ಮುಂದಿನ ದಿನಗಳಲ್ಲಿ ಉನ್ನತ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆ ಮತ್ತಷ್ಟು ಜನಪ್ರಿಯಗೊಳ್ಳಲಿದೆ. ಬ್ಲಾಕ್‌ಚೈನ್ ತಂತ್ರಜ್ಞಾನದ ಇತಿಹಾಸ, ವಿವಿಧ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನದ ಬಳಕೆ ಹೇಗೆ?, ಉದ್ಯೋಗಗಳನ್ನು ಪಡೆಯಲು ಬೇಕಾದ ಕೌಶಲ್ಯಗಳು ಹಾಗೂ ಉದ್ಯೋಗಾವಕಾಶಗಳ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 

-ಡಾ. ಉದಯ ಶಂಕರ ಪುರಾಣಿಕ
ಬ್ಲಾಕ್‌ಚೈನ್ ತಂತ್ರಜ್ಞಾನ ಇಂದು ದಿನದಿಂದ ದಿನಕ್ಕೆ ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವ ಬಹುಪಯೋಗಿ ತಂತ್ರಜ್ಞಾನವಾಗಿದೆ. ಬ್ಲಾಕ್‌ಚೈನ್ ಎಂದರೆ ಬಿಟ್‌ಕಾಯಿನ್‌ಗೆ ಮಾತ್ರ ಸೀಮಿತವೆನ್ನುವ ತಪ್ಪು ಕಲ್ಪನೆಯಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಂಕ್ಷಿಗಳು ಹೊರಬರುವುದು ಅತ್ಯಗತ್ಯವಾಗಿದೆ.

ಬಹುಪಯೋಗಿ ಬ್ಲಾಕ್‌ಚೈನ್ ತಂತ್ರಜ್ಞಾನದ ಸಂಕ್ಷಿಪ್ತ ಇತಿಹಾಸವನ್ನು ನೋಡುವುದಾದರೆ,

ಬ್ಲಾಕ್‌ಚೈನ್ ಆವೃತ್ತಿ 1.0: ಈ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು 2009ರಲ್ಲಿ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿ ಹಾಗೂ ನಗದುರಹಿತ ವ್ಯವಹಾರಗಳಲ್ಲಿ ಬಳಸಲಾಯಿತು.

ಬ್ಲಾಕ್‌ಚೈನ್ ಆವೃತ್ತಿ 2.0: ಈ ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಸ್ಮಾರ್ಟ ಕಾಂಟ್ರಾಕ್ಟ್ ಸೌಲಭ್ಯವನ್ನು ನೀಡಲಾಯಿತು.

ಬ್ಲಾಕ್‌ಚೈನ್ ಆವೃತ್ತಿ 3.0: ಡಿಆಪ್ಸ್ (ವಿಕೇಂದ್ರಿಕೃತವಾದ ಅನ್ವಯಿಕ ತಂತ್ರಾಂಶಗಳು) ಸೌಲಭ್ಯವನ್ನು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ನೀಡಲಾಯಿತು.

ಬ್ಲಾಕ್‌ಚೈನ್ ಆವೃತ್ತಿ 4.0: ರಿಯಲ್‌ಟೈಮ್ ಅನ್ವಯಿಕ ತಂತ್ರಾಂಶಗಳು ಮತ್ತು ಐಓಟಿ 4.0 ತಂತ್ರಜ್ಞಾನಕ್ಕೆ ಪೂರಕವಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಲು ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ಬ್ಲಾಕ್‌ಚೈನ್ ಆವೃತ್ತಿ 5.0 ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ. ಇದುವರೆಗಿನ ಬ್ಲಾಕ್‌ಚೈನ್ ತಂತ್ರಜ್ಞಾನ ಆವೃತ್ತಿಗಳಿಗಿಂತ, ಬ್ಲಾಕ್‌ಚೈನ್ ಆವೃತ್ತಿ 5.0 ಹೆಚ್ಚು ಸಮರ್ಥವಾಗಿರಲಿದ್ದು, ನೆಟ್‌ವರ್ಕ್ ವೆಚ್ಚವನ್ನು ಕಡಿಮೆಯಾಗಿಸುವ ನಿರೀಕ್ಷೆ ಇದೆ. ಉನ್ನತ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳಲ್ಲಿ ಈ ಆವೃತ್ತಿಯ ಬಳಕೆ ಜನಪ್ರಿಯವಾಗುತ್ತದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಡುತ್ತಾರೆ.

ವಿವಿಧ ಕ್ಷೇತ್ರಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ:
1] ವಿಶ್ವದಾದ್ಯಂತ ವಜ್ರಗಳ ವ್ಯಾಪಾರದಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ ಮಹತ್ವದ ಪಾತ್ರವಹಿಸುತ್ತಿದೆ. ವಜ್ರಗಳ ಗಣಿಗಳಿಗಿಂದ ಹಿಡಿದು ವಜ್ರಗಳು ಮತ್ತು ವಜ್ರಖಚಿತ ಆಭರಣಗಳನ್ನು ಮಾರಾಟ ಮಾಡುವ ವಾಣಿಜ್ಯ ಮಳಿಗೆಗಳವರೆಗೂ, ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಹೈಪರ್‌ಲೆಡ್ಜರ್ ತಂತ್ರಜ್ಞಾನವನ್ನು ಬಳಸಿ ಎವರ್‌ಲೆಡ್ಜರ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದ, ವಜ್ರಗಳ ವ್ಯಾಪಾರದಲ್ಲಿ ಮೋಸ ಮತ್ತು ಅನಧಿಕೃತ ವ್ಯವಹಾರವನ್ನು ತಕ್ಷಣ ಗುರುತಿಸಲು ಸಾಧ್ಯವಾಗುತ್ತಿದೆ. ಮಾರ್ಚ್ 2018ರಲ್ಲಿ ವಿಶ್ವದಲ್ಲಿ ಅಸಲಿ ವಜ್ರಗಳೆಂದು ಪ್ರಮಾಣೀಕೃತವಾದ 2 ಕೋಟಿ 20 ಲಕ್ಷ ವಜ್ರಗಳ ಸಮಗ್ರ ವಿವರಗಳನ್ನು ಈ ಬ್ಲಾಕ್‌ಚೈನ್ ಆಧಾರಿತ ವ್ಯವಸ್ಥೆಯಲ್ಲಿ ದಾಖಲು ಮಾಡಲಾಗಿತ್ತು. ನಂತರದ ಪ್ರತಿ ತಿಂಗಳು ಸರಾಸರಿ ಒಂದು ಲಕ್ಷ ಅಸಲಿ ಮತ್ತು ಪ್ರಮಾಣೀಕೃತ ವಜ್ರಗಳ ಮಾಹಿತಿಯನ್ನು ಈ ವ್ಯವಸ್ಥೆಯಲ್ಲಿ ದಾಖಲು ಮಾಡಲಾಗುತ್ತಿದೆ. ಹೀಗೆ ಅಸಲಿ ಮತ್ತು ಪ್ರಮಾಣಿಕೃತ ವಜ್ರಗಳ ಮಾಹಿತಿ ಒಂದು ಕಡೆ ದೊರೆಯುವುದರಿಂದ, ವಜ್ರಗಳ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಸಹಾಯವಾಗುತ್ತಿದೆ. ಯಾವ ವಜ್ರವನ್ನು ಯಾವ ವರ್ಷದಲ್ಲಿ ಯಾವ ದೇಶದ ಗಣಿಯಿಂದ ಹೊರತಗೆಯಲಾಯಿತು ಎನ್ನುವುದರಿಂದ ಈ ವಜ್ರ ಅಥವಾ ವಜ್ರಖಚಿತ ಆಭರಣ ಮಾರಾಟವಾಗುವ ಮಳಿಗೆಗೆ ಹೇಗೆ ತಲುಪಿತು ಎನ್ನುವ ಸಮಗ್ರ ವಿವರಗಳನ್ನು ಪಡೆಯಲು ಸಾಧ್ಯವಾಗುವುದರಿಂದ, ನಕಲಿ ಅಥವಾ ಕಳಪೆ ಗುಣಮಟ್ಟದ ವಜ್ರಗಳನ್ನು ಮಾರಾಟ ಮಾಡುವುದಕ್ಕಾಗಲಿ ಅವಕಾಶವಿರುವುದಿಲ್ಲ. ಇದಲ್ಲದೆ, ಕೆಲವು ಅಪರಾಧಿ ಮಾಫಿಯಾ ಮತ್ತು ಭಯೋತ್ಪಾದಕ ಸಂಘಟನೆಗಳು, ಅನಧಿಕೃತವಾಗಿ ವಜ್ರಗಳ ಮಾರಾಟ ಮಾಡುವುದನ್ನು ಗುರುತಿಸಿ, ಇಂತಹ ವ್ಯಾಪಾರವನ್ನು ಹತ್ತಿಕ್ಕಲು ಪೋಲಿಸರಿಗೆ ಸಹಾಯವಾಗುತ್ತಿದೆ. 

2] ವಾಣಿಜ್ಯ ಹಡಗು ಉದ್ಯಮದಲ್ಲಿ ಅಗ್ರಸ್ಥಾನದಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆ ಮರ್ಕ, ತನ್ನ ದೈನಂದಿನ ವಹಿವಾಟಿನಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಲಾರಂಭಿಸಿದೆ. ಮೊದಲು ಈ ಸಂಸ್ಥೆಯು ಸರಕು ಸಾಗಾಣಿಕೆಗೆ ಬಳಸುವ ನೂರಾರು ಹಡಗುಗಳ ವಿಮೆ ಪಾಲಿಸಿ ನಿರ್ವಹಣೆಗಾಗಿ ಯಶಸ್ವಿಯಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿತು. ನಂತರ ವಿಶ್ವದಾದ್ಯಂತ ಸರಕು ಸಾಗಾಣಿಕೆ, ದಾಸ್ತಾನು ಮತ್ತು ಬಂದರು ಚಟುವಟಿಕೆಗಳನ್ನು ಕೂಡಾ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿ ಮಾಡಲು ಮರ್ಕ ಸಂಸ್ಥೆಯು, ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯೊಂದರ ಜೊತೆಯಲ್ಲಿ ಕೆಲಸ ಮಾಡುತ್ತಿದೆ. ಗ್ರಾಹಕರು, ಹಡಗು ಸಂಸ್ಥೆಗಳು, ವಿಮಾ ಸಂಸ್ಥೆಗಳು, ಸರಕು ನಿರ್ವಹಣೆ ಸಂಸ್ಥೆಗಳು, ಸರಕು ಸಾಗಾಣಿಕೆ ಮತ್ತು ದಾಸ್ತಾನು ಸಂಸ್ಥೆಗಳು, ಹೀಗೆ ಪ್ರತಿಯೊಂದು ಸಂಸ್ಥೆ ಜೊತೆಗೂಡಿ, ಪಾರದರ್ಶಕವಾಗಿ ವ್ಯವಹರಿಸಲು ಬ್ಲಾಕ್‌ಚೈನ್ ತಂತ್ರಜ್ಞಾನ ಸಹಾಯ ಮಾಡುತ್ತಿದೆ. ಅಪನಂಬಿಕೆ, ವಂಚನೆ, ವಿಳಂಬ ಮೊದಲಾದ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ವಿಶ್ವಾದಂತ್ಯ ಈ ಉದ್ಯಮವನ್ನು ನಡೆಸಲು ಬ್ಲಾಕ್‌ಚೈನ್ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

3] ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೂಡಾ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ಉದಾಹರಣೆಗೆ ರೋಗ ನಿಯಂತ್ರಣ ಮತ್ತು ತಡೆಗಟ್ಟಿವಿಕೆಗೆ ಮೀಸಲಾದ ಸಿಡಿಸಿ ಸಂಸ್ಥೆಯು ಸಾರ್ವಜನಿಕರಿಗೆ ಅಗತ್ಯ ನೆರವು ಮತ್ತು ಜಾಗೃತಿಯನ್ನುಂಟು ಮಾಡಲು ಬ್ಲಾಕ್‌ಚೈನ್ ಆಧಾರಿತ ತಂತ್ರಾಂಶಗಳನ್ನು ಬಳಸುತ್ತಿದೆ. ಡೆಂಗ್ಯೂ, ಮಲೇರಿಯಾ, ಕಾಲರಾ ಮೊದಲಾದ ರೋಗಗಳು ಬಾರದಂತೆ ಏನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಯೋಜನೆಗಳನ್ನು ಈ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸುವುದರಿಂದ ಈ ಯೋಜನೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಈ ಯೋಜನೆಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಅಥವಾ ಸಾರ್ವಜನಿಕರಲ್ಲಿ ಜಾಗೃತಿಯನ್ನುಂಟು ಮಾಡಲು ವಿಫಲವಾಗಿವೆ ಎಂದು ತಿಳಿಯಲು ಸಹಾಯವಾಗುತ್ತಿದೆ. ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ ಭ್ರಷ್ಟಾಚಾರ ಮತ್ತು ತಪ್ಪು ಮಾಹಿತಿಯ ಬಳಕೆಯನ್ನು ತಡೆಯಲು ಸಾಧ್ಯವಾಗುತ್ತಿದೆ. 

ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ಪ್ರಾಜೆಕ್ಟ್ಗಳಲ್ಲಿ ಮಾಹಿತಿ ತಂತ್ರಜ್ಞಾನ ಸಂಬಂಧಿಸಿದ ಉದ್ಯೋಗಗಳನ್ನು ಪಡೆಯಲು ಕೆಲವು ಕೌಶಲ್ಯಗಳು ಸಹಾಯ ಮಾಡುತ್ತವೆ. 

1) ಬ್ಲಾಕ್‌ಚೈನ್ ತಂತ್ರಜ್ಞಾನ ಕುರಿತು ತಿಳಿದುಕೊಂಡಿರುವುದು ಅತ್ಯಗತ್ಯವಾಗಿದೆ. ಉದಾಹರಣೆಗೆ ವಿಕೇಂದ್ರಿಕೃತ ಆನ್ವಯಿಕ ತಂತ್ರಾಂಶಗಳು, ಸ್ಮಾರ್ಟ ಕಾಂಟ್ರಾಕ್ಟ್ಗಳು, ಕ್ರಿಪ್ಟೋಕರೆನ್ಸಿ ಮೊದಲಾದ ವಿಷಯಗಳನ್ನು ಕುರಿತು ಗೊತ್ತಿರುವುದು ಅಗತ್ಯವಿದೆ.

2) ಸಿ++, ಸಾಲಿಡಿಟಿ ಮೊದಲಾದ ಪ್ರೋಗ್ರಾಮಿಂಗ್ ತಂತ್ರಜ್ಞಾನಗಳಲ್ಲಿ ಅಗತ್ಯ ಕೌಶಲ್ಯ ಮತ್ತು ಅನುಭವ ಹೊಂದಿರುವುದು ಅಗತ್ಯವಿದೆ.

3) ಬ್ಲಾಕ್‌ಚೈನ್‌ನಲ್ಲಿ ಮಾಹಿತಿ ಸುರಕ್ಷತಗೆ ಅದ್ಯತೆ ನೀಡಲಾಗುತ್ತಿದೆ. ಹೀಗಾಗಿ ಕ್ರಿಪ್ಟೋಗ್ರಾಫಿ, ಡೇಟಾ ಸೆಕ್ಯೂರಿಟಿ, ಡೇಟಾ ಸ್ಟ್ರಕ್ಚರ್ಸ್ ಮೊದಲಾದ ವಿಷಯಗಳಲ್ಲಿ ಕೌಶಲ್ಯ ಹೊಂದಿರುವುದು ಅವಶ್ಯವಾಗಿದೆ.

4) ಉದ್ಯಮಗಳು, ಬ್ಯಾಂಕುಗಳು, ವಾಣಿಜ್ಯ ಸಂಸ್ಥೆಗಳು, ಮೊದಲಾದ ಕ್ಷೇತ್ರಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಲು, ಈ ಉದ್ಯಮಗಳು ಹೇಗೆ ಕೆಲಸ ಮಾಡುತ್ತವೆ ಎಂದು ಆಳವಾದ ಅರಿವು ಇರುವುದು ಅಗತ್ಯವಿದೆ. 

5) ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ಅಗತ್ಯ ಅನುಭವ ಹೊಂದಿರುವ ತಂತ್ರಜ್ಞರ ಕೊರತೆ ಇದೆ. ಹೀಗಾಗಿ ಹಲವಾರು ಬಾರಿ ಕಡಿಮೆ ಅನುಭವ ಅಥವಾ ಅನುಭವ ಇಲ್ಲದ ತಂತ್ರಜ್ಞರ ಜೊತೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿರ್ದಿಷ್ಟ ಸಮಯದಲ್ಲಿ, ಗುಣಮಟ್ಟದ ಬ್ಲಾಕ್‌ಚೈನ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸವಾಗುತ್ತದೆ. ಇಂತಹ ವೃತ್ತಿಪರ ಸವಾಲುಗಳನ್ನು ಎದುರಿಸಿ, ಯಶಸ್ವಿಯಾಗಲು ಅಗತ್ಯವಾದ ನಾಯಕತ್ವ, ಸಂವಹನ ಕೌಶಲ್ಯಗಳನ್ನು ಹೊಂದಿರುವುದು ಅಗತ್ಯವಾಗಿದೆ.

ಉದ್ಯೋಗಾವಕಾಶ:
ಇಂಜಿನಿಯರಿಂಗ್ ಪದವಿ ಹೊಂದಿಲ್ಲದರಿಗೂ ಬ್ಲಾಕ್‌ಚೈನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ಲಭ್ಯವಿದೆ. ಉದಾಹರಣೆಗೆ ತ್ರಿಪಲ್ ಎಂಟ್ರಿ ಅಕೌಟಿಂಗ್ ಕೌಶಲ್ಯ ಹೊಂದಿರುವವರಿಗೆ ಬೇಡಿಕೆ ಇದೆ. ಮ್ಯಾನೇಜ್‌ಮೆಂಟ್ ಪದವಿ ಪಡೆದವರಿಗೂ ಹೊಸ ಉದ್ಯೋಗವಕಾಶಗಳು ದೊರೆಯುತ್ತಿವೆ. ದೇಶವಿದೇಶಗಳಲ್ಲಿ ಈ ಕ್ಷೇತ್ರದಲ್ಲಿ ದೊರೆಯುತ್ತಿರುವ ಸಾವಿರಾರು ಹೊಸ ಉದ್ಯೋಗವಕಾಶಗಳನ್ನು ಕನ್ನಡಿಗರು ಪಡೆಯಲು ಅಗತ್ಯವಾದ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಮುಂದಾಗಬೇಕಾಗಿದೆ. 

(ಮೂಲತಃ ಕೊಪ್ಪಳ ಜಿಲ್ಲೆಯವರಾದ ಡಾ.ಉದಯ ಶಂಕರ ಪುರಾಣಿಕ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 35 ವರ್ಷಗಳ ಅನುಭವ ಹೊಂದಿದ್ದಾರೆ. ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ, ಜಪಾನ್ ಮೊದಲಾದ ದೇಶಗಳ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್, ಸೈಬರ್ ಅಪರಾಧಗಳ ವಿಧಿವಿಜ್ಞಾನ ತಂತ್ರಜ್ಞಾನ ಮತ್ತು ಮೊಬೈಲ್ ತಂತ್ರಾಂಶಗಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನೂರಾರು ವರ್ಷಗಳ ಹಿಂದಿನ ಕನ್ನಡ ಹಸ್ತಪ್ರತಿಗಳು, ಅಪರೂಪದ ಪುಸ್ತಕಗಳು, ತಾಳೆಗರಿ ಮೊದಲಾದ ಮಾಧ್ಯಮಗಳಲ್ಲಿರುವ ಮಾಹಿತಿಯನ್ನು ಡಿಜಿಟಲ್ ರೂಪಕ್ಕೆ ತರಲು ಕೋಲ್ಡ್ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ಇವರು ಅಭಿವೃದ್ಧಿಪಡಿಸಿದ್ದಾರೆ.)