-ನೂಪುರ ಜಿ.ಜಿ.
'ರಜೆ' ಎರಡಕ್ಷರದ ಈ ಪದ ಎಲ್ಲರಿಗೂ ಅಚ್ಚುಮೆಚ್ಚು, ರಜೆ ಎಷ್ಟಿದ್ದರೂ ಸಾಲದು. ಇದೊಂದು ವಸ್ತುವಾಗಿದ್ದರೆ ಅಕ್ಷಯ ಪಾತ್ರೆಗೆ ಹಾಕಿ ಜೀವನ ಪರ್ಯಂತ ಅನುಭವಿಸುತ್ತಿದ್ದೇವೇನೋ. ಶಾಲೆ, ಕಾಲೇಜು, ಕೆಲಸ ಇತ್ಯಾದಿ ಪ್ರಾರಂಭವಾಗುವುದುನೋ ಸಂಭ್ರಮದ ವಿಚಾರವೇ. ಆದರೆ ನಮ್ಮಂತಹ ಹಳ್ಳಿಯ ಮಕ್ಕಳಿಗೆ ದೂರದೂರಿನ ಹಾಸ್ಟೆಲಿಗೆ ಹೋಗುವುದೇ ಬೇಸರದ ಸಂಗತಿ. ಹಾಸ್ಟೆಲ್ ಅನ್ನು 'ಹೋಂ ಅವೇ ಫ್ರಮ್ ಹೋಂ' ಎನ್ನುತ್ತಾರೆ, ಸತ್ಯವೇ!

ನಮ್ಮಂತೆಯೇ ಹತ್ತಾರು ಆತಂಕ ನೂರಾರು ಆಕಾಂಕ್ಷೆಗಳನ್ನು ಇಟ್ಟುಕೊಂಡ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸೇರಿರುತ್ತಾರೆ. ಸಣ್ಣ ಪುಟ್ಟ ನಗು ಮುಗುಳ್ನಗೆಯಿಂದ ಆರಂಭವಾಗುವ ಸಂಭಾಷಣೆ ಮುಂದೆ ಒಂದೊಳ್ಳೆ ಸ್ನೇಹಕ್ಕೆ ತಿರುಗುತ್ತದೆ. ನಂತರ ತಾಯಿಯಾಗಿ, ತಂಗಿಯಾಗಿ, ಅಕ್ಕಳಾಗಿ ನಮ್ಮನ್ನು ಸಲಹುತ್ತಾರೆ ಸ್ನೇಹಿತರು. ಅದರಲ್ಲೂ ಕೆಲ ದಿನಗಳು ಕಳೆದ ಮೇಲೆ, ಒಂದೇ ಮನಸ್ಥಿತಿಯ ಸ್ನೇಹಿತರ ಗುಂಪಾದ ಮೇಲಂತೂ ನಮ್ಮ ಹುಚ್ಚಾಟಗಳಿಗೆ ಪಾರವೇ ಇಲ್ಲ. ವೀಕೆಂಡ್ ಬರುತ್ತಿದ್ದಂತೆ ಔಟಿಂಗ್ ಹೋಗುವುದೇ ದೊಡ್ಡ ಗೌಜು. ಹಾಸ್ಟೆಲ್ ಸ್ಟ್ರಿಕ್ಟ್ ಆದಷ್ಟು ನಮ್ಮ ಕಪಿಚೇಷ್ಟೆ ಹೆಚ್ಚು. ಈವರೆಗೂ ಅದೆಷ್ಟು ರೂಲ್ಸ್ ಬ್ರೇಕ್ ಮಾಡಿದ್ದೇವೋ ದೇವರೇ ಬಲ್ಲ! 

ಮನೆಯಲ್ಲಿ ಅಮ್ಮ ನಮ್ಮ ಹೆಸರಿನ ಸಹಸ್ರ ನಾಮಾವಳಿ ಮಾಡಿದರೂ ಏಳದ ನಾವು ಹಾಸ್ಟೆಲ್‌ನ ಒಂದೇ ಬೆಲ್ಲಿಗೆ ದಡದಡನೆ ಎದ್ದು ಮೇಲ್ಗಣ್ ತೇಲ್ಗಣ್ಣಿನಲ್ಲಿ ಬೆಳಗ್ಗಿನ ಪ್ರಾರ್ಥನೆಯನ್ನು ಮುಗಿಸಿ ತೂಕಡಿಸಿಕೊಂಡು ಸ್ಟಡಿ ಅರ‍್ಸ್ ಕಳೆಯುವುದೇ ನಮ್ಮ ಬಹುದೊಡ್ಡ ಸಾಧನೆ. ನಂತರ ಕ್ಯೂನಲ್ಲಿ ಬಕೆಟ್ ಹಿಡಿದುಕೊಂಡು ಬಿಸಿ ನೀರಿಗೆ ಜಗಳವಾಡುವಾಗ ಯಾವ ಗಯ್ಯಾಳಿಗಳಿಗೂ ಕಮ್ಮಿ ಕಾಣದು ನಮ್ಮ ಹೋರಾಟ. ಅಂತೂ ಇಂತೂ ಸ್ನಾನ ಮುಗಿಸಿ ಮೆಸ್‌ಗೆ ಹೋದರೆ ಅಲ್ಲಿಯೂ ಅದೇ ಟೈಂ ಟೇಬಲ್ ಪ್ರಕಾರದ ತಿಂಡಿಗಳು. ಆಗಲೇ ನೋಡಿ ಅಮ್ಮನ ಅಡುಗೆಯ ಕೈ ರುಚಿಯ ನೆನಪಾಗುವುದು.

ಬೆಳಿಗ್ಗೆ ಅದೆಷ್ಟೇ ಬೇಗ ಎದ್ದರೂ ಕೊನೆಗೆ ಗಡಿಬಿಡಿಯಲ್ಲೇ ಹೊರಟು ಕಾಲೇಜು ತಲುಪುವಾಗ ಲೆಕ್ಚರರ್‌ರ "ಹಾಸ್ಟೆಲ್ ಅಲ್ಲಿ ಇದ್ದುಕೊಂಡು ತುಂಬಾ ಬೇಗ ಬಂದಿದ್ದೀರಿ" ಎನ್ನುವ ವ್ಯಂಗ್ಯದ ಮಾತು ನಮಗಂತೂ ಕಾಮನ್ ಡೈಲಾಗ್. ಬೇಕೆಂದಾಗ ಯಾರನ್ನೂ ಕೇಳದೆ ಔಟಿಂಗ್ ಹೋಗುವುದು, ಸಂಜೆಯ ಲಿಮಿಟೆಡ್ ತಿಂಡಿಯನ್ನು ಅನ್ಲಿಮಿಟೆಡ್ ಆಗಿ ಕದ್ದುಣ್ಣುವುದು. ಸ್ಟಡಿ ಟೈಮಿನಲ್ಲಿ ಅಸೈನ್ಮೆಂಟ್ ನೆಪ ಮಾಡಿ ಆಗಾಗ ಫೋನ್ ನೋಡುವುದು, ನಾಳೆ-ನಾಳೆ ಎಂದು ಮುಂದ್ಹಾಕಿದ ಇಡೀ ವಾರದ ಬಟ್ಟೆಯನ್ನು ಒಗೆಯುವುದು, ಅದ್ಯಾರನ್ನೊ ಬಾತ್ರೂಮಲ್ಲಿ ಕೂಡಿಹಾಕುವುದು, ಮತ್ಯಾರದ್ದೊ ಬಟ್ಟೆ, ಚಪ್ಲಿಯನ್ನು ಕದ್ದಿಟ್ಟು ಸತಾಯಿಸುವುದು. ಪರೀಕ್ಷೆಯ ಸಮಯದಲ್ಲಿ ಗ್ರೂಪ್ ಸ್ಟಡಿ ನೆಪದಲ್ಲಿ ಹರಟೆ, ಸಮಯ ಸಿಕ್ಕಾಗೆಲ್ಲಾ ಹಸಿಬಿಸಿ ಗಾಸಿಪ್ಪು, ಗೆಳತಿ ಮನೆಯಿಂದ ತಿಂಡಿ ತಂದಾಗ ಊರ ಜಾತ್ರೆಗೆ ಜನ ಸೇರಿದಂತೆ ಆ ರೂಮಲ್ಲಿ ಎಲ್ಲಾ ಸೇರಿ ಎಲ್ಲವನ್ನೂ ಗುಳುಂ ಮಾಡುವುದು. ಯಾರಿಗಾದರೂ ಹುಷಾರಿಲ್ಲದಾಗ ಅವರ ದೇಖ್ಬಾಲ್ ಮಾಡುವುದು, ಓದುವ ಸಮಯದಲ್ಲಿ ಹಾಯಾಗಿ ಮಲಗಲು ಹುಷಾರಿಲ್ಲ ಎಂದು ನೆಪಕೊಡುವುದು. ಹೊಸ ಬಟ್ಟೆ ಖರೀದಿಸಿದಾಗ ಸ್ನೇಹಿತರ ಮುಂದೆ ಸಣ್ಣ ಫ್ಯಾಷನ್ ಶೋ, ಹೀಗೆ ನಗು ಕೇಕೆಗೆ ಏನೂ ಕಮ್ಮಿ ಇಲ್ಲದ ನಮ್ಮ ಹಾಸ್ಟೆಲ್ ಖಂಡಿತಾ ಹೋಂ ಅವೇ ಫ್ರಂ ಹೋಮೇ!

ಹಾಸ್ಟಲಿನ ಕಾರಿಡಾರ್ ಗೋಡೆಗಳಿಗೆ ಗೊತ್ತಿರುವಷ್ಟು ಗಾಸಿಪ್ಪು ಮತ್ಯಾರಿಗೂ ಗೊತ್ತಿರಲ್ಲಪ್ಪ. ಹಾಗೆ ಹಾಸಿಗೆಯ ದಿಂಬಿಗೆ ಗೊತ್ತಿರುವಷ್ಟು ನೋವೂ ಕೂಡ. ಒಟ್ಟಿನಲ್ಲಿ ಈ ಇಡೀ ಜರ್ನಿಯನ್ನು ಸುಂದರವಾಗಿಸುವ ಹಾಸ್ಟೆಲ್‌ಮೇಟ್‌ಗೆ ಜೈ! ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ಅನುಭವ ಬೇಕು ಅನ್ನುವುದು ಅಕ್ಷರಶಃ ಸತ್ಯವಾದ ಮಾತು.

(ಲೇಖಕರು ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು, ಉಜಿರೆ)