-ಇಂದುಧರ ಹಳೆಯಂಗಡಿ
ಅದೊಂದು ಕಾಲವಿತ್ತು. ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಎಂಬಂತಿತ್ತು. ಆದರೆ ಕಾಲಕ್ರಮೇಣ ತೆಲುಗು, ತಮಿಳು ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗೆ ಭಾರೀ ಪೈಪೋಟಿ ನೀಡಲಾರಂಭಿಸಿದವು. ಬಾಹುಬಲಿ ಸಿನಿಮಾ ಇಡೀ ಜಗತ್ತಿನ ಸಿನಿಪ್ರಿಯರನ್ನು ದಕ್ಷಿಣ ಭಾರತೀಯ ಸಿನಿಮಾಗಳತ್ತ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಅಲ್ಲ ಎಂಬುವುದನ್ನು ಬಾಹುಬಲಿ ಸಾರಿತ್ತು.
ತೆಲುಗು, ತಮಿಳು ಚಿತ್ರರಂಗ ವೇಗವಾಗಿ ಬೆಳೆಯುತ್ತಿದ್ದರೂ ಸಹ, ಕನ್ನಡ ಸಿನಿಮಾ ಎಂದರೆ ಅದು ಕರ್ನಾಟಕಕ್ಕೇ ಸೀಮಿತವಾಗಿತ್ತು. ವರ್ಷಂಪ್ರತಿ 200ಕ್ಕೂ ಅಧಿಕ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆ ಆಗುತ್ತಿದ್ದರೂ, ನಾಲ್ಕೈದು ಸಿನಿಮಾಗಳು ಗೆದ್ದರೆ ಅದೇ ದೊಡ್ಡದು. ಯಾವುದಾದರೂ ಸಿನಿಮಾಗೆ ಹೊರ ದೇಶ, ಹೊರ ರಾಜ್ಯಗಳಲ್ಲಿ ಒಂದಷ್ಟು ಶೋಗಳು ಸಿಕ್ಕರೆ ಅದೇ ಭಾರೀ ದೊಡ್ಡ ಸಂಭ್ರಮ. ಆದರೆ ಎಲ್ಲರನ್ನೂ ಕನ್ನಡ ಸಿನಿಮಾಗಳತ್ತ ಆಕರ್ಷಿಸಿದ್ದು ಕೆಜಿಎಫ್. 2019ರಲ್ಲಿ ಬಿಡುಗಡೆಯಾದ ಸಿನಿಮಾಗೆ ಭಾರೀ ದೊಡ್ಡ ಯಶಸ್ಸು ಸಿಕ್ಕಿದ್ದು ಮಾತ್ರವಲ್ಲದೇ, ಕೆಜಿಎಫ್ ಚಾಪ್ಟರ್ 2 ಗೆ ಜನರು ಬಹಳ ನಿರೀಕ್ಷೆಯಿಂದ ಕಾಯುವಂತೆ ಮಾಡಿತ್ತು. 2022ರಲ್ಲಿ ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಸಾವಿರ ಕೋಟಿ ಗಳಿಕೆ ಮಾಡಿ, ಕನ್ನಡ ಚಿತ್ರರಂಗವನ್ನು ಜಗತ್ತಿನ ಸಿನಿಮಾದ ಭೂಪಟದಲ್ಲಿ ತಲೆಯೆತ್ತಿ ನಿಲ್ಲಿಸಿತು. 100 ದಿನಗಳು ಪೂರೈಸಿದರೆ ಮಾತ್ರ ಸಿನಿಮಾ ಗೆದ್ದಂತೆ ಎಂಬ ದಿನಗಳು ಇಂದು ಇಲ್ಲ. ಬದಲಾಗಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುವುದರ ಮೇಲೆ ಸಿನಿಮಾದ ಯಶಸ್ಸು ನಿಂತಿದೆ.
2022 – ಸ್ಯಾಂಡಲ್‌ವುಡ್‌ನಲ್ಲಿ ಬದಲಾವಣೆಯ ಪರ್ವ:
2018ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1 ಸಿನಿಮಾ 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಬರೆದಿತ್ತು. ಆ ಬಳಿಕ ಯಾವ ಕನ್ನಡ ಸಿನಿಮಾ ಸಹ ಶತಕೋಟಿ ಕಲೆಕ್ಷನ್ ಗಳಿಸಲಿಲ್ಲ. ಆದರೆ 2022 ರ ಒಂದೇ ವರ್ಷ 5 ಸಿನಿಮಾಗಳು 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದು, ಕನ್ನಡ ಸಿನಿಮಾರಂಗದ ಹೊಸ ಮೈಲಿಗಲ್ಲು ಅಂದರೂ ತಪ್ಪಾಗಲಿಕ್ಕಿಲ್ಲ. ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ (105 ಕೋಟಿ), ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ (150 ಕೋಟಿ), ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ (158 ಕೋಟಿ), ರಿಷಭ್ ಶೆಟ್ಟಿ ಅಭಿನಯದ ಕಾಂತಾರ (ರೂ. 450 ಕೋಟಿ) ಹಾಗೂ ಕೆಜಿಎಫ್ ಚಾಪ್ಟರ್ 2 (ರೂ. 1,200 ಕೋಟಿ ರೂಪಾಯಿ) ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದವು. ಅದಲ್ಲದೇ 2023 ರಲ್ಲೂ ಮತ್ತಷ್ಟು ಸಿನಿಮಾಗಳು ಈ ಪಟ್ಟಿ ಸೇರುವ ನಿರೀಕ್ಷೆಯೂ ಇದೆ.
ಕಂಟೆಂಟೇ ಕಿಂಗ್ ಗುರೂ:
2022ರ ವರೆಗೂ ಕನ್ನಡ ಸಿನಿಮಾರಂಗ ಬದಲಾವಣೆಗೆ ಮುಂದಾಗಿದ್ದೇ ಇಲ್ಲ. ಅದೇ ಹೀರೋ, ವಿಲನ್, ಒಂದೆರಡು ಕುಟುಂಬ, ಅಲ್ಲೊಬ್ಬಳು ಹೀರೋಯಿನ್ನು ಇದರ ನಡುವೆಯೇ ಸಿನಿಮಾ ಕಥೆ. ಬಹುತೇಕ ಸಿನಿಮಾಗಳು ಹೀಗೆ ಇರುತ್ತಿದ್ದವು. ಹಾಗಂತ ಹೊಸ ಅಲೆ ಸೃಷ್ಟಿಸಲು ಒಂದಷ್ಟು ಸಿನಿಮಾಗಳು ಯತ್ನಿಸಿದರೂ, ಅವು ನಿರೀಕ್ಷಿತ ಫಲಿತಾಂಶ ಗಳಿಸಲು ಯಶಸ್ವಿಯಾಗಿರಲಿಲ್ಲ. ಈ ಥಿಯರಿ ಹೊರತಾದ ಸಿನಿಮಾಗಳು ಬಿಡುಗಡೆ ಆಗುತ್ತಿದ್ದರೂ ಸಹ ಅವು ಯಶಸ್ಸು ಕಾಣುತ್ತಿರಲಿಲ್ಲ. ಕಾರಣ, ಸಿನಿಮಾಗಳಲ್ಲಿ ಯಾವುದೇ ದೊಡ್ಡ ನಟರು ಇರುತ್ತಿರಲಿಲ್ಲ. ಆದರೆ ೨೦೨೨ ರಲ್ಲಿ ಜನಪ್ರಿಯ ನಟರೇ ವಿಭಿನ್ನ ಕಥಾಹಂದರ ಇರೋ ಸಿನಿಮಾಗಳಲ್ಲಿ ಕಾಣಿಸತೊಡಗಿದರು. ಸಾಮಾನ್ಯವಾಗಿ ಯೂಟ್ಯೂಬರ್‌ಗಳು ಹೇಳೋ ಮಾತು – “ಕಂಟಂಟೇ ಕಿಂಗು”. ಯಾರು ವೀಡಿಯೋ ಮಾಡುತ್ತಾರೆ ಅನ್ನೋದು ಮ್ಯಾಟರ್ ಆಗೋದೇ ಇಲ್ಲ. ಹೊಸ ಹೊಸ ಶೈಲಿಯ ಕಂಟೆಂಟ್ ಬಂದ್ರೆ ಗೆಲುವು ಗ್ಯಾರಂಟಿ ಅನ್ನೋದು ಅವರ ವಾದ. ಇದೇ ಥಿಯರಿ ಕನ್ನಡ ಸಿನಿಮಾರಂಗದಲ್ಲಿ ಅಳವಡಿಕೆ ಆದ್ದರಿಂದ ಇಂದು ಸ್ಯಾಂಡಲ್‌ವುಡ್ ವಿಶಾಲವಾಗಿ ಬೆಳೆದುನಿಂತಿದೆ. ಆ್ಯಕ್ಷನ್, ಥ್ರಿಲ್ಲರ್ ಸಿನಿಮಾಗಳು ಮಾತ್ರ ಕೋಟಿ ಕೋಟಿ ಬಾಚುತ್ತವೆ ಅನ್ನೋದನ್ನು ಸುಳ್ಳಾಗಿಸಿದ್ದು 777 ಚಾರ್ಲಿ ಸಿನಿಮಾ. ಇನ್ನು ಸಣ್ಣ ಬಜೆಟ್‌ನಲ್ಲಿಯೇ ಭರ್ಜರಿ ಲಾಭ ಮಾಡಬಹುದು ಎಂಬುದನ್ನು ಸಾಬೀತು ಮಾಡಿದ್ದು ಕಾಂತಾರ ಸಿನಿಮಾ.
ಅದಿರಲಿ, ನೂರಾರು ಕೋಟಿ ಬಾಚದಿದ್ದರೂ, 2022ರಲ್ಲಿ ಬಿಡುಗಡೆಯಾದ ಲವ್ ಮಾಕ್ಟೇಲ್ 2, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಮ್ಯಾನ್ ಆಫ್ ದಿ ಮ್ಯಾಚ್, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಗಾಳಿಪಟ 2, ಮಾನ್ಸೂನ್ ರಾಗ, ಗುರು ಶಿಷ್ಯರು, ಗಂಧದ ಗುಡಿ, ಬನಾರಸ್, ಹೆಡ್ಬುಶ್, ವಿಜಯಾನಂದ ಇತ್ಯಾದಿ ಸಿನಿಮಾಗಳು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಯಶಸ್ಸು ಗಳಿಸಿವೆ.
ಒಟಿಟಿಗಳ ಕೊಡುಗೆ ಅಪಾರ!
ಕೆಲವೊಂದು ಸಿನಿಮಾಗಳು ಥಿಯೇಟರ್‌ನಿಂದ ಬೇಗನೇ ಜಾಗ ಖಾಲಿ ಮಾಡಿದರೂ ಸಹ ಒಟಿಟಿಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿವೆ. ಲವ್ ಮಾಕ್ಟೇಲ್ ಹಾಗೂ ದಿಯಾ ಸಿನಿಮಾ ಉತ್ತಮ ಉದಾಹರಣೆಗಳು. ಲವ್ ಮಾಕ್ಟೇಲ್ ಸಿನಿಮಾಕ್ಕೆ ಒಟಿಟಿಯಲ್ಲಿ ಸಿಕ್ಕ ಯಶಸ್ಸಿನಿಂದಾಗಿಯೇ, ಅದರ ಎರಡನೇ ಭಾಗ ಸಿದ್ಧವಾಗಿ ತೆರೆಗೆ ಬಂದಿತ್ತು. ಅದಲ್ಲದೇ ಹಲವು ಹೊಸಬರ ಸಿನಿಮಾಗಳಿಗೆ ಒಟಿಟಿ ಹೊಸ ಭರವಸೆಯನ್ನು ನೀಡಿದೆ. ಒಟಿಟಿ ವೇದಿಕೆಗಳ ನಡುವೆಯೇ ಪೈಪೋಟಿ ಇರುವುದರಿಂದ ಒಬ್ಬರಲ್ಲ ಇನ್ನೊಬ್ಬರು ಸಿನಿಮಾವನ್ನು ಖರೀದಿಸುತ್ತಿದ್ದಾರೆ. ಝೀ5, ವೂಟ್ ಹಾಗೂ ಅಮೇಜಾನ್ ಪ್ರೈಮ್ – ಈ ಮೂರರ ಪೈಕಿ ಒಂದರಲ್ಲಾದರೂ ಸ್ಥಾನ ಸಿಕ್ಕೇ ಸಿಗುತ್ತದೆ ಅನ್ನೋ ವಿಶ್ವಾಸ ಸಿನಿಮಾ ತಯಾರಕರಿಗಿದೆ.
ಸಮಸ್ಯೆಯೂ ಇದೆ!
ಕನ್ನಡ ಸಿನಿಮಾಗಳು ಗೆಲುವಿನ ನಾಗಾಲೋಟ ಮುಂದುವರೆಸಿದರೂ, ಒಂದಷ್ಟು ಸಮಸ್ಯೆಗಳು ಅದನ್ನು ಬಹಳಷ್ಟು ಕಾಡುತ್ತಿವೆ. ಅದರಲ್ಲಿ ಪ್ರಮುಖವಾದವು ಎಂದರೆ ಥಿಯೇಟರ್ ಹಾಗೂ ನಿರ್ಮಾಪಕರ ಸಮಸ್ಯೆ. ಒಂದೊಳ್ಳೆ ಕಥೆ ಸಿದ್ಧವಿದ್ದರೂ, ಅದಕ್ಕೆ ಸೂಕ್ತ ಬಂಡವಾಳ ಹಾಕುವ ನಿರ್ಮಾಪಕರು ಸಿಗುತ್ತಿಲ್ಲ. ಕೆಲವೆಡೆ ಸಿಕ್ಕರೂ, ಕಥೆಯನ್ನು ಒಂಚೂರು ತಿರುಚುವಂತೆ ಕೇಳುವುದು ಸೇರಿದಂತೆ ಅವರದ್ದೂ ಕೆಲವು ಡಿಮ್ಯಾಂಡ್‌ಗಳು ಮೂಲ ಕಥೆಗಳನ್ನೇ ಹಾಳುಗೆಡವುತ್ತಿವೆ. ಅದಲ್ಲದೇ, ದೊಡ್ಡ ನಟರಿಲ್ಲದ ಸಿನಿಮಾಗಳನ್ನು ನಿರ್ಮಾಣ ಮಾಡಲು ಹಲವು ನಿರ್ಮಾಪಕರು ಒಪ್ಪುತ್ತಿಲ್ಲ, ಕಾರಣ ರಿಟರ್ನ್ಸ್ ಗ್ಯಾರಂಟಿ ಇಲ್ಲ ಎಂದು. ಹಾಕಿದ ಬಂಡವಾಳ ಹಿಂದೆ ಸಿಗದೇ ಇರೋದಿಕ್ಕೆ ಕಾರಣ ಥಿಯೇಟರ್‌ಗಳ ಕೊರತೆ. ಹಾಗಂತ ಬಹಳ ಕಡಿಮೆ ಎಂದೇನಿಲ್ಲ, ಬದಲಿಗೆ ಒಬ್ಬ ಜನಪ್ರಿಯ ಸ್ಟಾರ್ ನಟನ ಸಿನಿಮಾ ತೆರೆಕಂಡಾಗ, ಎಲ್ಲ ಕಡಿಮೆ ಬಜೆಟ್ ಸಿನಿಮಾಗಳನ್ನು ಥಿಯೇಟರ್‌ನಿಂದ ತೆಗೆದುಹಾಕಲಾಗುತ್ತದೆ. ಹೀಗಿರುವಾಗ, ಜನರಿಂದ ಉತ್ತಮ ಸ್ಪಂದನೆ ಸಿಕ್ಕರೂ, ಥಿಯೇಟರ್ ಸಿಗದೇ ಒಂದಷ್ಟು ಸಿನಿಮಾಗಳು ಪರದಾಡುತ್ತಿರುತ್ತವೆ.
ಇದೆಲ್ಲವುದರ ನಡುವೆ 2023ರ ಹೊಸ ವರ್ಷ, ಕೆಜಿಎಫ್, ಕಾಂತಾರದಂತಹ ಬಿಗ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಅವರ ಒಂದು ಪ್ರತಿಜ್ಞೆ ಹೊಸ ಭರವಸೆಯನ್ನು ಮೂಡಿಸಿದೆ. ಮುಂದಿನ 5 ವರ್ಷಗಳಲ್ಲಿ 3000 ಕೋಟಿ ರೂಪಾಯಿಗಳನ್ನು ಮನೋರಂಜನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ನಿರ್ಮಾಣ ಸಂಸ್ಥೆಯ ವಿಜಯ್ ಕಿರಗಂದೂರು ಘೋಷಿಸಿದ್ದು, ಹೊಸ ಮುಖಗಳಿಗೂ ಆಶಾಭಾವನೆ ನೀಡಿದೆ ಅನ್ನಬಹುದು. ಹೀಗೆ ಮುಂದೆಯೂ ಬೇರೆ ಬೇರೆ ನಿರ್ಮಾಣ ಸಂಸ್ಥೆಗಳು ಹೊಸ ಪ್ರತಿಭೆಗಳಿಗೆ, ಹೊಸ ಕಥೆಗಳಿಗೆ ಮನ್ನಣೆ ಹಾಗೂ ಬೆಂಬಲ ನೀಡಿದಾಗ ಕನ್ನಡ ಚಿತ್ರರಂಗ ಇನ್ನಷ್ಟು ಬೃಹದಾಕಾರವಾಗಿ ಬೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.
(ಲೇಖಕರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಹವ್ಯಾಸಿ ಬರಹಗಾರರು)