ನಾವು ತಂತ್ರಜ್ಞಾನವನ್ನ ಭಾವನಾತ್ಮಕವಾಗಿ ಹಚ್ಚಿಕೊಳ್ಳಬಾರದು. ಅವುಗಳ ಮೇಲೆ ಅವಲಂಬಿತರಾಗಬಾರದು. ಅರೆಮರುಳ ಮನುಷ್ಯರು ನಾವು. ತಂತ್ರಜ್ಞಾನದ ನಿತ್ಯಲೀಲೆಗೆ ಸಿಲುಕಿದ್ದೇವೆ. ಚಾಟ್‌ಬಾಟ್‌ಗಳು ನಮ್ಮ ಸಮಸ್ಯೆಯನ್ನು ಪರಿಹರಿಸಲಿಕ್ಕಾದರೆ ಒಳ್ಳೆಯದು. ಆದರೆ ಮಾನವನ ಕೆಲಸವನ್ನೂ ಕಿತ್ತುಕೊಳ್ಳುವವಾದರೆ ಕಷ್ಟ.

 -ನಿಖಿಲ್ ಎನ್.ಜಿ.

ಗೊತ್ತಿರದ್ದನ್ನು ತಿಳಿದುಕೊಳ್ಳಲು, ಗೊತ್ತಿರುವುದನ್ನು ಅಥವಾ ಭಾಗಶಃ ತಿಳಿದಿರುವುದನ್ನು ಪೂರ್ಣವಾಗಿ ಖಾತರಿಪಡಿಸಿಕೊಳ್ಳಲು ನಾವು ನಂಬಿರುವುದು ನಮ್ಮ ಕರಸ್ಥಲದ ಮೇಲಣ ಪರಬ್ರಹ್ಮದಂತಿರುವ ಮೊಬೈಲನ್ನೂ ಹಾಗೂ ಅದರೊಳಗಿನ ಗೂಗಲನ್ನೇ. ಕೈಗೆಟುಕುವ ದರದಲ್ಲಿ ಸಿಗುವ ಇಂಟರ್ನೆಟ್, ಜ್ಞಾನಸಂಚಯ ಯಜ್ಞಕ್ಕೆ ಹವಿಸ್ಸಾಗಿದೆ. ಗೂಗಲ್‌ನಲ್ಲಿ ಹುಡುಕುತ್ತೀರಿ, ಅದು ನೀವು ಹುಡುಕಿದ ಕೀವರ್ಡ್‌ಗಳನ್ನು ಪ್ರತ್ಯೇಕವಾಗಿ ಹಾಗೂ ಗುಂಪಾಗಿ ಹುಡುಕಿ ಲಭ್ಯವಿರುವ ವೆಬ್‌ಪೇಜ್‌ಗಳನ್ನ ತೋರಿಸುತ್ತದೆ. ಅದರಲ್ಲಿ ನೀವು ಹೆಚ್ಚೆಂದರೆ ಎರಡೋ ಮೂರೋ ಓದುತ್ತೀರಿ. ಅಲ್ಲಿ ಓದಿದ್ದೆಲ್ಲವೂ ಸತ್ಯವಾ? ಅದು ನಿಮ್ಮ ಬೌದ್ಧಿಕ ವಿವೇಚನಗೆ ಬಿಟ್ಟದ್ದು. ಗೂಗಲ್, ಮೊಝಿಲ ಹಾಗೂ ಇನ್ನಿತರ ಸರ್ಚ್ ಎಂಜಿನ್‌ಗಳು ಕೆಲಸ ಮಾಡುವುದು ಹೀಗೆಯೇ. ಆದರೆ ನಾವು ಹುಡುಕುವ ಎಲ್ಲದೂ ಸಿಗುತ್ತೆಯೇ ಅಲ್ಲಿ? ಉಹ್ಞೂಂ. ನಾವು ಹುಡುಕುತ್ತಿರುವ ವಿಷಯದ ಕೆಲ ಭಾಗ ಒಂದು ವೆಬ್‌ಸೈಟ್‌ನಲ್ಲಿರಬಹುದು, ಉಳಿದ ಭಾಗ ಮತ್ತೊಂದರಲ್ಲಿ. ಆದರೆ ಇದನ್ನು ಹುಡುಕಿ ಒಂದು ಸಂಗ್ರಹಯೋಗ್ಯ ಸಾರಾಂಶವನ್ನಾಗಿಸುವುದು ಕಷ್ಟದ ಕೆಲಸ. ಆದರೆ ಇದನ್ನೂ ಒಂದು ತಂತ್ರಾಂಶ ಮಾಡಿದರೆ? ನಮ್ಮ ಕೆಲಸ ಸುಲಭವಲ್ಲವೇ? ಇಂಥದ್ದೊಂದು ತಂತ್ರಾಂಶ ಕೃತಕ ಬುದ್ಧಿಮತ್ತೆಯ ಕೂಸು 'ಚಾಟ್ ಬಾಟ್'ಗಳು. 

ಏನಿದು ಚಾಟ್‌ಬಾಟ್?: ಈ ಚಾಟ್‌ಬಾಟ್‌ಗಳು ನಾವು ಕೇಳಿದ ಪ್ರಶ್ನೆಗೆ ತಾನೇ ಅಂರ್ಜಾಲವನ್ನೆಲ್ಲಾ ಜಾಲಾಡಿ ಸಾರಾಂಶ ರೂಪದಲ್ಲಿ ಉತ್ತರಿಸುತ್ತದೆ. ಈಚಿನ ವರ್ಷಗಳಲ್ಲಿ ಚಾಟ್‌ಬಾಟ್‌ಗಳು ಸಕ್ರಿಯವಾಗಿದ್ದರೂ, ಹೆಚ್ಚೇನೂ ಚಾಲ್ತಿಯಲ್ಲಿರಲಿಲ್ಲ. ಆದರೆ ಕಳೆದ ತಿಂಗಳ ಡಿಸೆಂಬರ್‌ನಲ್ಲಿ 'ಓಪನ್ ಎಐ' ಎಂಬ ಕಂಪೆನಿಯು 'ಚಾಟ್ ಜಿಪಿಟಿ' ಎಂಬ ಚಾಟ್‌ಬಾಟ್ ಅನ್ನು ಪ್ರಾಯೋಗಿಕವಾಗಿ ಸಾರ್ವಜನಿಕ ಬಳಕೆಗೆಂದು ಬಿಡುಗಡೆ ಮಾಡಿತು. ಈ ಹೊಸ ತಂತ್ರಜ್ಞಾನಗಳ ಹಾವಳಿ ನಾಲ್ಕು ದಿನದ್ದು, ಆಮೇಲೆ ತಾನೇತಾನಾಗಿ ತಣ್ಣಗಾಗುತ್ತೆ ಎಂದು ಅದರ ಬಗ್ಗೆ ಆಸಕ್ತಿಯನ್ನೂ ತೋರಿಸಿರಲಿಲ್ಲ ನಾನು. ಆದರೆ ಬಿಡುಗಡೆಯಾದ ಒಂದೇ ವಾರದಲ್ಲಿ ಒಂದು ಮಿಲಿಯನ್ ಸಕ್ರಿಯ ಬಳಕೆದಾರರನ್ನು ಕಂಡದ್ದು ನನ್ನನ್ನೂ ಸೆಳೆಯಿತು. ಹಿಂದಿನ ಚಾಟ್‌ಬಾಟ್‌ಗಳಂತೆ ಚಾಟ್ ಜಿಪಿಟಿ ಇರುವ ವಿಷಯವನ್ನೇ ಹೇಳುವ ಬದಲು, ತಾನೇ ಅಧ್ಯಯನ ಮಾಡಿ ಹೊಸದಾಗಿ ಬರೆಯುತ್ತದೆ. ಹಲವಾರು ಮಶೀನ್ ಲರ್ನಿಂಗ್ ಮಾಡೆಲ್‌ಗಳನ್ನು ಟ್ರೈನ್ ಮಾಡಿ, ಚಾಟ್‌ಜಿಪಿಟಿಗೆ ಕಲಿಸಲಾಗುತ್ತಿದೆ. ಪ್ರತಿಕ್ಷಣ ಮೊಳಕೆಯೊಡೆಯುವ ಹೊಸ ಬಿಸಿ ಸುದ್ದಿಗಳು, ಹಳತಾಗಿ ಧೂಳಿಡಿದು ಆರ್ಕೈವುಗಳಲ್ಲಿರುವ ಸುದ್ದಿ ಸಮಾಚಾರಗಳನ್ನೂ ಹುಡುಕಿ ಹೆಕ್ಕಿ ತೆಗೆದು ಉತ್ತರಿಸಬಲ್ಲ ಸಾಮರ್ಥ್ಯ ಬರುವಷ್ಟು ಚೆನ್ನಾಗಿ ಇದಕ್ಕೆ ತಂತ್ರಾಶ ಬರೆಯಲಾಗಿದೆ. 

ಕೋಡಿಂಗೂ ಬರೆಯುತ್ತೆ! :ಆದರೆ ಇದೂ ಸುಳ್ಳು ಹೇಳಬಹುದು, ಅಥವಾ ಪೂರ್ಣ ಸತ್ಯವನ್ನೂ ಹೇಳದಿರಬಹುದು. ಆದರೆ ಇದು ನನಗೆ ಇಷ್ಟವಾದದ್ದು ನನ್ನ ಕೊಂಡಿಂಗ್ ಅಸೈನ್‌ಮೆಂಟ್‌ಗಳನ್ನು, ನನ್ನ ಪ್ರಾಜೆಕ್ಟಿನ ಸರ್ಕ್ಯೂಟ್ ಡಿಸೈನುಗಳನ್ನೂ ಅದು 80% ಮಾಡಬಲ್ಲದು! ನನಗೊಂದು ಸುಂದರ ರೊಮ್ಯಾಂಟಿಕ್ ಪದ್ಯ ಬರೆದುಕೊಡು ಅಂದರೆ ಕವಿಯಾಗಬಲ್ಲದು. ತಮ್ಮನೋ ತಂಗಿಯೋ ಬಂದು ಈ ಗಣಿತದ ಸೂತ್ರ ಬಿಡಿಸಿಕೊಡು ಅಂದರೆ ಚಾಟ್‌ಜಿಪಿಟಿನೇ ನನ್ನನುಳಿಸಬಲ್ಲ ದೇವರೀಗ!

ಹೀಗಾಯಿತು. ಹೊಸದೊಂದು ಚಿಕ್ಕ ಪ್ರಾಜೆಕ್ಟಿನ ಪ್ರಾಬ್ಲೆಮ್ ಸ್ಟೇಟ್‌ಮೆಂಟ್ ಕೊಟ್ಟು ಇದಕ್ಕೆ ಪರಿಹಾರ ಹುಡುಕಿ ಅಂತಂದ್ರು. ಮೊಸರು ಗಡಿಗಿಯಂತಹ ತಲೆಗಳು ನಮ್ಮವು. ಮಂದಗತಿಯಲ್ಲಿ ಯೋಚಿಸಿ ಉತ್ತರ ಕಂಡುಹಿಡಿಯೂ ಹೊತ್ತಿಗೆ ಆ ಪ್ರಾಜೆಕ್ಟೇ ಸತ್ತು ಹೋಗಬಹುದು. ಚಾಟ್‌ಜಿಪಿಟಿಯ ಬಗ್ಗೆ ತಿಳಿದಿದ್ದ ನಾನು ಅದೇ ಪ್ರಾಬ್ಲೆಮ್ ಸ್ಟೇಟ್‌ಮೆಂಟ್‌ನ್ನು ಸಂಕ್ಷಿಪ್ತವಾಗಿ ಬರೆದು ಅದಕ್ಕೆ ಕೇಳಿದೆ. ನಾವು ಯೋಚಿಸಿದರೆ ಒಮ್ಮೆಗೆ ಹೆಚ್ಚೆಂದರೆ ಒಂದೆರಡು ಆಯಾಮದಿಂದ ಯೋಚಿಸಬಹುದು. ಆದರೆ ಅದು ಹಲವಾರು ಆಯಾಮದಿಂದ ಯೋಚಿಸಿ, ಹೀಗಾದರೆ ಹೀಗೆ ಎಂದು ವಿಸ್ತೃತವಾಗಿ ಬರೆಯಿತು. ಇನ್ನು ನಮ್ಮಷ್ಟಕ್ಕೆ ನಾವೇ ಓದಿಕೊಳ್ಳಬೇಕಾದ ಕಾಲೇಜುಗಳಲ್ಲಿ ಇದು ಸಹಾಯವಾಗಬಲ್ಲದು.

ಒಂದು ವೆಬ್‌ಪೇಜಿಗೆ ಬೇಕಾದ ಬೇಸಿಕ್ ಕಂಟೆಂಟನ್ನೂ ತಾನು ಬರೆಯಬಲ್ಲದು. ಇಷ್ಟೇ ಅಲ್ಲ, ಓಪನ್ ಎಐ ಫೌಂಡೇಷನ್‌ನ ಇನ್ನೊಂದು ಪ್ರಾಡಕ್ಟ್ ಇದೆ. ಡಾಲ್-ಇ ಅಂತ. ಅದು ನೀವು ಕೊಟ್ಟ ಇನ್‌ಪುಟ್‌ಗೆ ತಕ್ಕನಾಗಿ ಚಿತ್ರ ತಯಾರಿಸುತ್ತದೆ! 

2013ರಲ್ಲಿ ‘ಹರ್’ ಎಂಬ ಸಿನೆಮಾವೊಂದು ಬಂದಿತ್ತು. ಅದರಲ್ಲಿ ಒಂದು ಆಪರೇಟಿಂಗ್ ಸಿಸ್ಟಮ್, 'ಸಂಮಂತ'. ಅದರ ಕೆಲಸವೇನು? ಮನುಷ್ಯನೊಂದಿಗೆ ಮಾತನಾಡೋದು, ಅವನ ಸಮಸ್ಯೆಗೆ ಪರಿಹಾರ ಹುಡುಕೋದು, ಅವನು ಹೇಳಿದ ಕೆಲಸ ಮಾಡೋದು. ಆದರೆ ಇಲ್ಲಿ ಮುಖ್ಯ ಪಾತ್ರಧಾರಿ ಈ ಎಐ ಓಸ್‌ನ ತೀರಾ ಅಂದರೆ ತೀರಾ ಗರ್ಲ್‌ಫ್ರೆಂಡಿಗಿಂತಲೂ ಹೆಚ್ಚಿಗೆ ಹಚ್ಚಿಕೊಳ್ತಾನೆ. ಆದರೆ ಎಷ್ಟಾದರೂ ಅದು 0 ಮತ್ತು 1ರಲ್ಲಿ ಮಾತನಾಡುವ ಮಶೀನು, ಈತ ಮನುಷ್ಯ. ಈ ಚಿತ್ರ ಮಾನವ ಕೃತಕ ಬುದ್ಧಿಮತ್ತೆಗೆ, ಆಟೋಮೇಟೆಡ್ ಮಶೀನುಗಳಿಗೆ ಎಷ್ಟು ಅವಲಂಬಿತನಾಗಬಲ್ಲ ಎಂಬುದನ್ನ ತೋರಿಸಿತ್ತು. ಅದೆಷ್ಟೇ ಆದರೂ ನಾವು ತಂತ್ರಜ್ಞಾನವನ್ನ ಭಾವನಾತ್ಮಕವಾಗಿ ಹಚ್ಚಿಕೊಳ್ಳಬಾರದು. ಅವುಗಳ ಮೇಲೆ ಅವಲಂಬಿತರಾಗಬಾರದು. 

ಅರೆಮರುಳ ಮನುಷ್ಯರು ನಾವು. ತಂತ್ರಜ್ಞಾನದ ನಿತ್ಯಲೀಲೆಗೆ ಸಿಲುಕಿದ್ದೇವೆ. ಚಾಟ್‌ಬಾಟ್‌ಗಳು ನಮ್ಮ ಸಮಸ್ಯೆಯನ್ನು ಪರಿಹರಿಸಲಿಕ್ಕಾದರೆ ಒಳ್ಳೆಯದು. ಆದರೆ ಮಾನವನ ಕೆಲಸವನ್ನೂ ಕಿತ್ತುಕೊಳ್ಳುವವಾದರೆ ಕಷ್ಟ. ಎಲ್ಲದರ ಬಳಕೆಗೂ ಒಂದು ಆವಾರವಿರಲಿ.

(ಲೇಖಕರು ಎಂಸಿಎ ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರ)