುವಷ್ಟು ಮಕ್ಕಳಿದ್ದ ನಮ್ಮ ಮನೆಯಲ್ಲಿ, ನಮ್ಮ ಅಣ್ಣ - ಅಕ್ಕಂದಿರೇ ನಮಗೆ ಅಪ್ಪ ಅಮ್ಮನಂತೆ. ಏನಾದರೂ ತುಂಟಾಟ ಮಾಡಿ , ಜಗಳ ಮಾಡಿಕೊಂಡರೆ ಮೊದಲು ದೂರು ಮುಟ್ಟುತ್ತಿದ್ದದ್ದು ಅಕ್ಕನ ಬಳಿಯೇ. ಅಜ್ಜನ ಬಳಿ ದೂರು ಹೊದರೆ ಇಬ್ಬರಿಗೂ ಬಾರುಕೋಲಿನ ಏಟಿನ ರುಚಿ ಖಾಯಂ! ಇನ್ನು ಅಜ್ಜಿಯ ಬಳಿ ಹೋದರಂತೂ ಪಕ್ಕದ ಮೂರು ಮನೆಯವರು ಹಾಜರಾಗುವಂತೆ ತಮ್ಮ ಬಾಯಿ ಚಳಕ ತೋರಿಸಿ ಬಿಡುತ್ತಿದ್ದರು. ಇನ್ನು ಅಪ್ಪ, ದೊಡ್ಡಪ್ಪರ ಬಳಿ ಹೋದರೆ ಅವರು ನಮಗೆ ಬಯ್ಯುವ ಬದಲಿಗೆ ಅಣ್ಣ ಅಕ್ಕರಿಗೆ ಬೆವರಿಳಿಸುತ್ತಿದ್ದರಿಂದ ನಮ್ಮ ತುಂಟಾಟಗಳನ್ನು, ನಮ್ಮನ್ನು ನಿಭಾಯಿಸುವ ಹೊಣೆಯೂ ಅಕ್ಕ ಮತ್ತು ಅಣ್ಣನ ಹೆಗಲಿನ ಮೇಲೆ ಇರುತ್ತಿತ್ತು. ಬೆಳಗ್ಗೆ ನಮ್ಮನ್ನು ಎಬ್ಬಿಸಿ, ಸ್ನಾನ - ತಿಂಡಿಯ ಶಾಸ್ತ್ರ ಮುಗಿಸಿ, ಅವರ ಜೊತೆಯಲ್ಲೇ ಬಸ್ಸಿನಲ್ಲಿ ಪಕ್ಕದ ಊರಿನ ಶಾಲೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು, ಶಾಲೆಯಲ್ಲಿ ನಾವು ತುಂಟಾಟ ಮಾಡಿದರೆ ಮಾಸ್ತರರ ಕೈಯಲ್ಲಿ ಬೈಸಿಕೊಳ್ಳುವ ಭಾಗ್ಯವೂ ಅವರಿಗೆ ಸಿಗುತ್ತಿತ್ತು. ನಾವು ಗಲೀಜು ಮಾಡಿದರೆ ಅದನ್ನು ಸ್ವಚ್ಛ ಮಾಡುವುದೂ ಅವರೇ. ನಾವು ಶಾಲೆಯಲ್ಲಿ ಹೋಂವರ್ಕ್ ಮಾಡಿಲ್ಲವೆಂದರೆ ಮೊದಲು ದೂರು ಮುಟ್ಟುತ್ತಿದ್ದದ್ದೇ ಅಣ್ಣನಿಗೆ ಇಲ್ಲವೇ ಅಕ್ಕನಿಗೆ. ಹಾಗಾಗಿ ನಮ್ಮ ಪಾಲಿಗೆ ಅಪ್ಪ ಅಮ್ಮನನ್ನೂ ಮೀರಿಸಿ ಪೋಷಕರ ಪಾತ್ರವನ್ನು ಅವರು ಹೊತ್ತುಕೊಂಡು ಬಿಟ್ಟಿದ್ದರು.
ನಾವು ಶಾಲೆ ಬಿಟ್ಟು ಬರುವುದನ್ನೇ ಕಾಯುತ್ತಿದ್ದ ಅಜ್ಜಿ, ನಮಗೆಲ್ಲಾ ಒಂದು ದೊಡ್ಡ ತಟ್ಟೆಯಲ್ಲಿ ತಿಂಡಿ ಕೊಡುತ್ತಿದ್ದರು. ಹೂವಿನ ಮಕರಂದಕ್ಕೆ ಬರುವ ಜೇನಿನಂತೆ ನಾವೆಲ್ಲರೂ ಅದಕ್ಕೆ ಮುತ್ತಿಗೆ ಹಾಕುತ್ತಿದ್ದೆವು.
ನಂತರ ಆಟದ ಹೆಸರಿನಲ್ಲಿ ಊರಿಡೀ ಸುತ್ತಿ, ತಲೆಯಿಂದ ಬುಡದವರೆಗೂ ನಮ್ಮೂರಿನ ಕೆಂಪು ಮಣ್ಣಿನ ಹಿಂದೆ ನಾವುಗಳು ಮಾಯ. ನಮಗೆ ಮೆತ್ತಿದ್ದ ಮಣ್ಣನ್ನು ಮೂರು ಮೂರು ಬಾರಿ ತಿಕ್ಕಿ ತೊಳಿಯುವಷ್ಟರಲ್ಲಿ ನಮ್ಮಮ್ಮನಿಗೆ ಮೂರು ಜನ್ಮ ಹಿಂದಕ್ಕೂ - ಮುಂದಕ್ಕೂ ಹೋಗಿ ಬಂದಂತೆ ಆಗುತಿತ್ತು. ಅದು ನಮ್ಮ ಆಟದ ಮಹಿಮೆಯೋ ಅಥವಾ ನಮ್ಮೂರ ಮಣ್ಣಿನ ಗುಣವೋ ಇನ್ನೂ ಸರಿಯಾಗಿ ನನಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ಆ ಅವತಾರದಲ್ಲಿ ನಮ್ಮನ್ನು ಯಾರಾದರೂ ಅಪರಿಚಿತರು ನೋಡಿದ್ದಿದ್ದರೆ ದೇವರಾಣೆಗೂ ಅದು ನಾವು ಎಂದು ಕಂಡು ಹಿಡಿಯಲು ಸಾಧ್ಯವೇ ಇರುತ್ತಿರಲಿಲ್ಲ.
ಇನ್ನೂ ನಮ್ಮೂರಿನ ದಸರಾ. ನಮ್ಮೂರಿನಲ್ಲಿ ಯಾವುದಾದರೂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡ್ತಾರೆ ಅಂದ್ರೆ ಅದು ದಸರಾ ಮಾತ್ರ. ಊರಿನ ಕೊಂಡಿ ಕಳೆದುಕೊಂಡು ರಾಜ್ಯದ ಯಾವುದ್ಯಾವುದೋ ಮೂಲೆಯಲ್ಲಿ ಜೀವನ ತಳ್ಳುತ್ತಿರುವವರು ಕೂಡ ದಸರಾ ಸಮಯಕ್ಕೆ ಊರಿನಲ್ಲಿ ಹಾಜರಾಗಿರುತ್ತಾರೆ. ಆ ಸಮಯದಲ್ಲಂತೂ ನಮಗೆಲ್ಲಾ ಹೊಸ ಬಟ್ಟೆಯ ಸಂಭ್ರಮ! ಅಷ್ಟು ದಿನವೂ ನೋಡಿರದ ಮುಖಗಳೆಲ್ಲಾ ಎದುರಿಗೆ ಬಂದು ನಾನು ನಿನ್ನ ಚಿಕ್ಕಪ್ಪ, ಮಾವ , ಅತ್ತೆ ಎಂದು ಹೇಳಿಕೊಳ್ಳುತ್ತಿದ್ದರೆ ಅವರನ್ನು ನಾವು ಯಾವುದೊ ಅನ್ಯಗ್ರಹದ ಪ್ರಾಣಿಗಳಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಟ್ಟುಕೊಂಡು ನೋಡುತ್ತಿದ್ದೆವು.
ಅದರಲ್ಲೂ ನಮಗೆ ದಸರಾದಲ್ಲಿ ಮಜಾ ಎಂದರೆ ಬಯಲಾಟ. ಕರಾವಳಿ ಭಾಗದಲ್ಲಿ ಯಕ್ಷಗಾನದಂತೆ , ನಮ್ಮೂರಿನಲ್ಲಿ ಬಯಲಾಟ. ಊರ ಹೊರಗಿನ ಹೊಲದಲ್ಲಿ ಸೀರಿಯಲ್ ಸೆಟ್ಟಿನ ತರದ ಸ್ಟೇಜ್ ಮಾಡಿ, ಅದರ ಮೇಲೆ ಚಪ್ಪರ ಹಾಕಿ ಅಲಂಕಾರ ಮಾಡಿ, ಅದರ ಹಿಂದೆ ಚೌಕಿ ಮನೆ ಸಂಜೆಯ ವೇಳೆಗೆ ರೆಡಿಯಾಗಿರುತ್ತಿತ್ತು. ರಾತ್ರಿಯ ವೇಳೆಯಲ್ಲಿ ಬಣ್ಣ ಬಳಿದ ಬಯಲಾಟ ಕಲಾವಿದರು ಕುಣಿತ ಶುರು ಮಾಡಿದರೆ ನಾವುಗಳು ಯಾವುದೋ ಜಗದ್‌ವಿಸ್ಮಯವೇ ನಮ್ಮೆದುರು ನಡೆಯುತ್ತಿದೆಯೋ ಎನ್ನುವಂತೆ ಬಿಟ್ಟಗಣ್ಣುಗಳನ್ನು ಬಿಟ್ಟೇ ಇರುತ್ತಿದ್ದೆವು. ಇನ್ನೇನು ನಿದ್ದೆಯ ಮಂಪರು ಆವರಿಸಬೇಕು ಎನ್ನುವಷ್ಟರಲ್ಲಿಯೇ, ಸಭಿಕರ ಮಧ್ಯದಿಂದಲೇ ಭಯಂಕರ ಎಂಟ್ರಿ ಕೊಡುವ ರಾಕ್ಷಸರ ಪಾತ್ರಗಳಿಗೆ ಜೀವ ಬರುತ್ತಲೂ ನಮ್ಮ ನಿದ್ದೆ ಮಂಪರು ಹೋಗಿ, ಭಯದಲ್ಲಿ ಆಗಿದ್ದೂ ಒಂದೋ ಎರಡೂ ಎಂಬ ಪರಿವೆಯೇ ಇಲ್ಲದೇ ಮನೆಯ ಹಿತ್ತಲಿನ ಕಡೆಗೆ ಹನುಮಂತನಂತೆ ಹಾರಿಬಿಡುತ್ತಿದ್ದೆವು.
ನೋಡ ನೋಡುತ್ತಿದ್ದಂತೆ ಬಾಲ್ಯದ ತುಂಟಾಟಗಳಿಗೆ ವಿರಾಮ ಬಿತ್ತು. ಊರಿನ ಕಡೆ ಬೆನ್ನು ತಿರುಗಿಸಿ ಉನ್ನತ ಶಿಕ್ಷಣದ ಹೆಸರಿನಲ್ಲಿ ದೂರದೂರಿನಲ್ಲಿ ಏನೋ ದಬಾಕ್ತಿವಿ ಅಂತ ಬಂದ ನಮಗೆ, ಒಮ್ಮೆ ಊರಿನ ನೆನಪಾದರೆ ಸಾಕು, ಬಾಲ್ಯ ಅನ್ನೊದು ಬಾಲ್ಯದಲ್ಲಿ ನಾವು ಹಳಿಯಿಲ್ಲದೆ ಬಿಟ್ಟ ರೈಲಿನಂತೆ ಕಣ್ಮುಂದೆ ಸಾಗಿಬಿಡುತ್ತದೆ...!
(ಲೇಖಕರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಅಂತಿಮ ವರ್ಷದ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿ.)