-ಬೀರಣ್ಣ ನಾಯಕ ಮೊಗಟಾ
ತ್ತರ ಕನ್ನಡ ಜಿಲ್ಲೆ ಕರುನಾಡಿನಲ್ಲಿಯೇ ವಿಶಿಷ್ಟವಾದ ಜಿಲ್ಲೆ. ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡು, ಅರೆ ಬಯಲು  ಸೀಮೆ ಒಳಗೊಂಡಿರುವ ಈ ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕ ಜನಾಂಗಗಳ ಉಡುಪು, ಆಚಾರ, ವಿಚಾರ, ಆಹಾರ, ಮೂಲ ಉದ್ಯೋಗ, ಭಾಷೆ ಎಲ್ಲದರಲ್ಲೂ ವೈವಿಧ್ಯತೆ ಇದೆ. ಹಾಗಿದ್ದರೂ, ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡಿರುವ ವಿಶೇಷ ಜಿಲ್ಲೆ ಉತ್ತರ ಕನ್ನಡ!
      
ತೀರಾ ಹಿಂದುಳಿದ ಕೃಷ್ಣನ ಭಕ್ತರಾಗಿ ಗೋವುಗಳನ್ನು ಸಾಕಿ ಸಲಹುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡ ವಿಶಿಷ್ಟ ಜನಾಂಗ ಗೌಳಿಗಳಲ್ಲಿ ಸಾಮಾಜಿಕವಾಗಿ ಪರಿವರ್ತನೆ ಆಗುತ್ತಿರುವುದು ಸಂತಸದ ವಿಷಯ. ಅಂತೆಯೇ ಅವರ ವಿಶೇಷ ಉಡಿಗೆ ತೊಡುಗೆಗಳು ಕೂಡ ಬದಲಾವಣೆಯತ್ತ ಸಾಗುತ್ತಿದೆ.
     
ಒಬ್ಬ  ಸಾಂಪ್ರದಾಯಿಕ  ಗೌಳಿ ಪುರುಷನನ್ನು ನೆನಪಿಸಿ ಕೊಂಡರೆ ತಲೆಯ ಮೇಲೊಂದು ಮುಂಡಾಸು, ದಿಕ್ಸೂಚಿಯಂತಿರುವ ಆಕರ್ಷಕ ಮೀಸೆ, ಕಿವಿಗೊಂದು ಆಭರಣ, ಅಂಗಿ, ಹಾಫ್ ಪ್ಯಾಂಟ್, ಬಗಲಿಗೊಂದು ಚೀಲ, ಕೈಯ್ಯಲ್ಲೊಂದು ಬಿದಿರಿನ ಕೋಲು, ಕೊರಳಿನಲ್ಲೊಂದು ದಾರ ಅಥವಾ ಸರ ಇರುವ ವ್ಯಕ್ತಿ ನಮ್ಮ ಕಣ್ಮುಂದೆ ಬಂದು ನಿಲ್ಲುತ್ತಿದ್ದರು. ಅಂದಿನ ಉಡುಪು ಇಂದಿನ ಯುವ ಜನಾಂಗದಲ್ಲಿ ಮರೆಯಾಗುತ್ತಿದ್ದು, ಮುಂದೊಂದು ದಿನ ಈ ಸಾಂಪ್ರದಾಯಿಕ ಉಡುಪು ಮರೆಯಾದರೂ ಆಶ್ಚರ್ಯವಿಲ್ಲ.

ಯಲ್ಲಾಪುರ ತಾಲೂಕಿನ ಕಿರವತ್ತಿಯ ಹಿರಿಯ ಕ್ರೀಡಾ ಪಟು ಹಾಗೂ ಗೌಳಿ ಸಮಾಜದ ಯವ ಮುಖಂಡರಾದ ವಿಠ್ಠು ಶೆಳ್ಕೆ ಈ ಕುರಿತು ಮಾತನಾಡುತ್ತಾ 'ನಮ್ಮ ಗೌಳಿ ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಬದಲಾವಣೆ ನಿದಾನವಾಗಿ ಆಗುತ್ತಿದ್ದು ಅದರಲ್ಲೂ   ನಮ್ಮ ಸಮಾಜದ ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ತೋರುತ್ತಿರುವುದು ಸಂತಸ ಉಂಟುಮಾಡಿದೆ. ಅಂತೆಯೇ ನಮ್ಮ ಮೂಲ ಸಾಂಪ್ರದಾಯಿಕ ಉಡುಪು ಕೂಡ ಮರೆಯಾಗುತ್ತಿದೆ' ಎಂದು ಅಭಿಪ್ರಾಯಪಟ್ಟರು.

(ಲೇಖಕರು ವಿಶ್ರಾಂತ ಪ್ರಾಂಶುಪಾಲರು ಮತ್ತು ಹವ್ಯಾಸಿ ಬರಹಗಾರರು)