-ಪಂಚಮಿ ಬಾಕಿಲಪದವು
ಬದುಕಿನಲ್ಲಿ ಅದೆಷ್ಟೋ ಘಟನೆಗಳು ನಮ್ಮ ಊಹೆಗೆ ನಿಲುಕದಂತೆ ನಡೆದು ಬಿಡುತ್ತವೆ. ಕೆಲವು ಘಟನೆಗಳು ಹೀಗಾಗಬಹುದೆಂದು ನಾವು ಯೋಚಿಸುತ್ತಿರುವಾಗಲೇ ಚಿಕ್ಕದೊಂದು ಸುಳಿವೂ ಇಲ್ಲದೆ ನಮ್ಮ ಕಲ್ಪನೆಗೆ ವಿರುದ್ಧವಾಗಿ ಗತಿಸುತ್ತವೆ. ಅಂತಹ ಸಂದರ್ಭದಲ್ಲಿ ನಾವು ಎಷ್ಟೇ ದೊಡ್ಡ ವೇದಾಂತಿಯಂತಿದ್ದರೂ ಕ್ಷಣಕಾಲ ಚಿಂತೆಗೀಡಾಗುತ್ತೇವೆ. ಆಗುವುದೆಲ್ಲ ಒಳ್ಳೆಯದಕ್ಕೆ, ಇದೊಂದು ವಿಧಿಯ ನಿಯಮ, ಹಣೆಬರಹದಲ್ಲಿದ್ದ ಹಾಗೆ ಆಗುತ್ತೆ ಬಿಡು ಇತ್ಯಾದಿ ಮಾತುಗಳನ್ನು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳಲು ಆಡಿಕೊಂಡರೂ ಒಳಮನಸ್ಸಲ್ಲಿ ಹೀಗಾಯಿತಲ್ಲ ಎಂಬ ಒಂದು ಕೊರಗು ಇದ್ದೇ ಇರುತ್ತದೆ. ಅಂತಹ ಸಣ್ಣ ಕೊರಗು ನಮ್ಮನ್ನು ಬಾಧಿಸದಂತೆ, ಯಾವುದೇ ಘಟನೆಗಳನ್ನು ಎದುರಿಸುವ ಧೈರ್ಯ ನಮ್ಮೊಳಗೆ ಬೆಳೆಯಬೇಕು. ಜೀವನದಲ್ಲಿ ಎಡರು- ತೊಡರು, ಜಯ-ಅಪಜಯ, ಸನ್ಮಾನ-ಅವಮಾನಗಳು ಬರುವುದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯ ಇಲ್ಲ. ಅವುಗಳನ್ನು ಸ್ವೀಕರಿಸುವ ರೀತಿ ಮತ್ತು ಅದರಿಂದ ಕಲಿಯುವ ಸಾಧ್ಯತೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ‍್ಯ ಮಾತ್ರ ನಮಗಿದೆ ಎಂಬುದನ್ನು ಅರಿತುಕೊಳ್ಳಬೇಕು!
ಎಂಥದೇ ಸಮಸ್ಯೆಗಳು ಎದುರಾದರೂ, ನಮಗಿಂತ ಸಮಸ್ಯೆಗಳು ದೊಡ್ಡದಲ್ಲ ಎಂಬ ಪ್ರಜ್ಞೆಯು ಮನದಾಳದಲ್ಲಿ ಸದಾ ಜಾಗೃತವಾಗಿರಬೇಕು. ಸಮಸ್ಯೆ ನಮ್ಮನ್ನು ಕಬಳಿಸಿ ಚಿಂತಾಕ್ರಾಂತರನ್ನಾಗಿಸಲು ಬಿಡಬಾರದು. ಆದಾಗ್ಯೂ, ಸಮಸ್ಯೆಗಳಲ್ಲೇ ಜೀವನದ ಮಹತ್ತ್ವದ ಪಾಠಗಳು ಹುದುಗಿರುತ್ತವೆ. ಸಮಸ್ಯೆಗಳು ಎದುರಾದಾಗ ಅದರ ಕುರಿತಾಗಿ ಚಿಂತಿಸುತ್ತಾ, ನಕಾರಾತ್ಮಕ ಆಲೋಚನೆಗಳ ಸುಳಿಗಳೊಳಗೆ ಸಿಲುಕಿಕೊಳ್ಳುವುದರ ಬದಲಿಗೆ ಅವುಗಳ ಪರಿಹಾರೋಪಾಯಗಳತ್ತ ದೃಷ್ಟಿ ಹಾಯಿಸಬೇಕು. ಕಷ್ಟಗಳು ಅಡರಿಕೊಂಡಾಗ ಕಿರಿಚಾಡುವುದನ್ನು, ಸಿಡಿಮಿಡಿಗೊಳ್ಳುವುದನ್ನು ಯತ್ನಪೂರ್ವಕವಾಗಿ ಬಿಟ್ಟು ಬಿಡಬೇಕು. ಸನ್ನಿವೇಶ ಎಷ್ಟೇ ಗಂಭೀರವಾಗಿದ್ದರೂ, 'ನಾನು ಮೇಲೇಳಲು ಸಾಧ್ಯವಾಗದಷ್ಟು ಕೆಳಗೆ ಬಿದ್ದಿದ್ದೇನೆ' ಎನ್ನುವ ಹತಾಶೆಯ ಮಾತುಗಳನ್ನು ಆಡದೆ 'ಎಲ್ಲವೂ ಸರಿ ಹೋಗುತ್ತದೆ, ಹೋಗಲೇಬೇಕು, ಹೋಗಲಾಡಿಸಲು ನನ್ನಿಂದ ಸಾಧ್ಯ' ಎಂದು ನಮ್ಮೊಳಗೆ ಆತ್ಮವಿಶ್ವಾಸದ ಕಿಡಿ ಹಚ್ಚಿಸಿಕೊಂಡು ಕಾರ್ಯಪ್ರವೃತರಾಗಬೇಕು. ಶ್ರೀಕೃಷ್ಣ ಭಗವದ್ಗೀತೆಯಲ್ಲಿ "ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ" ಎಂದು ಹೇಳುತ್ತಾನೆ. ಅಂತಃಕರಣವು ಪ್ರಸನ್ನವಾಗಿದ್ದರೆ ಎಲ್ಲ ದುಃಖಗಳು ಇಲ್ಲವಾಗುತ್ತದೆ ಎಂಬುದು ಇದರರ್ಥ. ವಿಷಮ ಸನ್ನಿವೇಶಗಳಲ್ಲಿ ಪ್ರಸನ್ನಚಿತ್ತರಾಗಿದ್ದರೆ ಅಂತರಂಗದ ಶಾಂತಿಯನ್ನು, ಸ್ಥೈರ್ಯವನ್ನು ಕಾಪಾಡಿಕೊಳ್ಳುವ ಕಲೆ ಒಲಿದು ಬಿಡುತ್ತದೆ. ನಮ್ಮೊಳಗಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಕಲಿತುಕೊಂಡ ಮೇಲೆ ಎಷ್ಟು ಕಷ್ಟ ಬಂದರೇನು?
ಕೆಲವೊಮ್ಮೆ ಕಾರಣವೇ ಇಲ್ಲದೆ ದುಃಖವು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ನಾನು ನಿಷ್ಟ್ರಯೋಜಕ, ನನ್ನ ಬದುಕೆಲ್ಲ ಶೂನ್ಯ ಎಂಬ ಖಾಲಿತನ ನಮ್ಮನ್ನು ಕಾಡಿ, ಕೊಂದುಬಿಡುತ್ತದೆ. ಹೀಗೆ ಪ್ರತಿ ಬಾರಿ ಮನಸ್ಸು ಹತಾಶೆಯಿಂದ ಅಥವಾ ಅತೃಪ್ತಿಯಿಂದ ಹಳಹಳಿಸಿದಾಗಲೂ ನಾವು ನಕರಾತ್ಮಕವಾಗಿಯೇ ಚಿಂತಿಸುತ್ತೇವೆ. ಅದರ ಬದಲು ಸಕಾರಾತ್ಮಕತೆಯೆಡೆಗೆ ಮುಖ ಮಾಡಬೇಕು. ನಮ್ಮ ಬಳಿಯಿರುವ ಬೆಲೆ ಕಟ್ಟಲಾಗದ ಸಂಪತ್ತನ್ನು ನೆನಪಿಗೆ ತಂದುಕೊಳ್ಳಬೇಕು. ದೃಢವಾದ ಶರೀರ, ಸುಸ್ಥಿತಿಯಲ್ಲಿರುವ ಅಂಗಾಂಗಗಳು, ಉತ್ತಮ ಆರೋಗ್ಯ, ತಂದೆ ತಾಯಿ ಒಡ ಹುಟ್ಟಿದವರು, ಅವರ ಪ್ರೀತಿ, ಉತ್ತಮ ಸ್ನೇಹಿತರು ಹೀಗೆ 'ಸಂಪತ್ತು' ಎಂದು ಯೋಚಿಸಿಯೇ ಇಲ್ಲದ ಅದೆಷ್ಟೋ ವಿಷಯಗಳು ಮನುಜನಿಗೆ ನಿಜವಾದ ಸಂಪತ್ತು, ಈ ವಸ್ತುಗಳು ಮನಃಪಟಲದ ಮುಂದೆ ಬಂದು ನಿಲ್ಲಬೇಕು. ಇಷ್ಟೆಲ್ಲ ಸೌಲಭ್ಯಗಳನ್ನು ಗುರುತಿಸಿ ಆನಂದಿಸಿದಾಗ ಮನಸ್ಸು ಶಾಂತವಾಗುತ್ತದೆ; ಧನ್ಯತಾ ಭಾವ ಆವರಿಸುತ್ತದೆ. ನಮ್ಮ ಮನಸ್ಥಿತಿಯೇ ಬೇರೆಯದಾಗಿ ಬದುಕಲ್ಲೊಂದು ಧ್ಯೇಯ, ಅದರೆಡೆಗಿನ ಹಾದಿ ಹಾಗೂ ತುತ್ತತುದಿಯಲ್ಲಿರುವ ಯಶಸ್ಸು ಗೋಚರವಾಗುತ್ತದೆ.
ಆದಾಗ್ಯೂ, ಬದುಕಿನ ಕೆಲಘಟ್ಟಗಳಲ್ಲಿ ನಾನು ಏಕಾಂಗಿ ಎಂದೆನಿಸಿಬಿಡುತ್ತದೆ. ಮನದೊಳಗಿನ ತಲ್ಲಣಗಳನ್ನು, ತುಮುಲಗಳನ್ನು ಹಂಚಿಕೊಳ್ಳಲು ಯಾರಿಲ್ಲ, ಇರುವವರು ನನ್ನ ಭಾವನೆಗಳಿಗೆ ಸ್ಪಂದಿಸಲು ಸಮರ್ಥರಲ್ಲ ಎಂದು ತೀರ್ಮಾನಿಸಿ ಮ್ಲಾನವದನರಾಗಿ ಬಿಡುತ್ತೇವೆ. ಇದಕ್ಕೆ ಸರಿಹೊಂದುವಂತೆ ಡಿ.ವಿ.ಜಿ ಸೊಗಸಾದ ಕಗ್ಗವೊಂದು ಹೇಳಿದ್ದಾರೆ.
"ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮಸಂಕಟಗಳಲಿ, ಜೀವಸಮರದಲಿ
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ- ಮಂಕುತಿಮ್ಮ"
ಬದುಕಿನ ಹೋರಾಟದಲ್ಲಿ, ಧರ್ಮಸಂಕಟಗಳಲ್ಲಿ, ಮುಕ್ತಿಯ ನೋಂಪಿಯಲ್ಲಿ, ಸಾವಿನ ಸಮಯದಲ್ಲಿ, ಅನೇಕ ಪ್ರಮುಖ ಕ್ಷಣಗಳಲ್ಲಿ ಏಕಾಂಗಿಯಾಗಿ ನಾವು ನಿಲ್ಲಬೇಕಾಗಬಹುದು. ಹಾಗಾಗಿ ಏಕಾಂಗಿಯಾಗಿರುವುದನ್ನು ಕಲಿ ಮಂಕುತಿಮ್ಮ.!!
ಅದೆಷ್ಟೋ ಬಾರಿ ನಮ್ಮ ಬೆನ್ನು ತಟ್ಟಿ ಮುಂದಿನ ಹಾದಿ ತೋರಲು ಯಾರೂ ಇರುವುದಿಲ್ಲ. ನಮ್ಮ ಬಾಳಿಗೆ ನಾವೇ ದೀವಿಗೆಯಾಗಿ ಎಚ್ಚರಿಕೆಯಿಂದ ಮುಂದೆ ಸಾಗಬೇಕಾಗುತ್ತದೆ. ಕಂಬನಿಯನ್ನು ನಾವೇ ಒರಸಬೇಕಾಗುತ್ತದೆ; ಖುಷಿಯನ್ನು ನಾವೊಬ್ಬರೇ ಸಂಭ್ರಮಪಡಬೇಕಾಗುತ್ತದೆ. ಇದ್ಯಾವುದಕ್ಕೂ ಗಾಬರಿಗೊಳಗಾಗದೆ, ದುಃಖಪಡದೆ, ಹತಾಶನಾಗದೆ ಒಬ್ಬನೇ ಬದುಕುವುದನ್ನು ಅನುಭವಿಸಬೇಕು; ಆನಂದಿಸಬೇಕು. ಸುಖದುಃಖಗಳನ್ನು ನಿಭಾಯಿಸುವ, ನಮ್ಮನ್ನು ನಾವೇ ಸಲಹುವ ಕಲೆ ಕರಗತಗೊಳಿಸಿದಾಗ ಒಂಟಿತನ ಕಾಡುವುದಿಲ್ಲ. ನಮ್ಮೊಳಗೆಯೇ ಎಲ್ಲವನ್ನೂ ಹಂಚಿಕೊಳ್ಳುವ ಗುಣ ರೂಢಿಯಾಗುತ್ತದೆ. ಇದರಿಂದ ಅಂತರಂಗದ ಆಪ್ತ ಸಮಾಲೋಚನೆ- ಸಮಾಚಾರಗಳು ಎಲ್ಲೂ ಹೊರಹೋಗುವುದಿಲ್ಲ. ಹಾಗಾಗಿ ನಮ್ಮ ಯೋಜನೆ ಯೋಚನೆಗಳಿಗೆ ಹುಳಿ ಹಿಂಡುವ, ಸುಟ್ಟು ಬೂದಿ ಮಾಡುವ ಯಾವುದೇ ದುಷ್ಟಶಕ್ತಿಗಳು ನಮ್ಮ ಸುತ್ತ ಆವರಿಸಲೂ ಸಾಧ್ಯವಿಲ್ಲವಲ್ಲವೇ!?
ಜೀವನ ಪ್ರತಿಕ್ಷಣ ನಮ್ಮೆಡೆಗೆ ಅವಕಾಶಗಳನ್ನು ಎಸೆಯುತ್ತಲೇ ಇರುತ್ತದೆ. ಪ್ರತಿಯೊಂದು ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ವೇದಿಕೆಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ ಸಿಕ್ಕಿದ ಅವಕಾಶಗಳನ್ನು ಕಡೆಗಣಿಸದೆ ಮುನ್ನುಗ್ಗಬೇಕು. ಸಭಾಕಂಪನ, ಅಂಜಿಕೆ, ಸಣ್ಣತನಗಳನ್ನು ತೊರೆದು ನಮ್ಮೊಳಗೆ ಅಡಕವಾಗಿರುವ ಪ್ರತಿಭೆಯನ್ನು ಕ್ರಿಯಾತ್ಮಕವಾಗಿ ಪ್ರದರ್ಶಿಸಬೇಕು. ಯಾಕೆಂದರೆ ಪ್ರತಿಯೊಂದು ವೇದಿಕೆಯಲ್ಲಿಯೂ ಒಂದು ಹೊಸ ಪಾಠವನ್ನು ಕಲಿಯುತ್ತೇವೆ; ವಿನೂತನ ವಿಷಯಗಳು ಗೋಚರವಾಗುತ್ತವೆ. ಒಂದು ವೇಳೆ ವೇದಿಕೆಯಲ್ಲಿ ಅವಮಾನವಾದರೂ ನಿರಾಶರಾಗಬಾರದು. ಸನ್ಮಾನವನ್ನು ಹೇಗೆ ಸ್ವೀಕರಿಸುತ್ತೇವೆಯೋ ಹಾಗೆಯೇ ಅವಮಾನಗಳನ್ನು ಸ್ವೀಕರಿಸುವ ಮನಸ್ಥಿತಿ ನಮ್ಮದಾಗಬೇಕು. ಸುತ್ತಮುತ್ತಲಿನ ಪರಿಸ್ಥಿತಿ ಏನೇ ಇರಲಿ ನಿರ್ಮಲರಾಗಿದ್ದು, ನಮ್ಮೊಳಗಿನ ಚೈತನ್ಯವನ್ನು ಎಂದಿಗೂ ಕಳೆಗುಂದಲು ಬಿಡಬಾರದು. ನಾಳೆಗಳಲಿ ಭರವಸೆಯನ್ನು ಕಾಣುವ ಆಶಾದಾಯಕ ವ್ಯಕ್ತಿತ್ವ ರೂಪುಗೊಳ್ಳಬೇಕು. ಮುಂದಿನ ಅವಕಾಶಗಳಲ್ಲಿ ಹಿಂದಿನಕ್ಕಿಂತ ಭಿನ್ನವಾಗಿ ಹಾಗೂ ಉತ್ಕೃಷ್ಟವಾಗಿ ನಮ್ಮನ್ನು ನಾವು ಅಭಿವ್ಯಕ್ತಗೊಳಿಸಬೇಕು. ಪ್ರತಿನಿತ್ಯವೂ ಹೊಸತನ್ನು ಕಲಿತು ಪ್ರಬುದ್ಧರಾಗಬೇಕು ಅಷ್ಟೇ!!
ಇಂದು ಇದ್ದಂತೆ ನಾಳೆ ಇರಲು ಸಾಧ್ಯವಿಲ್ಲ; ನಾಳೆ ಇದ್ದಂತೆ ಮುಂದಿರಲು ಸಾಧ್ಯವಿಲ್ಲ. ಪ್ರತಿನಿತ್ಯವೂ ಎಲ್ಲವೂ ನನ್ನ ಇಚ್ಛೆಯಂತೆಯೇ ನಡೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದರಲ್ಲಿ ಅರ್ಥವಿಲ್ಲ! ಯಾಕೆಂದರೆ ಕೆಲವೊಮ್ಮೆಯಾದರೂ ಜೀವನದಲ್ಲಿ ಅವಮಾನ, ಅಪಮಾನ, ಸೋಲು,ಸವಾಲುಗಳನ್ನು ಎದುರಿಸುವ ಅವಕಾಶ ನಮಗೊದಗಬೇಕು. ನಮ್ಮ ಗುಣಮಟ್ಟವನ್ನು, ನಮ್ಮೊಳಗೆ ಅಡಕವಾಗಿರುವ ಶಕ್ತಿಯನ್ನು ಅರ್ಥೈಸುವ ಪರೀಕ್ಷೆಗಳು ಶೈಕ್ಷಣಿಕ ಪರೀಕ್ಷೆಗಳಂತೆ ನಿರಂತರ ನಡೆಯುತ್ತಿದ್ದರೆಯೇ ಬದುಕು ಸುಂದರ!
(ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಂಬಿಕಾ ಮಹಾವಿದ್ಯಾಲಯ ಪುತ್ತೂರು)