-ಹವ್ಯವಾಹನ
ಡಿವಿಜಿ ಎಂಬ ಸಾಹಿತ್ಯವೃಕ್ಷದ ಸತ್ವಭರಿತ ಫಲಗಳಲ್ಲಿ"ಮರುಳಮುನಿಯನ ಕಗ್ಗ"ವೂ ಒಂದು. ಇದು ಮಂಕುತಿಮ್ಮನ ಕಗ್ಗದ ಮುಂದುವರೆದ ಭಾಗ. ಮಂಕುತಿಮ್ಮನ ಕಗ್ಗ ಪ್ರಕಟವಾಗಿದ್ದು 1943. ಇದು ಪ್ರಕಟವಾಗಿದ್ದು ಡಿವಿಜಿಯವರ ಮರಣೋತ್ತರವಾಗಿ, ಅಂದರೆ 1984 ರಲ್ಲಿ. ಮಂಕುತಿಮ್ಮನ ಕಗ್ಗದಷ್ಟು ಪ್ರಸಿದ್ಧವಲ್ಲದಿದ್ದರೂ, ಅದರಷ್ಟೇ ಸತ್ವ, ಸ್ವಾರಸ್ಯ, ಲಾಲಿತ್ಯ ಇದರಲ್ಲೂ ಇದೆ.

ಮರಣೋತ್ತರ ಪ್ರಕಟಣೆಯ ಹಿನ್ನೆಲೆ:
ಈ ಕಗ್ಗಗಳನ್ನು ಡಿವಿಜಿಯವರು ತಮ್ಮ ಜೀವನದ ಕಡೆಯ ದಿನಗಳಲ್ಲಿ ರಚಿಸಿದವು. ಡಿವಿಜಿಯವರ ಜೀವಿತದಲ್ಲೇ ಪ್ರಕಟವಾಗಿದ್ದರೆ ಇನ್ನಷ್ಟು ಸೊಗಸಾಗಿರುತ್ತಿತ್ತು. ಆದರೆ ಅನಾರೋಗ್ಯದಿಂದಾಗಿ ಬರೆದಿದ್ದನ್ನು ತಿದ್ದಲು, ಪರಿಷ್ಕರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಮರಣದ ನಂತರ ಅವುಗಳ ಹಕ್ಕುಸ್ವಾಮ್ಯ ಪುತ್ರರಾದ ಬಿ.ಜಿ.ಎಲ್.ಸ್ವಾಮಿ ಅವರಿಗೆ ಬಂದಿತು. ಅವರು ಪ್ರಕಟಿಸುವಷ್ಟರಲ್ಲಿ ಅವರನ್ನೂ ಅಕಾಲಿಕವಾಗಿ ವಿಧಿ ಸೆಳೆದುಕೊಂಡಿತು. ನಂತರ ಅವರ ಶ್ರೀಮತಿ ವಸಂತಾ ಸ್ವಾಮಿಯವರು ಪ್ರಕಟಣೆಯ ಹೊಣೆಯನ್ನು ಡಿವಿಜಿಯವರೇ ಸ್ಥಾಪಿಸಿದ "ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ"ಗೆ ವಹಿಸಿದರು. ಗೋಖಲೆ ಸಂಸ್ಥೆಯು ವಿದ್ವಾನ್ ರಂಗನಾಥ ಶರ್ಮರಿಂದ ಈ ಕೃತಿಯನ್ನು ಪರಿಷ್ಕರಿಸಿತು.

ಮಹಾಮಹೋಪಾಧ್ಯಾಯ ವಿದ್ವಾನ್ ಎನ್ ರಂಗನಾಥ ಶರ್ಮ:
ಶ್ರೀ ಶರ್ಮರು ಡಿವಿಜಿಯವರ ಆಪ್ತವಲಯದವರು. ಸಂಸ್ಕೃತ-ಕನ್ನಡ ವಿದ್ವಾಂಸರು. ಡಿವಿಜಿ-ಶರ್ಮರ ಬಾಂಧವ್ಯ ಎಷ್ಟಿತ್ತೆಂದರೆ ಶರ್ಮರು ಬರೆದ ಶ್ರೀಮದ್ ವಾಲ್ಮೀಕಿ ರಾಮಾಯಣದ ಕನ್ನಡ ಭಾಷಾಂತರ ಸರಣಿ ಪುಸ್ತಕಗಳಿಗೆ ಡಿವಿಜಿ ವಿದ್ವತ್ಪೂರ್ಣವಾಗಿ ಮುನ್ನುಡಿ ಬರೆದರು. ಡಿವಿಜಿಯವರೂ ತಮಗೇನಾದರೂ ವ್ಯಾಕರಣದ ಸಂದೇಹಗಳಿದ್ದರೆ ಶರ್ಮರ ನೆರವು ಪಡೆಯುತ್ತಿದ್ದರು. ಹೀಗಾಗಿ ಗೋಖಲೆ ಸಂಸ್ಥೆಯು ಗ್ರಂಥ ಪರಿಷ್ಕರಣೆಗೆ ಅವರನ್ನೇ ಆಯ್ಕೆ ಮಾಡಿತು.

ಶರ್ಮರ ಪರಿಷ್ಕರಣೆ:
ಡಿವಿಜಿಯವರು ಇದರಲ್ಲಿರುವ ಕಗ್ಗಗಳನ್ನು ಪೂರ್ತಿಯಾಗಿಸಿರಲಿಲ್ಲ. ಕೆಲವು ಕಗ್ಗಗಳ ನಾಲ್ಕನೇ ಸಾಲನ್ನು ಬರೆದಿರಲಿಲ್ಲ, ಇನ್ನು ಕೆಲವುಗಳಲ್ಲಿ ಮಧ್ಯಮಧ್ಯದ ಪದಗಳನ್ನು ಬರೆದಿರಲಿಲ್ಲ. ಡಿವಿಜಿಯಂತಹ ವಿದ್ವಾಂಸರು ಖಾಲಿ ಬಿಟ್ಟ ಸಾಲುಗಳನ್ನು ಪೂರ್ತಿಯಾಗಿಸುವ ಸೂಕ್ಷ್ಮ ಮತ್ತು ಕಷ್ಟಕರ ಜವಾಬ್ದಾರಿ ಶರ್ಮರ ಹೆಗಲೇರಿತು. ಶರ್ಮರು ತಾವು ಮಾಡಿರುವ ಡಿವಿಜಿಯವರ ಸಾಹಿತ್ಯ ಅಧ್ಯಯನ ಮತ್ತು ತಮ್ಮ ವಿದ್ವತ್ತನ್ನು ಬಳಸಿ ಬಿಟ್ಟುಹೋದ ಪದಗಳನ್ನು ಪೂರ್ತಿಗೊಳಿಸಿದರು. ಜೊತೆಗೆ ತಾವು ಸೇರಿಸಿರುವ ಪದಗಳನ್ನು ಆವರಣದಲ್ಲಿಸಿ()ಯೇ ಪ್ರಕಟಿಸಬೇಕೆಂದು ಪ್ರಕಾಶಕರಲ್ಲಿ ವಿನಂತಿಸಿದರು. ಇವತ್ತಿಗೂ ಈ ಪುಸ್ತಕ ಕೊಂಡರೆ, ಶರ್ಮರು ಸೇರಿಸಿದ ಪದಗಳು ಆವರಣ()ದಲ್ಲಿವೆ. ಎಂಥಾ ನಿಸ್ವಾರ್ಥ ಪರಿಷ್ಕರಣೆ!

ಮರುಳಮುನಿಯನೆಂದರೆ ಮಂಕುತಿಮ್ಮನ ತಮ್ಮ:
ಮಂಕುತಿಮ್ಮನ ಕಗ್ಗದ ಮುಂದುವರೆದ ಭಾಗ "ಮರುಳ ಮುನಿಯ ಕಗ್ಗ". ಇದರ ಕಗ್ಗವೊಂದರಲ್ಲಿ "ಮರುಳಮುನಿಯನು ನಾನು, ಮಂಕುತಿಮ್ಮನ ತಮ್ಮ" ಎಂದು ಡಿವಿಜಿಯವರೇ ಬರೆದಿದ್ದಾರೆ. ಮಂಕುತಿಮ್ಮನ ಕಗ್ಗದ ಆರಂಭದಲ್ಲಿರುವಂತೆ ಪೂರ್ವಕಥೆ ಇದರಲ್ಲಿಲ್ಲ, ಡಿವಿಜಿ ಇದ್ದಿದ್ದರೆ ಬರೆಯುತ್ತಿದ್ದರೇನೊ! 

ಮಂಕುತಿಮ್ಮನ ಕಗ್ಗವನ್ನು ರಾಜರತ್ನಂ ಅವರು ವಿಷಯಾನುಕ್ರಮಣಿಕೆ ಮಾಡಿದಂತಯೇ ಶರ್ಮರು ಇದನ್ನು ವಿಷಯಾಧಾರಿತವಾಗಿ ವಿಂಗಡಿಸಿದ್ದಾರೆ. ಒಟ್ಟು 825 ಕಗ್ಗಗಳಿದ್ದು, ಟಿಪ್ಪಣಿ, ಕ್ಲಿಷ್ಟಪದಗಳ ಅರ್ಥವನ್ನು ಪುಸ್ತಕದ ಕೊನೆಯ ಭಾಗದಲ್ಲಿ ಕೊಟ್ಟಿರುವುದು ಓದುಗರಿಗೆ ಸಹಾಯಕವಾಗಿದೆ‌. ಓದುಗರು ಮಂಕುತಿಮ್ಮನ ಕಗ್ಗದಂತೆಯೇ ಮರುಳ ಮುನಿಯನ ಕಗ್ಗವನ್ನೂ ಓದಿ ಆಸ್ವಾದಿಸಬೇಕು. ಡಿವಿಜಿಯವರು ಇದೇ ಕೃತಿಯಲ್ಲಿ "ನೆನೆನೆನೆಯುತೊಂದೊಂದು ಪದ್ಯವನು ಅದೊಮ್ಮೊಮ್ಮೆ ಅನುಭವಿಸಿ ಚಪ್ಪರಿಸೊ-ಮರುಳ ಮುನಿಯ" ಎಂದಿದ್ದಾರೆ.

(ಹವ್ಯವಾಹನ, ಹಳಗನ್ನಡ ಸಾಹಿತ್ಯಾಸಕ್ತ. ವೃತ್ತಿಯಲ್ಲಿ ತೆರಿಗೆ ಸಲಹೆಗಾರ. ಊರು ತೀರ್ಥಹಳ್ಳಿ. ವಾಸ ಶಿವಮೊಗ್ಗ.)