ಇಂತಹ ಅನೇಕ ಕಾಡು ಹಣ್ಣುಗಳ ಪೈಕಿ ಜೇಪಲು ಹಣ್ಣು ಕೂಡ ಪ್ರಮುಖ ಹಣ್ಣಿನ ಗಿಡವಾಗಿದೆ. ಕೆಂಬಣ್ಣದ ಹುಳಿ ಸಿಹಿ ಮಿಶ್ರಿತ ರುಚಿಯುಳ್ಳ ಈ ಹಣ್ಣಿನ ವೈಜ್ಞಾನಿಕ ನಾಮಧೇಯ ಫ್ಲಕೋರ್ಷಿಯಾ ಮೊಂಟಾನ ( Flacourtia montana). ಸ್ಯಾಲಿಕೇಸಿ (Salicaceae) ಕುಟುಂಬಕ್ಕೆ ಸೇರಿದ ಈ ಸಸ್ಯಕ್ಕೆ ಸ್ಥಳೀಯವಾಗಿ ಹಣ್ಣು ಸಂಪಿಗೆ, ಕಲ್ಲು ಸಂಪಿಗೆ, ಜೇಪಲು, ಅಬ್ಳುಕ, ಚಂಪೆ ಹಣ್ಣು, ಅರ್ಪುದ ಪರಂದ್ (ತುಳು) ಎಂಬ ಹೆಸರುಗಳೂ ಇವೆ.
ದಕ್ಷಿಣ ಭಾರತದ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುವ ಈ ಮರವು ಸುಮಾರು 8 ಮೀ ಎತ್ತರವಾಗಿದ್ದು ಇದರ ಕಾಂಡವು ಸರಳ ಮತ್ತು ಅಡ್ಡಕ್ಕೆ ನೇರವಾದ ಬಲಿಷ್ಟವಾದ ಮುಳ್ಳುಗಳನ್ನು ಹೊಂದಿರುತ್ತದೆ. ತೊಗಟೆಯು ಕಂದುಬಣ್ಣವನ್ನು ಹೊಂದಿದ್ದು, ನಯವಾದ ಮೇಲ್ಮೈ ಹೊಂದಿರುತ್ತವೆ . ಈ ಮರದ ಎಲೆಗಳು ಸುಮಾರು 0.4-0.9 ಸೆಂ.ಮೀ ಉದ್ದವಿದ್ದು, ತುಂಬಾ ನಯವಾಗಿದ್ದು ಬಿಸಿಲಿನಲ್ಲಿ ಹೊಳೆಯುವಂತೆ ಕಾಣುತ್ತದೆ. ಏಕಲಿಂಗ ಪುಷ್ಪಗಳನ್ನು ತಳೆಯುವ ಈ ಮರದ ಹೂವುಗಳು ಚಿಕ್ಕದಾಗಿದ್ದು ಮಕರಂದ ಹೀರಲು ಬರುವ ಕೀಟಗಳನ್ನು ತನ್ನ ವಿಶಿಷ್ಟ ಕಂಪಿನಿಂದ ಆಕರ್ಷಿಸುತ್ತದೆ. ಈ ಸಸ್ಯದ ಹಣ್ಣುಗಳು ಒಂದು ಬೀಜವುಳ್ಳ ಹೊಳೆಯುವ ಕೆಂಪು ಬಣ್ಣದ ತಿರುಳುಳ್ಳ ಹಣ್ಣಾಗಿದ್ದು, ವಿವಿಧ ಪಕ್ಷಿಗಳು ಮತ್ತು ವನ್ಯ ಪ್ರಾಣಿಗಳು ಈ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ.
ಇನ್ನು ಈ ಮರದ ವಿವಿಧ ಭಾಗಗಳು ವಿವಿಧ ಔಷಧೀಯ ಗುಣಗಳನ್ನು ಹೊಂದಿದ್ದು, ಜ್ವರ ಬಂದಾಗ ಇದರ ತೊಗಟೆ, ಎಲೆ ಮತ್ತು ಬೇರಿನ ಕಷಾಯವನ್ನು ಔಷಧಿಯಾಗಿ ಕೂಡ ಉಪಯೋಗಿಸುತ್ತಾರೆ. ಮತ್ತು ಈ ಮರದ ಹಣ್ಣುಗಳು ಉಷ್ಣ ಪ್ರವೃತ್ತಿಯನ್ನು ಹೊಂದಿರುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಚಿಕ್ಕವರಿದ್ದಾಗ ಕಾಡು, ಗುಡ್ಡ ಎಂದೆಲ್ಲಾ ಈ ಹಣ್ಣಿಗಾಗಿ ನಾವು ಸಾಮಾನ್ಯವಾಗಿ ಬೇಸಿಗೆಯಲ್ಲಿ ತೆರಳುತ್ತಿದ್ದೆವು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಮರವು ತುಂಬಾ ಅಪರೂಪವಾಗುತ್ತಿದ್ದು, ಮುಂದಿನ ಪೀಳಿಗೆಗೆ ಈ ಮರವನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯವಿದೆ.
(ಲೇಖಕರು ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ)