-ಶಿವಾನಂದ ಕಳವೆ
ನಿಮ್ಮ ಮಕ್ಕಳಿಗೆ ನೈಲ್ ನದಿಯ ಉದ್ದ ಎಷ್ಟಿದೆ? ಅಂತ ಕೇಳಿ. ಹಿಮಾಲಯದ ಎತ್ತರ ಎಷ್ಟಿದೆ ಅಂತ ಕೇಳಿ ಅಥವಾ ಜಗತ್ತಿನ ಅನೇಕ ಸಂಗತಿಗಳ ಬಗ್ಗೆ ಪ್ರಶ್ನಿಸಿ ನೋಡಿ. ಎಲ್ಲೋ ಒಂದಿಷ್ಟು ಉತ್ತರಗಳನ್ನು ಅವರು ಸರಿಯಾಗಿ ಕೊಟ್ಟೇ ಕೊಡುತ್ತಾರೆ. ಆದರೆ ನೇರವಾಗಿ ಸ್ಥಳೀಯವಾದ ಕೆಲವು ಪರಿಸರ ಸಂಬಂಧಿ ಪ್ರಶ್ನೆಗಳನ್ನು ಅವರೊಂದಿಗೆ ಕೇಳಬೇಕು. ನಿಮ್ಮೂರಲ್ಲಿ ಹರಿಯುವ ಹಳ್ಳದ ಹೆಸರೇನು?, ನದಿಯ ಹೆಸರೇನು?, ಅಲ್ಲಿರುವ ಕೆರೆಗಳ ಬಗ್ಗೆ ಕೇಳಿ, ಅಲ್ಲಿರುವ ಮರಗಳು, ಪಕ್ಷಿಗಳು, ಪ್ರಾಣಿಗಳ ಬಗ್ಗೆ ಕೇಳಿ. ಇಲ್ಲ! ಅವರಿಂದ ಇತ್ತೀಚಿನ ವರ್ಷಗಳಲ್ಲಿ ಸಿಗುವ ಉತ್ತರ ತೀರಾ ತೀರಾ ನಿರಾಶಾದಾಯಕ. ಶಾಲೆಗೆ ಬರುವ ಮಕ್ಕಳಿಗೆ ಸರ್ಕಾರ ಅನೇಕ ರೀತಿಯ ಸೌಲಭ್ಯಗಳನ್ನು ಕೊಟ್ಟಿದೆ. ಪಠ್ಯಗಳಲ್ಲಿ ಎಪ್ಪತ್ತರ ದಶಕದೀಚೆಗೆ ಪರಿಸರದ ಪಾಠಗಳಂತೂ ಧಾರಾಳವಾಗಿ ಬಂದಿವೆ. ಮಣ್ಣಿನ ಬಗ್ಗೆ, ಮರದ ಬಗ್ಗೆ, ನದಿಯ ಬಗ್ಗೆ, ಹೂವಿನ ಬಗ್ಗೆ, ಹಕ್ಕಿಯ ಬಗ್ಗೆ ಹೀಗೇ ಬೇರೆಬೇರೆ ರೀತಿಯಲ್ಲಿ ಪರಿಸರದ ಪಾಠಗಳಿವೆ. ಮಕ್ಕಳು ಆ ಪಾಠಗಳನ್ನು ಓದ್ತಾರೆ, ಮೇಷ್ಟ್ರು ಸೊಗಸಾಗಿ ಪಾಠ ಮಾಡ್ತಾರೆ. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟ ಮಕ್ಕಳು ಹೆಚ್ಚುಹೆಚ್ಚು ಅಂಕಗಳನ್ನು ಪಡೆಯುತ್ತಾ ಒಳ್ಳೆಯ ಶ್ರೇಣಿಯಲ್ಲಿ ಪಾಸಾಗುತ್ತಾರೆ. 

ಆಶ್ಚರ್ಯಕರ ಸಂಗತಿಯೆಂದರೆ, ಈ ಪಾಸಾದ, ಪದವಿ ಪಡೆದ, ಬಂಗಾರದ ಪದಕ ಗಳಿಸಿದ ಈ ಮಕ್ಕಳನ್ನು ಅದೇ ನಿಮ್ಮೂರಿನ ಕಾಡಿನಲ್ಲಿ ನಿಲ್ಲಿಸಿ, ಕೆರೆ ಪಕ್ಕ ನಿಲ್ಲಿಸಿ, ನದಿ ಅಂಚಿನಲ್ಲಿ ಓಡಾಡಿಸಿ. ಇಲ್ಲ! ಯಾವೊಂದು ಮಾಹಿತಿಯೂ ಕೂಡಾ ಅವರಿಂದ ಹೊರಗೆ ಬಿದ್ದರೆ ಅಚ್ಚರಿಪಡಬೇಕು! ಯಾಕೆಂದರೆ, ಜ್ಞಾನ ಅನ್ನುವುದು ಪುಸ್ತಕಕ್ಕೆ ಸೀಮಿತವಾದ ಹಾಗೆ ಅದೊಂದು ಪರೀಕ್ಷೆಗೆ, ಪ್ರಶ್ನೆಗಳಿಗೆ ಸೀಮಿತವಾಗಿದ್ದ ಹಾಗೆ ಇವತ್ತಿನ ಮಕ್ಕಳ ವರ್ತನೆ ಕಾಣುತ್ತದೆ. ನಾವು ಧಾರಾಳವಾಗಿ ಪರಿಸರದ ಪಾಠಗಳನ್ನೇನೋ ಮಕ್ಕಳಿಗೆ ಕೊಟ್ಟಿದ್ದೇವೆ. ಆದರೆ ಮಕ್ಕಳ ಮನಸ್ಸನ್ನು ಪರಿಸರದ ಕಡೆಗೆ ಸೆಳೆಯುವಲ್ಲಿ ನಾವೆಲ್ಲೋ ಒಂದು ಕಡೆ ವಿಫಲರಾಗಿದ್ದೇವಾ? ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಈಗ ಸಕಾಲ. 

ಇವತ್ತು ಜಗತ್ತು ಅನೇಕ ಕಾರಣಗಳಿಂದ ಪರಿಸರ ವಿಚಾರದ ಚರ್ಚೆಗಳನ್ನು ಮಾಡುತ್ತಿದೆ. 2015-16 ರ ಹೊತ್ತಿನಲ್ಲಂತೂ ಕರ್ನಾಟಕದಲ್ಲಿ ತೀವ್ರ ಬರ ಬಂದಾಗ ಕುಡಿಯುವ ನೀರಿಗೆ ತತ್ವರ ಆಯಿತು. ಎಷ್ಟು ಕಷ್ಟವಾಯಿತೆಂದರೆ, ಒಂದು ಬಿಂದಿಗೆ ನೀರನ್ನು 15-20 ಕಿಮೀ ದೂರದಿಂದ ತರುವಂತಹ ಪರಿಸ್ಥಿತಿಯನ್ನು ನೋಡಿದ್ದೇವೆ. ಟ್ಯಾಂಕರ್ ಮೂಲಕ ಅನೇಕ ಹಳ್ಳಿಗಳು ನೀರನ್ನು ಹುಡುಕಿದವು. ಹೆಚ್ಚುಕಡಿಮೆ 156 ತಾಲ್ಲೂಕುಗಳು ಬರಪೀಡಿತ ಎಂದು ಸರ್ಕಾರವೇ ಸಾರಿತು! ಇದು ಒಂದು ಮುಖವಾದರೆ, ಕಳೆದ ಕೆಲವು ವರ್ಷಗಳಿಂದ ನಾವು ನೋಡುತ್ತಿದ್ದೇವೆ. ಉಷ್ಣತೆಯಲ್ಲಿ ಬದಲಾವಣೆಯಾಗಿದೆ. ತಾಪಮಾನದಲ್ಲಿ ಏರಿಕೆಯಾಗಿದೆ. ಬೇಸಿಗೆಯಲ್ಲಿ 38 40 42 44 ಡಿಗ್ರಿ ಉಷ್ಣಾಂಶಗಳನ್ನು ನೋಡುವ ಹಳ್ಳಿಗಳೂ ಇವೆ. ನಗರಗಳ ಸ್ಥಿತಿ ಇನ್ನೊಂದು. ಶಾಲೆಗಳಿಗೆ ರಜೆ ಕೊಡುವಷ್ಟು ಕೆಲವು ಕಡೆ ವಾಹನ ಮಾಲಿನ್ಯದ ಹೊಗೆ ತುಂಬಿಕೊಂಡಿರುವುದನ್ನು ನೋಡುತ್ತೇವೆ. ಒಂದು ಕಡೆ ಕೊರೊನಾ ಬಂದಾಗ ಆದ ಬವಣೆಗಳನ್ನು ಗಮನಿಸಿದ್ದೇವೆ. 

ನಮ್ಮ ಪರಿಸರ ಚೆನ್ನಾಗಿದ್ದರೆ ಮಕ್ಕಳ ಭವಿಷ್ಯವೂ ಚೆನ್ನಾಗಿರುತ್ತದೆ. ನಾಡಿನ ಭವಿಷ್ಯವೂ ಚೆನ್ನಾಗಿರುತ್ತದೆ. ಒಂದು ಉದಾಹರಣೆ ಹೇಳಬೇಕೆಂದರೆ, ತೀವ್ರ ಬರ ಬಂದಾಗ ಗುಲ್ಬರ್ಗದಾ ಆಳಂದ ತಾಲೂಕಿನ ಅನೇಕ ಹಳ್ಳಿಗರು ಮುಂಬೈ, ಪೂಣಾ, ಬೆಂಗಳೂರು, ಮಂಗಳೂರು ಕಡೆ ವಲಸೆ ಹೊರಟರು. ಹೋಗುವಾಗ ತಮ್ಮ ದನ ಕರುಗಳನ್ನು ಮಾರಾಟ ಮಾಡಿ ಮನೆಗೆ ಬೀಗ ಹಾಕಿ ಹೋಗಿದ್ದರು. ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಕ್ಕಾಗಿ ಮಕ್ಕಳಿಗೆ ಶಾಲೆಯೇ ಇರಲಿಲ್ಲ. ಇವತ್ತು ಅನೇಕ ವನವಾಸಿ ಸಮುದಾಯಗಳಲ್ಲೂ ಕೇರಿಗಳಲ್ಲೂ ನೋಡುತ್ತೇವೆ. ಅವರೆಲ್ಲಾ ವಲಸೆ ಹೊರಟಾಗ ಮಕ್ಕಳ ಶಿಕ್ಷಣವೂ ನಿಂತು ಹೋಗುತ್ತದೆ. ಯಾವಾಗ ಊರಲ್ಲಿ ಚೆನ್ನಾಗಿ ನೀರಿರುತ್ತೋ ಊರಲ್ಲಿ ನೀರಿದ್ದಾಗ ಮಕ್ಕಳ ಆರೋಗ್ಯವೂ ಚೆನ್ನಾಗಿದ್ದು ಶಿಕ್ಷಣಕ್ಕೂ ಅನುಕೂಲವಾಗುತ್ತದೆ. 

ಇವತ್ತು ಯಾರು ಉನ್ನತ ಪದವಿಗಳನ್ನು ಪಡೆಯುತ್ತಾರೆ, ಪುರಸ್ಕಾರಗಳನ್ನು ಪಡೆಯುತ್ತಾರೆ, ಒಳ್ಳೆಯ ರ‍್ಯಾಂಕ್‌ಗಳನ್ನು ಪಡೆಯುತ್ತಾರೆ, ಅವೆಲ್ಲದರ ಹಿಂದೆ ಅವರ ಪರಿಶ್ರಮ ಇದೆ ಎಂದೆಲ್ಲಾ ನಾವು ಕೊಂಡಾಡುತ್ತೇವೆ. ನಿಜಕ್ಕೂ ಇದೆ! ಅವರ ಓದು,ಶಿಕ್ಷಕರ ಸಹಾಯ, ಪಾಲಕರ ಸಹಾಯ ಎಲ್ಲವೂ ಇದೆ ಒಪ್ಪೋಣ. ಆದರೆ ನಾವು ಮರೆತಿರುವ ಸಂಗತಿ ಏನೆಂದರೆ, ಪರಿಸರದ್ದು. ಒಳ್ಳೆಯ ಓದುವ ಪರಿಸರ ಇಲ್ಲದಿದ್ದರೆ, ಒಳ್ಳೆಯ ಕುಡಿಯುವ ನೀರಿಲ್ಲದಿದ್ದರೆ, ಒಳ್ಳೆಯ ಗಾಳಿಯಿಲ್ಲದಿದ್ದರೆ, ಮನಸ್ಸನ್ನು ಏಕಾಗ್ರತೆಯತ್ತ ಒಯ್ಯುವಂತಹ ವಾತಾವರಣ ಇಲ್ಲದಿದ್ದರೆ ಖಂಡಿತ ಯಾರೂ ಯಾವ ಸಾಧನೆಯನ್ನೂ ಮಾಡಲು ಸಾಧ್ಯವಿಲ್ಲ. ಅಂದರೆ ಎಲ್ಲದರ ಹಿಂದೆ ಪರಿಸರ ಇದ್ದೇ ಇದೆ. ಇರಲೇಬೇಕು ಕೂಡಾ!

ಹೀಗಾಗಿ ಇವತ್ತು ನಾವು ಶಿಕ್ಷಣವನ್ನು ಸಮಗ್ರವಾಗಿ ಗಮನಿಸಿಕೊಂಡರೆ, ಪ್ರಾಥಮಿಕದಿಂದ ಕಾಲೇಜು ಹಂತದವರೆಗೂ ಶಿಕ್ಷಣದಲ್ಲಿ ಪರಿಸರದ ನೀತಿಯ ಅಗತ್ಯವಿದೆ. ಪರಿಸರದ ಪಾಠದ ಹೊರತಾಗಿಯೂ ಕೂಡಾ ಸುತ್ತಲಿನ ನಿಸರ್ಗವನ್ನು ಅರ್ಥಮಾಡಿಕೊಳ್ಳುವಂತಹ ಪ್ರಯತ್ನಗಳು ನಡೆದರೆ ಮಾತ್ರ ಮಗುವಿನ ಮನಸ್ಸು ಬದಲಾಗಲು ಸಾಧ್ಯವಿದೆ. 

ಇಂದು ಪ್ಲಾಸ್ಟಿಕ್ ಬೀಳುತ್ತಿದೆ, ನದಿ ಹಾಳಾಗುತ್ತಿದೆ, ಮತ್ತೇನೋ ಅರಣ್ಯ ನಾಶವಾಗುತ್ತಿದೆ ಅಂದರೆ ನಾವು ಕೆಲವೊಂದು ಸಿದ್ಧ ಮಾದರಿಯನ್ನಿಟ್ಟುಕೊಂಡಿದ್ದೇವೆ. ಮಳೆಗಾಲದಲ್ಲಿ ಒಮ್ಮೆ ಸಸಿ ನೆಟ್ಟು ವನಮಹೋತ್ಸವ ಆಚರಿಸುವುದೇ ದೊಡ್ಡ ಕಾರ್ಯಕ್ರಮ ಎಂದು ತಿಳಿದುಕೊಂಡಿದ್ದೇವೆ. ಆದರೆ ಬೇಸಿಗೆಯಲ್ಲಿ ಸಾಯುವ ಸಸಿಗೆ ನೀರು ಹಾಕುವುದು, ಕಾಡಿಗೆ ಬಿದ್ದ ಬೆಂಕಿಯನ್ನು ನಂದಿಸುವುದು, ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಂತದ್ದು ಅಥವಾ ಸ್ವತಃ ನಾವು ಕೆಲವು ವಿಚಾರಗಳಲ್ಲಿ ಪರಿಸರ ಸ್ನೇಹಿ ನಡವಳಿಕೆಯನ್ನು ತೋರಿಸುವುದು, ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಬೀಸಾಡದಿರುವುದು ಇಂತಹ ನಡವಳಿಕೆಗಳು ಕೇವಲ ಪಾಠದಿಂದ ಸಾಲುವುದಿಲ್ಲ. ವೈಯಕ್ತಿಕವಾಗಿ ಸ್ವಯಂ ನಿಯಂತ್ರಣದ ಮೂಲಕ, ಸ್ವಯಂ ಆಚರಣೆಯ ಮೂಲಕ ಇದು ಕಾರ್ಯಗತವಾಗಬೇಕು.

ಹಾಗಾದರೆ ಇದನ್ನೆಲ್ಲಾ ನಾವು ಯಾವ ರೀತಿಯಲ್ಲಿ ಮಾಡಲು ಸಾಧ್ಯವಿದೆ? ಪರಿಸರದ ಪಾಠ ಏನು ಮಾಡಬಹುದು? ಮೇಷ್ಟ್ರುಗಳು ಯೋಚನೆ ಮಾಡಬೇಕು. ಅನೇಕರು ಕೇಳುತ್ತಾರೆ. “ಸರ್ ನಮ್ಮಲ್ಲಿ ಮಲೆನಾಡು, ಕರಾವಳಿಯಲ್ಲಿ ಇರುವಂತಹ ಪರಿಸರ ಬಯಲುಸೀಮೆಯಲ್ಲಿ ಇಲ್ವೇ ಇಲ್ಲ” ಅಂತ. ಹಾಗೇನೂ ಇಲ್ಲ. ಎಲ್ಲಾ ಕಡೆ ಅಲ್ಲಿಗೆ ತಕ್ಕುದಾದಂತಹ ಪರಿಸರ ವ್ಯವಸ್ಥೆ ಇದೆ. ಪಾಠಕ್ಕೆ ಬೇಕಾದಂತಹ ಧಾರಾಳ ಸಂಗತಿಗಳು ಇವೆ. ಏನೂ ಇಲ್ಲದ ಅದ್ಯಾವುದೋ ಬಳ್ಳಾರಿ ಮೂಲೆಯ ಹಳ್ಳಿಗಳಲ್ಲೂ ಕೂಡಾ, ಅಲ್ಲಿರುವ ಜಾಲಿ ಕಂಠಿಯೋ ಮುಳ್ಳು ಕಂಠಿಯೋ ಕಾರೆ ಕಂಠಿಯೋ ಬೋರೆ ಕಂಠಿಯೋ ಅವೆಲ್ಲವೂ ಕೂಡಾ ಕಡಿಮೆ ನೀರು ಬರುವ ಸೂಚಕವಾಗಿ ಹೇಗೆ ನೀರನ್ನು ಕಡಿಮೆ ಬಳಸೋ ಸಾಧ್ಯತೆ ಇದೆ ಎಂಬುದನ್ನು ಮುಳ್ಳನ್ನಿಟ್ಟು ತೋರಿಸುತ್ತಿದ್ದಾರೆ. 

ಮುಳ್ಳು ಹೇಗೆ ಒಂದು ಸಸ್ಯದಲ್ಲಿ ಬೆಳವಣಿಗೆಯಾದಾಗ ಆ ಸಸ್ಯ ಬರ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ, ಹೇಗೆ ಬದುಕುತ್ತದೆ. ಒಮ್ಮೆ ಮುಳ್ಳುಗಾಡು ಬೆಳೆಯುತ್ತಾ ಹೋದಂತೆ ನಡುವೆ ಬೇವೋ ಶ್ರೀಗಂಧವೋ ಬೆಳೆಯುವ ವಿಶೇಷಗಳನ್ನೂ ಗಮನಿಸಬಹುದು. ಆ ಪ್ರದೇಶದ ಕಂಠಿಗಳೆಲ್ಲಾ ಹಣ್ಣಾದಾಗ ಬೇರೆ ಬೇರೆ ಪಕ್ಷಿಗಳು ಬಂದು ಬೇರೆ ಬೇರೆ ಹಣ್ಣಿನ ಬೀಳಗಳನ್ನು ಹಾಕುವುದನ್ನೂ ನೋಡಬಹುದು. ಅಂದರೆ, ಪರಿಸರದ ಎಲ್ಲಾ ಸಂಗತಿಗಳನ್ನು ಮನುಷ್ಯ ಗಮನಿಸುವ ಒಂದು ಕುತೂಹಲವನ್ನಿಟ್ಟುಕೊಂಡರೆ ಖಂಡಿತ ಎಲ್ಲಾ ಕಡೆಗಳಲ್ಲೂ ಇಂತಹ ಸಂಗತಿಗಳಿವೆ. ಇಂದು ಈ ಮಕ್ಕಳಿಗೆ ಈ ರೀತಿಯ ಪರಿಸರದ ದರ್ಶನ ಮಾಡಿಸಿ ಅವರ ಮಿದುಳಲ್ಲಿ ಪರಿಸರದ ಸಂರಕ್ಷಣೆಯ ಜಾಗೃತಿ ಮೂಡಿಸುವ ಕೆಲಸಕ್ಕೆ ಶಾಲಾ ಪಠ್ಯದ ಹೊರತಾಗಿಯೂ ಕೆಲವು ಪ್ರಯತ್ನಗಳು ಬೇಕಾಗಿವೆ. 

ಸುಮಾರು 2001 ನೇ ಇಸವಿಯಿಂದ ಈವರೆಗೂ ನನ್ನ ಅನುಭವದ ಪ್ರಕಾರ ಅನೇಕ ಪರಿಸರ ಶಿಬಿರಗಳನ್ನು ಏರ್ಪಡಿಸಿದ್ದೇನೆ. ಹೆಚ್ಚುಕಡಿಮೆ 22 ವರ್ಷಗಳ ಈ ಪಯಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ನಮ್ಮ ಪರಿಸರ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಈ ಮಕ್ಕಳನ್ನು ಹತ್ತಿರದಿಂದ ಒಡನಾಡಿ ಹೇಳುವುದಿಷ್ಟೇ -ಒಂದಿಷ್ಟು ಸಮಯ ನಾವು ಪರಿಸರದ ಜಾಗೃತಿಗೆ ಕೊಡದೇ ಹೋದರೆ ನಾಳೆ ನಮ್ಮೂರ ನದಿ, ಕೆರೆ ಒಣಗಲು, ಕಾಡು ಕಣ್ಮರೆಯಾಗಲು, ಊರಲ್ಲಿ ವಾಯು ಮಾಲಿನ್ಯವಾಗಿ ಕಸದ ಗುಡ್ಡೆಯಾಗಿ ಮೂಗು ಮುಚ್ಚಿಕೊಂಡು ತಿರುಗುವಂತಹ ಸಂದರ್ಭ ಬರಲು ನಾವೇ ಕಾರಣವಾಗುತ್ತೇವೆ.

ಭೂಮಿ ಎಮರ್ಜೆನ್ಸಿ ವಾರ್ಡಿನಲ್ಲಿದೆ ಎಂದು ಹೇಳುತ್ತೇವೆ. ಎಮರ್ಜೆನ್ಸಿ ವಾರ್ಡಿನಲ್ಲಿರುವ ಭೂಮಿಯನ್ನು ನಿಧಾನಕ್ಕೆ ಜನರಲ್ ವಾರ್ಡಿಗೆ ತಂದು, ನಿಧಾನಕ್ಕೆ ಒಂದು ಒಳ್ಳೆಯ ಸಂರಕ್ಷಣೆಯ ನೀತಿಗಳನ್ನು ರೂಪಿಸಲು ಬೇಕಾಗಿರುವುದು ಭವಿಷ್ಯದ ಕಾಳಾಳುಗಳು.

ಇವತ್ತಿನ ವಿದ್ಯಾರ್ಥಿಗಳೇ ನಾಳಿನ ಈ ಪರಿಸರವನ್ನು ಉಳಿಸಬೇಕಾದವರು. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಭಾವಿಯಾದಂತಹ ಪರಿಸರದ ಶಿಕ್ಷಣ ಕೊಡಲು ಶಿಕ್ಷಕರು, ಪಾಲಕರು, ಇಡೀ ಸಮುದಾಯ, ಸರ್ಕಾರ ಎಲ್ಲರೂ ಯೋಚಿಸಲೇಬೇಕು. ಅನೇಕ ಪಾಲಕರಲ್ಲೊಂದು ಯೋಚನೆಯಿದೆ. ಮಕ್ಕಳಿಗೆ ಪರಿಸರದ ಪಾಠ ಪರಿಸರದ ಪಾಠ ಅಂತಾರೆ ಅದರಿಂದ ಪರೀಕ್ಷೆಗೆ ಏನು ಅನುಕೂಲವಾಗುತ್ತೆ? ಅಂತ. ಏನು ಅನುಕೂಲ ಎಂದು ಈಗಾಗಲೇ ಅನೇಕ ಉದಾಹರಣೆಗಳನ್ನು ನೀಡಿದ್ದೇನೆ. ಕೆಟ್ಟ ನೀರು ಕುಡಿದು ನಿಮ್ಮ ಮಗು ಅನಾರೋಗ್ಯದಲ್ಲಿದ್ದಾಗ, ಕೆಟ್ಟ ಗಾಳಿಯಿಂದ ಅಸ್ತಮಾದಂತಹ ರೋಗಗಳು ಉಲ್ಬಣಿಸಿದಾಗ ಒಂದು ಒಳ್ಳೆಯ ಪರಿಸರ, ಕೆರೆ, ನದಿ, ಮರದ ಬೆಲೆ ನಮಗೆ ಅರ್ಥವಾಗುತ್ತದೆ. 

ಕಳೆದೊಂದು ದಶಕದಿಂದ ಅಂತಹ ಅರ್ಥ ಮಾಡಿಸುವ ಸಾಕ್ಷ್ಯಗಳು ನಮ್ಮ ಕಣ್ಣೆದುರಿದ್ದು ಓದಿದ ನಾವು ಕಣ್ಮುಚ್ಚಿ ಕೂರದೇ ಎಚ್ಚರವಾಗಬೇಕು. ಅರಿವಿನ ದೀಪವನ್ನು ಬೆಳಗಲು ಹಸಿರು ರಾಯಭಾರಿಗಳನ್ನು ಸಿದ್ಧ ಮಾಡಲು ನಾವು ಕಾರ್ಯಪ್ರವೃತ್ತರಾಗಬೇಕು.

(ಶಿವಾನಂದ ಕಳವೆ ಶಿರಸಿ ಸಮೀಪದ ಕಳವೆಯವರು. ಪರಿಸರ ಜಾಗೃತಿ ಮೂಡಿಸುವ ಬರಹಗಳು ಇವರ ವೈಶಿಷ್ಟ್ಯ. ಪತ್ರಕರ್ತರಿಗೆ, ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ಪಾಠ ಹೇಳುವುದು ಇವರ ನೆಚ್ಚಿನ ಹವ್ಯಾಸ. ʼಮಧ್ಯಘಟ್ಟʼ ಕಾದಂಬರಿ ಸೇರಿದಂತೆ ಅನೇಕ ಕೃತಿಗಳು ಪ್ರಕಟವಾಗಿವೆ.)