-ಕೃತಿಕಾರಾಣಿ ಟಿ.ಎಸ್.
ಹೊಸದಂತೆ...
ವರ್ಷ ಹೊಸದಂತೆ!
ಏನು ಹೊಸದೋ...
ರಾತ್ರಿ ಬೆಳಗಾಗುವಾಗ
ಹಳತೆಲ್ಲವೂ ಹೊಸತು
ಎಲ್ಲರೊಟ್ಟಿಗೆ ಕಲೆತು
ಕೂಗಿ, ಕಿರುಚಿ, ಬೊಬ್ಬೆ ಹಾಕಿ
ಕುಡಿದು, ಕುಣಿದು
ಕೇಕ ಕಡಿದು
ರಸ್ತೆ ತಡೆದು
ಪಟಾಕಿ ಹೊಡೆದು
ಮಾಡುವುದೇಕೆ?
ಸಭ್ಯರಿಗೆಲ್ಲ ಅಸಭ್ಯತೆಯ ದರ್ಶನ?
ದಿನವೂ ಏಕೆ ಹೊಸತಲ್ಲ?
ಅಂದು ಮಾತ್ರ ಹೊಸದೇ...
ಕ್ಯಾಲೆಂಡರ್‌ನ ದಿನ ಮುಗಿದರೆ
ಹಳತೆಲ್ಲವೂ ಹೊಸತೇ
ದಿನವೂ ಏಕೆ ಸೇರಬಾರದು
ಸಂತಸದಿ ಕಳೆಯಬಾರದು?
ಮಾತು ಹಾಡು ಕೇಕೆ
ಕುಣಿತ ಮಾತ್ರ ಸಾಕೆ?
ನಿರಂತರ ಸಂಭ್ರಮಕೆ,
ಇನ್ನು ಬೇರೆ ಬೇಕೆ?
ಬದಲಾಗದ ಋತು 
ಇಳಿಯದ ಮತ್ತು
ಇದೇ ಆರಂಭದ ಹಕೀಕತು‌

******

ಹೋರಾಡುತ್ತಿದ್ದೇವೆ...!?
ನಮ್ಮೆಲ್ಲರ ಅಸ್ತಿತ್ವದ ಆದಿಯಿಂದಲೂ
ಅಮ್ಮನೊಡಲಲ್ಲಿ, ಸಾವಿರ ವೀರ್ಯಗಳ ಹಿಂದಿಕ್ಕಿ
ನೆಮ್ಮದಿಯ ಮಡಿಲ ಸೇರಲು,
ಗುಮ್ಮನೊಡನೆಯೂ ಹೋರಾಟವೇ
ನಮ್ಮಿಷ್ಟದ ಆಟಕ್ಕೂ ಊಟಕ್ಕೂ,
ತಮ್ಮ ತಂಗಿ ಅಣ್ಣ ಅಕ್ಕ ಅವರನ್ನೂ ಬಿಡದೆ,
ಸುಮ್ಮನಿರಲಾಗದೇ, ಮಾಡುತ್ತಲೇ ಬಂದಿದ್ದೇವೆ ಯುದ್ಧ!

ಎತ್ತ ಹೋದರತ್ತ ಕಾದಾಡುತ್ತೇವೆ ಈಗಲೂ
ನೆತ್ತರುಕ್ಕಿಸುವ ಗಡಿಗಳಲ್ಲಿ, ಯೋಧರ ಬಲಿಯಿಕ್ಕಿ
ಇತ್ತಲಿಂದಾಚೆಗೆ ನೆಲವ ಪಡೆಯಲು,
ಹೊತ್ತ ಇಳೆಗೂ ಬೇಲಿ ಹಾಕುವುದೇ?
ಬತ್ತದ ಬಯಕೆ ಅಧಿಕಾರಕ್ಕೂ ಐಶ್ವರ್ಯಕ್ಕೂ
ಮತ್ತಿನ್ನು ಆಪರಿಯ ದುರಾಸೆಯ ತೊಲಗಿಸದೆ, 
ಕಿತ್ತೊಗೆಯಲಾರದೇ, ಮಾಡುತ್ತಲೇ ಬಂದಿದ್ದೇವೆ ಯುದ್ಧ!

ಕಿಚ್ಚು ಹಚ್ಚಿಕೊಳ್ಳುತ್ತೇವೆ ಚಿತ್ತಕ್ಕೆ ಯಾವಾಗಲೂ
ಹುಚ್ಚೆದ್ದು ಕುಣಿದ ಮನ ಅತ್ತಿದ್ದೂ ಇದೆ ಬಿಕ್ಕಿ ಬಿಕ್ಕಿ
ಬೆಚ್ಚಗಿಡದೇ ಬೆಚ್ಚಿಸುವ ಸೋಲು,
ಮೆಚ್ಚಿದ್ದೆಲ್ಲವ ನೀಡುವ ಗೆಲುವೇ ಒಲವೇ?
ಹೊಚ್ಚಹೊಸದೇನಲ್ಲ, ರಾಮನಾಡಿದ್ದಕ್ಕೂ ಪಾರ್ಥನಾಡಿದ್ದಕ್ಕೂ, 
ಮುಚ್ಚಿಡಲಾಗದ ಆಂತರಿಕ ದ್ವಂದ್ವ ಎಡೆಬಿಡದೆ, 
ಕೊಚ್ಚಿಹಾಕಲಾರದೇ, ಮಾಡುತ್ತಲೇ ಬಂದಿದ್ದೇವೆ ಯುದ್ಧ!

******

ಎಂಥಾ ಮಧುರ ಗಳಿಗೆಯದು


ಎಂಥಾ ಮಧುರ ಗಳಿಗೆಯದು
ಜೋರಾದ ಮಳೆಯ ಜೊತೆಗೆ
ಒಂದೇ ಛತ್ರಿಯ ಒಳಗೆ
ಕೈಗೆ ಕೈಯ್ಯ ಬೆಸುಗೆ
ಮೈ ನಡುಗುತಿತ್ತು ಚಳಿಗೆ
ಕಿತ್ತೋದ ಚಪ್ಪಲಿಯೊಂದಿಗೆ
ನಮ್ಮ ಆ ನಡಿಗೆ
ಹಾತೊಯುತಿತ್ತು ಮನ ಪಾನೀಪುರಿಗೆ
ಹೋದೆವು ಪುಟ್ಟನ ಬಳಿಗೆ
ಪುಟ್ಟ ತಗಡಿನ ಕೆಳಗೆ
ಛತ್ರಿಯನಿಟ್ಟು ಸೈಡಿಗೆ
ಆಸೆಪಟ್ಟು ನೀರ ಪುರಿಗೆ
ಗೊತ್ತಿತ್ತು ಪುಟ್ಟನಿಗೆ
ಅವನೇ ಗತಿ ನಮಗೆ
ಹೋಗುತ್ತಿದ್ದೆವಲ್ಲ ಆಗ್ಗಾಗೆ
ಜೋಡಿ ಹಕ್ಕಿಗಳ ಹಾಗೆ
ಕಿವುಚಿದ ಪುರಿ ಮಸಾಲೆಗೆ
ಖಾರದ ನೀರು ತೂತಿನೊಳಗೆ
ದಹಿ ಹಾಕಿ ಸುರಿದವಗೆ
ತುಂಬ ಸೇವಿನ ಮುಚ್ಚಿಗೆ
ಪ್ರಾಣವಿದು ನಮ್ಮ ಜೋಡಿಗೆ
ಪುಟ್ಟ ನಗುತ್ತ ಸುಮ್ಮಗೆ
ನಲವತ್ತನಿಳಿಸುತ್ತ ಜೇಬಿಗೆ
ಸುರಿದ ಪಾನಿಯ ಕೊನೆಗೆ