-ಸುಚೇತಾ ಹೆಗಡೆ
ಕಾದಂಬರಿ’ ಸಾಹಿತ್ಯಲೋಕದ ಬೃಹತ್ ಬೇರು. ಹಳೆಹನ್ನಡ, ಹೊಸಗನ್ನಡ ಎಲ್ಲಾ ಕಾಲದಲ್ಲೂ ತನ್ನ ಬಾಹನ್ನು ಚಾಚಿದ ಮೇರು ಪ್ರಕಾರ. ಭಯಾನಕ, ಕರುಣೆ, ಪ್ರೇಮ ಹೀಗೆ ನವರಸಗಳನ್ನು ಹೊತ್ತು ಎಲ್ಲಾ ವಿಧದ ಓದುಗರನ್ನು ತನ್ನತ್ತ ಬಾಚಿಕೊಳ್ಳತ್ತದೆ. ಮೊದಲೇ ಕಾದಂಬರಿಯಾಗಿ ಬಂದಂತಹ ಪುಸ್ತಕಗಳು, ಧಾರವಾಹಿ ಸ್ವರೂಪದಿಂದ ಕಾದಂಬರಿಯಾದ್ದು, ಅಂಕಣಗಳು ವಿಸ್ತೃತಗೊಂಡು ಕಾದಂಬರಿಯಾಗಿದ್ದು, ಕಾದಂಬರಿಗಳು ಚಲನಚಿತ್ರಗೊಂಡದ್ದು ಎಲ್ಲವೂ ಇದರ ಕಲಾ ವಿಸ್ತಾರಕ್ಕೆ ಸಾಕ್ಷಿ. ಕಾದಂಬರಿಯಿಂದ ಜನಮಾನಸದಲ್ಲಿ ನೆಲೆನಿಂತವರು, ಇದರಿಂದಲೇ ಬದುಕು ಕಟ್ಟಿಕೊಂಡವರು, ವಿರೋಧಗಳನ್ನು ಮೈಗೆಳೆದುಕೊಂಡವರು ಹೀಗೇ ಹತ್ತು ಹಲವರಿದ್ದಾರೆ. ಕನ್ನಡ ಸಾಹಿತ್ಯದಲ್ಲಷ್ಟೇ ಅಲ್ಲದೇ ಜಗತ್ತಿನ ಬಹುಭಾಷಾ ಸಾಹಿತ್ಯದಲ್ಲಿ ಕಾದಂಬರಿಯ ಜಾಗ ದೊಡ್ಡದು.

ಕಾಲದಿಂದ ಬದಲಾವಣೆ ಮೈಗೂಡಿಸಿಕೊಳ್ಳುತ್ತಾ, ಭಾಷೆಯ ಪರಿವರ್ತನೆಯನ್ನು ತನ್ನದಾಗಿಸಿಕೊಳ್ಳುತ್ತಾ, ಸಾಮಾಜಿಕ ಪರಿವರ್ತನೆಗಳಿಗೆ ಒಗ್ಗಿಕೊಂಡು ಕಾದಂಬರಿಗಳು ಬದಲಾವಣೆ ಕಂಡಿದ್ದರಿಂದ ಕಾಲದಿಂದ ಕಾಲಕ್ಕೆ ಅದರ ಸ್ವರೂಪದಲ್ಲಿಯೂ ಹಲವಾರು ಮಾರ್ಪಾಡುಗಳಾಗಿವೆ. ಪ್ರತಿ ಬಲಾವಣೆಯಲ್ಲೂ ಹೊಸದೊಂದನ್ನು ಕಲಿತುಕೊಂಡು ಅಳವಡಿಸಿಕೊಂಡಿದ್ದರಿಂದ ಕಾದಂಬರಿಗಳು ಇನ್ನೂ ಪ್ರಸ್ತುತ ಮತ್ತು ಜನಪ್ರಿಯ. ಪ್ರತಿಯೊಂದು ಕಾದಂಬರಿಯೂ ಇನ್ನೊಂದಕ್ಕಿಂತ ಭಿನ್ನವಾಗಿದ್ದರೂ, ಪ್ರತಿ ರಚನಾ ಶೈಲಿಗಳು ಲೇಖಕನ ವಿಷಯ ಆಯ್ಕೆ ಹಾಗೂ ನಿರೂಪಣಾ ಶೈಲಿಯ ಆಧಾರದ ಮೇಲೆ ಕಾದಂಬರಿಯ ಪರಿ ನಿಂತಿದ್ದರೂ ಕೂಡ ಕೃತಿ ರಚನೆಯಲ್ಲಾಗುವ ಸಾಮಾನ್ಯ ಬದಲಾವಣೆಯನ್ನು ನಾವು ಕಾಣಬಹುದು.

ಈ ಮೊದಲು ಕಾದಂಬರಿಯ ಗಾತ್ರ, ಭಾಷೆಯ ಶ್ರೀಮಂತಿಕೆಗಳೆಲ್ಲವೂ ಕಾದಂಬರಿಯ ಯಶಸ್ಸಿನ ಬಹುಪಾಲಾಗಿತ್ತು. ಸಾಮಾಜಿಕ ಸಮಸ್ಯೆಗಳ ವಿವರಣೆ, ಪುರಾಣಗಳ ಆಧಾರದ ಮೇಲೆ ಕಥೆ ರಚನೆ ಇವೆಲ್ಲವೂ ಮುಂಚೂಣಿಯ ವಿಷಯಗಳಾಗಿತ್ತು. ಲೇಖಕ ಭಾಷಾ ಶುದ್ಧತೆಗೆ ಹಾಗೂ ಪಂಗಡಾತೀತ ಮನೋಭಾವ ಹೊಂದಿದ್ದರಿಂದ ಕಾದಂಬರಿಯು ಹೆಚ್ಚು ಜನಮನ್ನಣೆಗಳಿಸುವುದಲ್ಲದೇ, ಜ್ಞಾನಪೀಠದಂತಹ ಪ್ರಶಸ್ತಿಗಳಿಗೂ ಆ ಕಾಲದಲ್ಲಿಯೇ ಹೆಚ್ಚು ಭಾಜನವಾಯಿತು. ಕುವೆಂಪು, ಕಾರಂತರ ಕಾದಂಬರಿಗಳಲ್ಲಿ ಹಾಸ್ಯಗಳನ್ನು ಬಳಸಿದ್ದರೂ ಕಥೆಗಳಲ್ಲಿ ಹಾಸ್ಯಾತ್ಮಕ ಪಾತ್ರವೂ ಪ್ರಾಮುಖ್ಯತೆ ಪಡೆದಿರುವುದು ಆಗಿನ ವಿಶೇಷ. ಆದರೆ ಬಹು ಗಂಭೀರ ಪಾತ್ರಗಳ ನಡುವೆ ಕೆಲಮೊಮ್ಮೆ ಕಳೆದುಹೋಗಿದ್ದು, ಹಾಗೂ ಕೆಲ ಪಾತ್ರಗಳು ಆ ಕಾಲಮಾನಕ್ಕನಗುಣವಾಗಿದ್ದರಿಂದ ಸಾಮಾನ್ಯ ಓದುಗನಿಗೆ ತುಸು ಕಷ್ಟವೆನಿಸಬಹುದು. ಇಲ್ಲಿ ಕಾದಂಬರಿ ಕಥೆಗಳಿಗೆ, ಪಾತ್ರಗಳಿಗೆ ನೈಜ ಘಟನೆಗಳು ಪ್ರಭಾವ ಬೀರಿದ್ದರೂ, ಅದನ್ನು ಸಾಹಿತ್ಯಾತ್ಮಕ ನೆಲೆಗಟ್ಟಿನಲ್ಲಿ ನೋಡಿದ್ದು ಆ ಕಾಲದ ಪದ್ಧತಿಗಳಲ್ಲೊಂದು. ಪ್ರತಿಯೊಂದರಲ್ಲಿಯೂ ಭಾಷಾ ಶುದ್ಧತೆಯನ್ನು ನಾವು ಕಂಡರು ಲೇಖಕರ ಶೈಲಿಯಲ್ಲಿ ಭಿನ್ನತೆಯಿದ್ದರಿಂದ ಹಲವರು ಕ್ಲಿಷ್ಟ ಮಾದರಿಯನ್ನು ತಮ್ಮದಾಗಿಸಿಕೊಂಡರೆ ಇನ್ನು ಕೆಲವರು ಸರಳ ಭಾಷೆಯ ಶುದ್ಧ ಕನ್ನಡವನ್ನು ಆಯ್ದುಕೊಂಡರು. ಪ್ರಮುಖವಾಗಿ ಎಡ ಮತ್ತು ಬಲ ಪಂಗಡಗಳ ಇಲ್ಲಿಂದ ಹೆಚ್ಚಾದ್ದರಿಂದ ಕಾದಂಬರಿಯ ಮೇಲೂ ಅದನ್ನು ಕಾಣಬಹುದು.

ಇದರ ನಂತರ ಸಾಹಿತ್ಯಲೋಕವು ಹೋರಾಟದತ್ತ, ಚಳುವಳಿಯತ್ತ ಮುಖ ಮಾಡಿದ್ದೂ ಕಾದಂಬರಿಯ ಪ್ರಕಾರಕ್ಕೂ ಪರಿಣಾಮ ಬೀರಿದೆ. ಅದಷ್ಟೇ ಅಲ್ಲದೇ ಆ ಕಾಲದ ಬಹುತೇಕ ಕಾದಂಬರಿಗಳು ಸಮಾಜದ ತೊಡಕುಗಳನ್ನು ವಿವರಿಸುವ ಶೈಲಿ, ಕಾದಂಬರಿಯ ಪಾತ್ರಗಳಲ್ಲಿ ಹೋರಾಟ ಮನೋಭಾವದ ನಾಯಕ - ನಾಯಕಿಯರು, ಹೀಗೆ ಹಲವು ಇದಕ್ಕೆ ಸಾಕ್ಷಿಗಳು. ಭಾಷಾ ಕಠಿಣತೆಯು ಇಲ್ಲಿ ಸಡಿಲಗೊಂಡಿದ್ದು, ಸರಳ ಭಾಷೆ, ಇಂಗ್ಲೀಷ್ ಮಿಶ್ರಿತ ಭಾಷೆಗಳನ್ನು ಇಲ್ಲಿ ಕಾಣಬಹುದು. ಸತ್ಯಘಟನೆಯನ್ನು ಆಧರಿಸಿದ ಕತೆಗಳು ಇಲ್ಲೂ ಬಂದಿದ್ದರು ಕೂಡಾ, ಕಾಲ್ಪನಿಕ ಸ್ಪರ್ಷ ನೀಡಿದ್ದು, ಘಟನೆಗಳಿಗೆ ಹತ್ತಿರವಾಗುವಂತೆ ಬರೆದಿದ್ದು ಈ ಕಾಲದ ಪ್ರಮುಖ ಧಾಟಿ. ಈ ಕಾಲದಲ್ಲಿ ಸಾಹಿತ್ಯಾತ್ಮಕ ನೆಲೆಗಟ್ಟಿನಲ್ಲಿ ವಿಷಯವನ್ನು ವಿಸ್ತರಿಸುವ ಪರಿ ತುಸು ಹಿಂದೆ ಸರಿದು ವಿಶ್ಲೇಷಣಾತ್ಮಕ ಮತ್ತು ಭಾವನಾತ್ಮಕ ನೆಲೆಗಟ್ಟಿನಲ್ಲಿ ನೋಡವವರ ಸಂಖ್ಯೆಯೂ ಹೆಚ್ಚಾಯಿತು.

ನವ ಕಾಲಮಾನದಲ್ಲಿನ ಬರಹಗಳಿಗೆ ಬಹುತೇಕ ಎಲ್ಲಾ ಕಾಲದ ಶೈಲಿಗಳ ಪ್ರಭಾವ ಬೀರಿದ್ದು, ಆಕರ್ಷಣೆಯೇ ಇದರ ಮೂಲ ಮಂತ್ರವಾಗಿದೆ. ಭಾಷೆಯೂ ಇಂಗ್ಲೀಷ್‌ನೊಂದಿಗೆ ಬೆರೆತುಕೊಂಡಿದ್ದು, ಆಡುಮಾತಿನ ಬಹುಪಾಲನ್ನು ಅಕ್ಷರದಲ್ಲಿಯೂ ಕಾಣಬಹುದು. ವಿಷಯ, ನಿರೂಪಣಾ ಶೈಲಿಯಷ್ಟೇ, ಪುಟ ವಿನ್ಯಾಸ, ಕಾದಂಬರಿ ಪ್ರಚಾರ ಇನ್ನು ಹತ್ತು ಹಲವು ರೀತಿಗಳನ್ನು ಪ್ರಸ್ತುತ ಶೈಲಿ ರೂಪಿಸಿಕೊಂಡಿದೆ. ಓದುಗನ್ನು ಕಾದಂಬರಿಯುದ್ದಕ್ಕೂ ಸೆರೆಹಿಡಿದು ನಿಲ್ಲಿಸುವುದು ಈ ಕಾಲದ ಸಾಧನೆಯಾದ್ದರಿಂದ ಸರಳ, ಭಾವನಾತ್ಮಕ, ವಾಸ್ತವ ಮಾದರಿಯು ಹೆಚ್ಚು ಜನಪ್ರಿಯಗೊಂಡಿತು. ವಿಜ್ಞಾನಕ್ಕೆ ಸಾಹಿತ್ಯದ ಘಮವನ್ನು ಸೇರಿಸಿ ಬರೆಯುವುದು, ಇತಿಹಾಸದೊಂದಿಗೆ ಕಾಲ್ಪನೆಯನ್ನು, ವಾಸ್ತವ ಘಟನೆಯನ್ನು ಸೇರಿಸಿ ಬೆರೆಯುವುದು ಈ ಕಾಲಮಾನದ ಗುರುತೂ ಹೌದು. ನಿತ್ಯವೂ ಕಾದಂಬರಿ ಲೋಕದಲ್ಲಿ ಹೊಸ ಬರಹಗಾರ ಉಗಮವು ಆಗುತ್ತಿರುವುದು ಸಾಹಿತ್ಯಲೋಕದಲ್ಲಿ ಆಶಾದಾಯಕ ಬೆಳವಣಿಗೆ, ಅದರಲ್ಲಿಯೂ ಯುವ ಲೇಖಕರು ಕಾದಂಬರಿ ಸಾಹಿತ್ಯದೆಡೆಗೆ ಮುಖ ಮಾಡಿರುವುದು ಈ ಕಾಲದ ಪ್ರಮುಖ ಬೆಳವಣಿಗೆಗಳಲ್ಲೊಂದು.

ಈ ಎಲ್ಲಾ ಹೋಲಿಕೆಯು ಕೆಲವೊಂದು ಕಾದಂಬರಿಯ ಆಧಾರಿತವಾದ್ದರಿಂದ ಅಪವಾದ ಎನ್ನುವಂತೆ ಹಲವು ಹೊತ್ತಿಗೆಗಳಿರಬಹುದು. ಪ್ರತಿಯೊಂದು ಕಾದಂಬರಿಗೂ ಆಯಾ ಪ್ರದೇಶ, ಕಾಲಮಾನ, ಲೇಖಕರ ಮನಸ್ಥಿತಿಯು ಪ್ರಭಾವ ಬೀರುವುದರಿಂದ ಕ್ರಮಬದ್ಧ ವಿಭಾಗೀಕರಣವೂ ತರವಲ್ಲ. ಪ್ರತಿಬಾರಿಯೂ ಒಂದು ಸಾಹಿತ್ಯಪ್ರಕಾರ ಬದಲಾವಣೆ ಕಂಡಿದೆ ಎಂದರೆ ಓದುಗನ ಅಭಿರುಚಿಯೂ ಭಿನ್ನವಾಗಿದೆ ಎಂದರ್ಥ. ಪ್ರತಿಯೊಂದು ಕಾಲಘಟ್ಟದಲ್ಲಿಯೂ ಎಲ್ಲಾ ಪ್ರಭಾವಗಳನ್ನೂ ಮೀರಿ ಲೇಖಕರು ತಮ್ಮ ಛಾಯೆಯನ್ನು ಮೂಡಿಸುತ್ತಿರುವುದು ಕೂಡ ಉತ್ತಮ ಬೆಳವಣಿಗೆ ವಸ್ತುವಿಷಯ, ವಿವರಿಸುವ ಭಾಷೆಯು ಲೇಖಕನ ಸ್ವತ್ತಾಗಿದ್ದರೂ, ಓದುಗನ ಮನಃ ತಣಿಸುವುದೇ ಗುರಿಯಾದ್ದರಿಂದ ಕಾದಂಬರಿಯ ಬದಲಾವಣೆಯಲ್ಲಿ ಲೇಖಕನಷ್ಟೇ ಓದುಗನ ಹೊಣೆಯೂ ಇರುತ್ತದೆ. ಈ ಎಲ್ಲಾ ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳತ್ತ ಹಲವಾರು ಲೇಖಕರ ನೂರಾರು ಕೃತಿಗಳು ಶತಮಾನ ಕಳೆದರೂ ಪ್ರಸ್ತುತ ಎನಿಸುತ್ತಿದೆ. ಬಹುತೇಕ ಓದುಗರ ಮೊದಲ ಮೆಟ್ಟಿಲು ಪ್ರೇಮ ಕಾದಂಬರಿಗಳು, ಪತ್ತೇದಾರಿ ಕಾದಂಬರಿಗಳು ಇದಾದ್ದರಿಂದ, ಕಾದಂಬರಿಯ ಅಸ್ತಿತ್ವದ ಬಗ್ಗೆ ಎಂದೂ ಪ್ರಶ್ನೆ ಮೂಡಲಾದು ಎಂಬ ಭಾವನೆಯಿದೆ. ಆ ರೀತಿಯ ಕೃತಿಗಳು ಆಗಿನಷ್ಟೇ ಈಗೂ ಬರುತ್ತಿರುವುದು ಅಕ್ಷರಕ್ಕೆ ಸಾವಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

(ಲೇಖಕರು ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ)