ಚಿತ್ರ ಮತ್ತು ಬರಹ: ಶ್ರೀನಿಧಿ ಡಿ.ಎಸ್
ಒಂದು ಸಂಜೆಯ ರಂಗು, ಹಸಿರಿನ ಹಲವು ಬಣ್ಣಗಳು, ಮಳೆಗಾಲದಲ್ಲಿ ತುಂಬಿ ಹರಿಯುವ ಪುಟ್ಟ ಝರಿ, ಕಾಡಿನ ಅನೂಹ್ಯ ಲೋಕದ ಪುಟ್ಟ ಕುಸುಮಗಳು, ರೆಡ್ ಆಕ್ಸೈಡು ಮನೆ ಕಟ್ಟೆಯ ಮೇಲೆ ಕೂತು ಕವಳ ಹಾಕಿ ಹಲುಬುವ ಗೆಳೆಯರು, ನೆಂಟರು ಬಂದರೋ ಎಂದು ಬಾಗಿಲಿನಿಂದ ಆಚೆ ಇಣುಕುವ ಅಜ್ಜಿ, ದೇವರಕೋಣೆಯೊಳಗೇ ಕದ್ದು ದೇವರ ಭೇಟಿಗೆ ಬರುವ ಬಿಸಿಲಕೋಲು.. ಒದ್ದೆ ಹೂವಿನ ಮೇಲೆ ಈಗತಾನೇ ನಿಂತ ಮಳೆಯ ಕುರುಹಾಗಿ ಉಳಿದಿರುವ ಪುಟ್ಟ ಹನಿಗಳು, ಬೆಟ್ಟದ ಕಣಿವೆಯಲ್ಲಿ ತೆಳುವಾಗಿ ಹಬ್ಬಿದ ಮಂಜ ಪರದೆ.. ಮಲೆನಾಡಿಗೆ ಹಲವು ಮಜಲುಗಳು. ಸಿಕ್ಕಿದ್ದಷ್ಟೇ ದಕ್ಕಿದ್ದು..
ಛಾಯಾಗ್ರಹಣ ಎನ್ನುವುದು ಮನಸ್ಸಿಗೆ ಮುದ ನೀಡುವ ಕಲೆ. ಕಾಲ ಪ್ರವಾಹದಲ್ಲಿ ಕ್ಷಣದೊಳಗೆ ಮಾಯವಾಗುವ ಘಳಿಗೆಯೊಂದು ಕ್ಯಾಮರಾದ ಕಣ್ಣೊಳಗೆ ಬಿದ್ದು ಸದಾಕಾಲ ಚೌಕಟ್ಟೊಳಗೆ ಬಂಧಿಯಾಗುವ ಈ ಪ್ರಕ್ರಿಯೆಗೆ ಅದರದೇ ಆದ ಸೊಗಸಿದೆ.
ಒಮ್ಮೆ ಫೋಟೋಗ್ರಫಿಯ ಆಸಕ್ತಿ ಶುರುವಾಯಿತು ಎಂದರೆ, ಅದರೊಳಗೆ ಕಳೆದು ಹೋಗುವ ಖುಷಿಯೇ ಬೇರೆ. ನೀವು ಮಲೆನಾಡು, ಕರಾವಳಿಯವರಾದರೆ ಅದರ ತೂಕ ಇನ್ನೊಂದುಚೂರು ಹೆಚ್ಚು. ಮಳೆಗಾಲ, ಚಳಿಗಾಲ, ಬೇಸಿಗೆ - ತೋಟ, ಗದ್ದೆ, ಗುಡ್ಡ, ಬೆಟ್ಟ - ತೊರೆ, ನದಿ, ಜಲಪಾತ - ಇಬ್ಬನಿ ಕವಿದ ಬೆಳಗು, ಮಬ್ಬಿನ ಸಂಜೆ - ಹೀಗೆ ಎಲ್ಲ ಕಡೆಯೂ, ಎಲ್ಲ ಹೊತ್ತೂ ಕ್ಯಾಮರಾಗೆ ಹಬ್ಬವೇ. ಇಂದು ಮೊಬೈಲಿನ ಕ್ಯಾಮರಾಗಳೇ ಉತ್ಕೃಷ್ಟವಾದ ಚಿತ್ರಗಳನ್ನು ತೆಗೆಯಬಲ್ಲದು. ದೊಡ್ಡದೊಂದು DSLR ಕಡ್ಡಾಯವಾಗಿ ಬೇಕೆಂದೇನೂ ಇಲ್ಲ. ಇಲ್ಲಿ ನಾಣು ತೆಗೆದಿರುವ ಅಷ್ಟೂ ಚಿತ್ರಗಳು ಮೊಬೈಲ್‌ನವೇ.
ಹೀಗಾಗಿ ಸುಮ್ಮನೆ ನಿಮ್ಮ ಬೆಳಗಿನ ನಡಿಗೆ, ಸಂಜೆಯ ಹರಟೆಯ ಮಧ್ಯೆ ಒಂದಿಷ್ಟು ಚಿತ್ರಗಳನ್ನು ತೆಗೆದು ನೋಡಿ! ನಿಮಗೂ ಕೂಡಾ ಹೊಸದೊಂದು ಲೋಕ ಕಂಡೀತು. ನಿಮ್ಮಿಂದ ನಾವೂ ಬೇರೆಯದೊಂದು ಆಯಾಮ ಕಂಡೇವು.
(ಶ್ರೀನಿಧಿ ಡಿ.ಎಸ್ ದಕ್ಷಿಣಕನ್ನಡದ ಕಿನ್ನಿಗೋಳಿಯವರು. ಎಂಎಸ್‌ಡಬ್ಲ್ಯೂ ಪದವೀಧರರಾಗಿರುವ ಇವರು ಸದ್ಯ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬರಹಗಾರರು. ಸಾಹಿತ್ಯ, ಸಿನೆಮಾ, ಫೋಟೋಗ್ರಫಿಯಲ್ಲಿ ಅಪಾರ ಆಸಕ್ತಿ ಇದ್ದು, ಕಥೆ, ಕವಿತೆ, ಲಲಿತ ಪ್ರಬಂಧಗಳನ್ನು ಬರೆಯುತ್ತಾರೆ.)