-ಹೇಮಂತ್ ಮೂಡಿಗೆರೆ
ಶಾಲಾ ಜೀವನ ಮುಗಿಸಿ ಕಾಲೇಜು ಜೀವನಕ್ಕೆ ಕಾಲಿಡುವುದು ಒಂಥರಾ ಅರ್ಧ ಹಣ್ಣಾದ ಮಾವಿನ ರೀತಿ. ಅತ್ತ ಬಾಲ್ಯದ ಪೂರ್ತಿ ಸಿಹಿಯೂ ಇಲ್ಲದ, ಇತ್ತ ಗುರಿ, ಜವಾಬ್ದಾರಿಗಳ ಹುಳಿಯೂ ಸೇರಿ ನಮ್ಮದೇ ಕಲ್ಪನೆ. ಕನಸುಗಳ ಉಪ್ಪು- ಖಾರ ಬೆರೆಸಿ ಒಂದು ರೀತಿ ಮಜವಾದ ಅನುಭವ.
ಈ ಕಾಲೇಜು ಜೀವನ ಎಂಬುದು ಪದವಿ ಪೂರ್ವದಿಂದ ಹಿಡಿದು ಹೆಚ್ಚು ಕಡಿಮೆ ಕೆಲಸ ಸಿಗುವ ತನಕದ ವಯಸ್ಸಿನಲ್ಲಿ ನಮಗೆ ಸಿಗುವ ಕಾಲ್ಕೇಜಿ ಜೀವನ. ಪದವಿ ಶಿಕ್ಷಣವಂತೂ ಒಬ್ಬ ಮನುಷ್ಯನನ್ನು ಪೂರ್ಣವಾಗಿ ರೂಪಿಸುವ ಕುಂಬಾರನಂತೆಯೇ ಸರಿ. ಗೊತ್ತು ಗುರಿಯಿಲ್ಲದ ಆಸೆಗಳಿಗೆ ರೂಪು ಕೊಟ್ಟು, ರೂಪುರೇಷೆಗಳನ್ನು ತಿದ್ದು ತೀಡಿ ಅಂತಿಮ ಹಂತಕ್ಕೆ ತಲುಪಲು ಕೊಂಡೊಯ್ಯುವ ಹೊತ್ತು.
ಹಾಗೆಂದು ಹದಿಹರೆಯದಲ್ಲೇ ಗಂಭೀರ ಗೌತಮನಾಗಿ ಬಾಳಬೇಕೇ? ಕಾಲೇಜಿನ ಕನ್ಯಾ, ಕುಮಾರರಿಗೆ ಆ ರೀತಿ ಸಲ್ಲದು. ಕಲಿಕೆಯ ಜೊತೆಗೆ ಪ್ರಯಾಣ, ಚಟುವಟಿಕೆ, ಮೋಜು, ಹರಟೆ ಎಲ್ಲವನ್ನೂ ಒಳಗೊಂಡ ಕಸರತ್ತು. ಕಾಲೇಜಿಗೆ ದಶದಿಕ್ಕುಗಳಿಂದ ಬರುವ ವಿದ್ಯಾರ್ಥಿಗಳದು ನೂರೆಂಟು ಕಥೆ. ಬಸ್ಸಿನ ಸೀಟು ಸಿಗದೆ ನೇತಾಡಿಕೊಂಡು ಊರುಗಳಿಂದ ಬರುವ ವಿದ್ಯಾರ್ಥಿಗಳದು ಒಂದು ಕಥೆಯಾದರೆ, ಹಾಸ್ಟೇಲಿನ ಊಟವನ್ನು ಹಗಲಿಡೀ ಬೈದು "ಇರುವ ಭಾಗ್ಯವನು ನೆನೆದು ಬಾರನೆಂಬುದನು ಬಿಡು" ಎಂಬುದನ್ನು ಅರಿತು ಕಡೆಗೆ "ಹರುಷಕ್ಕಿದೇ ದಾರಿ" ಎಂದು ಕಾಲೇಜಿನ ಹಾದಿ ತುಳಿವ ಅನ್ಯ’ಗೃಹ’ ಜೀವಿಗಳ ವ್ಯಥೆ ಮತ್ತೊಂದು! ಹೀಗೆ ಹಲವು ನದಿಗಳು ಸೇರಿ ಒಟ್ಟಾದ ಸಾಗರದಲ್ಲಿ ವೈವಿಧ್ಯಮಯ ಜೀವ ಜಗತ್ತು ಸರ್ವೇ ಸಾಮಾನ್ಯ ಒಬ್ಬ ಓದುವುದರಲ್ಲಿ ನಿಪುಣನಾದರೆ, ಮತ್ತೊಬ್ಬ ಆಟೋಟಗಳಲ್ಲಿ ನಿಷ್ಣಾತ. ಒಬ್ಬಳು ಮೌನ ತ್ರಿಪುರ ಸುಂದರಿಯಾದರೆ, ಮತ್ತೊಬ್ಬಳು ತ್ರಿಪುರಗಳನ್ನೂ ಜಾಲಾಡಿಸಿಬಿಡುವ ವಾಚಾಳಿ. ಎಲ್ಲರೂ ತಮ್ಮದೇ ಮುಗ್ಧತೆಯನ್ನು ಶುದ್ಧ ಬದ್ಧತೆಯಿಂದ ಹೊತ್ತು ತರುವ ತಾಣ ಕಾಲೇಜು (ಇಂಪ್ರೆಸ್ಸು, ಸರ್ಪ್ರೈಸುಗಳ ವಿಷಯಕ್ಕೆ ಈ ಸೂತ್ರ ಅನ್ವಯವಾಗುವುದಿಲ್ಲ). ಈ ರೀತಿ ಎಲ್ಲರೂ ಒಟ್ಟಾಗಿ ತಮ್ಮದೇ ತರಗತಿ, ತಂಡಗಳಲ್ಲಿ ಬೆರೆಯುತ್ತ, ಕಲಿಯುತ್ತ ಸಾಗುತ್ತಾರೆ.ಮುಂದಿನ ಜೀವನಕ್ಕಿರಲಿ ಎಂದು ನಡೆಯುವ ಪ್ರಯೋಗಾತ್ಮಕ ಪ್ರೀತಿ ಪ್ರೇಮ ಪ್ರಕರಣಗಳು. ಕೆಲವೊಮ್ಮೆ ಸೇರಿದ ಗೂಡಾಗಿ, ಹಲವೊಮ್ಮೆ ಒಡೆದ ಹೃದಯಗಳಾಗಿ ಉಳಿಯುವುದು ಒಂಟಿ ಕಾಲೇಜು ವಾಸಿಗಳಿಗೆ ಜೀವನದಲ್ಲಿ ಎಂದಿಗೂ ಅರ್ಥವಾಗದ ಮಾಯಾಜಾಲ.
ಈ ರೀತಿಯ ಸಕಲ ಪ್ರಯತ್ನ, ಪರಿಶ್ರಮ, ಪರಾಕ್ರಮಗಳನ್ನು ತೋರಿ ಕಳೆಯುವ ಕಾಲೇಜು ಜೀವನ ಕಲಿಸುತ್ತದೆ, ನಲಿಸುತ್ತದೆ, ಕೆಲವೊಮ್ಮೆ ಅಳಿಸುತ್ತದೆ. ಒಟ್ಟಾರೆಯಾಗಿ ಇದರಿಂದ ಸಿಗುವ ಜೀವನಾನುಭವ ಅನನ್ಯ, ಅಗಣ್ಯ. ಈ ಜೀವನಕ್ಕದೆಷ್ಟು ತೂಕವೋ?! ಗೊತ್ತಿಲ್ಲ. ಆದರೆ ಅದರೊಟ್ಟಿಗೆ ಕಾಲ್ಕೇಜಿ ಕಾಲೇಜು ನೆನಪುಗಳ ಹೊತ್ತೊಯ್ದರೆ ಅದೇ ಕಟ್ಟಿಟ್ಟ ಬುತ್ತಿ.
(ಲೇಖಕರು ಎಂಎಸ್ಸಿ ವಿದ್ಯಾರ್ಥಿ ಮತ್ತು ಹವ್ಯಾಸಿ ಬರಹಗಾರರು)