-ಚೈತನ್ಯ ಮಜಲುಕೋಡಿ
ಅತಿ ಪ್ರಾಚೀನಕಾಲದ ಕತೆಯನ್ನೊರೆಯಲು ಹೊರಟ ಶಶಾಂಕ ಪರಾಶರರ ಚ್ಯುತಿ ಕಾದಂಬರಿಯು ಈ ಕಾಲದ ವಿಪ್ಲವ ವಿಕೋಪಗಳನ್ನೇ ಅಂತರ್ವಾಹಿನಿಯಾಗಿ ಹೊಂದಿರುವುದು ವಿಶೇಷ. ರಾಜ್ಯ ವಿಸ್ತರಣೆಯ ದಾಹವೇ, ಅನ್ಯದೇಶಿಗರ ನುಸುಳುವಿಕೆಯೇ, ನಿರಾಶ್ರಿತರ ದುಮ್ಮಾನವೇ, ಸಾಂಸ್ಕೃತಿಕ ಕಲಹವೇ, ಆರ್ಥಿಕ ಪೈಪೋಟಿಯೇ... ಯಾವುದೂ ಇಲ್ಲಿಲ್ಲ ಎನ್ನುವಂತಿಲ್ಲ. ವರ್ತಮಾನದ ವರದಿಯೇ ಭೂತಕಾಲದಲ್ಲೂ ಕಾಡಿದೆ ಎಂಬ ಚಿಂತನೆ ಎಲ್ಲ ಭಾಗಗಳಲ್ಲೂ ಕಂಡಿದೆ. ಇವೆಲ್ಲವನ್ನೂ ಯಾವತ್ತಿಗೂ ಗಮನಿಸಿಕೊಂಡೇ ಬದುಕುವ ಮನುಷ್ಯನ ಜೀವಿಸುವ ಬಯಕೆಯು ಕಾದಂಬರಿಯನ್ನು ಸುಪ್ತವಾಗಿ ಪ್ರಭಾವಿಸಿದೆ.
ಸಿಂಧೂ ಸರಸ್ವತಿ ನಾಗರೀಕತೆಯ ಕಾಲದ ಕತೆಯಾಗಿ ಹರಡಿಕೊಂಡಿರುವ ಕಾದಂಬರಿಯ ವಿವರಗಳಲ್ಲಿ, ಆ ಕಾಲದ ಕುರಿತಾದ ಜನಜೀವನದ ಯಥೇಚ್ಛವಾದ ವಿವರಗಳೇನೂ ದೊರೆಯುವುದಿಲ್ಲ. ಕತೆಯ ಓಘಕ್ಕೆ ತಕ್ಕಂತೆ ಅಲ್ಲಲ್ಲಿ ಪೂರಕವಾದ ವಿವರಗಳಿವೆ ಅಷ್ಟೇ. ಕಾರಣ, ಲೇಖಕರಿಗೆ ಆಸಕ್ತಿಯಿರುವುದು ಮನುಷ್ಯ ವರ್ತನೆ ಮತ್ತು ಭೌಗೋಳಿಕ ಬದಲಾವಣೆಯ ಚಿತ್ರಣದಲ್ಲಿ. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ನಡುವಿನ ಪರ/ವಿರೋಧಗಳು ಇಂದಿಗೂ ಇದ್ದದ್ದೇ. ಅದರ ಜಿಜ್ಞಾಸೆಯ ಜೊತೆಗೆ ಪ್ರಜಾಪ್ರಭುತ್ವದ ಜಾರಿಯೊಳಗೇ ಬೆಳೆಯುತ್ತ ಹೋಗುವ ಮನುಷ್ಯನ ಅಧಿಕಾರ ದಾಹ, ದಾಕ್ಷಿಣ್ಯಪರವಾದ ಬುದ್ಧಿಯನ್ನು ಕಾದಂಬರಿ ಸೂಕ್ಷ್ಮವಾಗಿ ಗ್ರಹಿಸಿದೆ. ಕುಲಕಸುಬಿನ, ಸ್ವಧರ್ಮದ ಆಚರಣೆಯ ಬಗ್ಗೆ ಇರುವ ಶ್ರದ್ಧೆಯನ್ನೂ, ಅದನ್ನು ಭಗ್ನಗೊಳಿಸುವ ಅತಿಶಯವಾದ ವಿದೇಶೀ ಒಳಸುರಿಯನ್ನೂ ಕತೆಯು ಚೆನ್ನಾಗಿ ಒಳಗೊಂಡಿದೆ.
ಜನರ ಐಕ್ಯತೆಯನ್ನು ಒಡೆದುಹಾಕುವ ಪಿಸುಣಬುದ್ಧಿ, ನಯವಾದ ಮಾತುಗಳನ್ನಾಡುತ್ತಾ ಬುದ್ಧಿಭಾವಗಳೊಂದಿಗೆ ಆಟವಾಡಿ ಸ್ವಾರ್ಥಕ್ಕೆ ಅಮಾಯಕರನ್ನು ಬಳಸಿಕೊಳ್ಳುವ ಕುಟಿಲತನ, ಕ್ರಾಂತಿಯ ಕಾವಿನಲ್ಲಿ ಇರುವ ಸ್ಥಿತಿಗತಿಗಿಂತ ಹೀನಾಯವಾಗುವ ಅವಿವೇಕ, ಅರಿವಿಲ್ಲದೆ ಉಂಟಾಗುವ ಪ್ರಣಯ ವ್ಯಾಪಾರ; ಅಧಿಕಾರ, ಬದುಕುವ ನೆಲೆ ದೊರೆಯುತ್ತಿದ್ದಂತೆ ಮೊಳೆತು ಬೆಳೆಯುವ ಮಹತ್ವಾಕಾಂಕ್ಷೆಗಳೇ ಮುಂತಾಗಿ ಮನುಷ್ಯನ ಮೂಲಭೂತಗುಣಗಳೆಲ್ಲಾ ಪಾತ್ರಗಳಲ್ಲಿ ತಾನಾಗಿ ಬಂದಿದೆ. ರಾಜ್ಯ ವಿಸ್ತರಣೆಯ ದಾಹ, ಸಿಂಹಾಸನಾಕ್ರಮಣದ ದುರ್ದಮ್ಯ ಆಸೆಗಳೊಳಗೆ ದುಸ್ತರವಾಗುವ ಜನಸಾಮಾನ್ಯರ ಬದುಕು, ಕಾಡುಜನರ ಅನ್ಯದೇಶಿಗರ ಕಳ್ಳತನ ಒತ್ತುವರಿಗಳೊಂದಿಗೆ ಇನ್ನಷ್ಟು ಬಿಗಡಾಯಿಸುವ ದುರಂತವನ್ನು ಕತೆಯು ಸಂಯಮದಿಂದ ಚಿತ್ರಿಸಿದೆ. ಎಲ್ಲ ಅವ್ಯವಸ್ಥೆಗಳ ನಡುವೆ ಸರಸ್ವತಿ ನದಿಯ ಮಟ್ಟವೂ ತಗ್ಗುವ ಪ್ರಕ್ರಿಯೆಯಿಂದ ಉಂಟಾಗುವ ಹಾಹಾಕಾರ ಜನಾಂಗದ ವಲಸೆಗೆ ಮುಖ್ಯಕಾರಣ ಎಂಬುದನ್ನು ಕೃತಿ ವಿವೇಚಿಸಿದೆ. ತಗ್ಗುವಿಕೆಯ ಕಾರಣಕ್ಕಿಂತ ಪರಿಣಾಮದಿಂದ ಆಗುವ ಬೆಳವಣಿಗೆಯ ಬಗೆಗೆ ಕೃತಿಕಾರರ ಲಕ್ಷ್ಯವಿದೆ. ಕೃತಿಯೊಳಗೆ ಬರುವ ದಾರ್ಶನಿಕ ಪಾತ್ರಗಳು ಕತೆಯ ವೇಗವನ್ನು ತಗ್ಗಿಸಿದಂತೆ ಕಂಡರೂ, ಅವರ ಚಿಂತನೆಗಳಲ್ಲಿರುವ ಪ್ರಶಾಂತಿಯು ಕಾದಂಬರಿಯ ಮೌಲ್ಯವನ್ನು ಹೆಚ್ಚಿಸಿದೆ. ಸ್ವಲ್ಪ ಅಂಜಿಕೆಯಿಂದಲೇ ಕೈಗೆತ್ತಿಕೊಳ್ಳಬಹುದಾದ ಕಾಲ-ದೇಶಗಳ ಕಥನವನ್ನು ಲೇಖಕರು ತಮ್ಮ ಅಧ್ಯಯನ ಆಲೋಚನೆಗಳ ಬಲದಿಂದ, ಆತ್ಮವಿಶ್ವಾಸದಿಂದ ಕಡೆದಿದ್ದಾರೆ. ಕಾದಂಬರಿಯ ಸಂಕೀರ್ಣತೆ, ತೆರೆದುಕೊಳ್ಳುವ ಕೂತೂಹಲ ತಿರುವುಗಳು, ಭಾರವೆನಿಸದ ನಿರೂಪಣಕ್ರಮದಿಂದ ಚ್ಯುತಿಯು ನಮ್ಮ ಮನಸ್ಸನ್ನು ಹೊಕ್ಕು ಕೆಲಕಾಲ ಕೆದಕಬಲ್ಲ ಕೃತಿಯಾಗಿದೆ.
ಚ್ಯುತಿ (ಕಾದಂಬರಿ)
ಶಶಾಂಕ ಪರಾಶರ
ಸಮನ್ವಿತ ಪ್ರಕಾಶನ ಬೆಂಗಳೂರುಬೆಲೆ: ರೂ. 250/-