-ಸತೀಶ ಹೆಗಡೆ ಶಿರಸಿ
ಪಿಸುಮಾತುಗಳನಾಡುತಿರೆ ರಾಧೆ ಶ್ಯಾಮನೊಳು
ನಗುತಿದ್ದನವನಲ್ಲಿ ಯಮುನೆ ತಟದಿ |
ಬರಿದೆ ನಗುವೇಕೆನುತ ಮುನಿಸತೋರಲು ನಲ್ಲೆ
ಕಿವಿಯಲೇನೋ ಪೇಳುತಿದ್ದ ಸೊಗದಿ || 1 ||

ಪ್ರೇಮಿಗಳ ಸರಸ ಸಲ್ಲಾಪವನು ನೋಡುತ್ತ
ಕೇಳದಿಹ ಮಾತಿಂಗೆ ಯಮುನೆ ಕೊರಗಿ -
ಒಲವಿನುಲಿಗಳನಾಲಿಸುವ ಬಯಕೆಯನು ಹೊತ್ತು
ಸದ್ದಿರದೆ ಹರಿದಿಹಳು ದಡಕೆ ಬಾಗಿ || 2 ||

ತಾನಿದ್ದ ಕಡೆ ಮೆಲ್ಲ ಮೇಲೇರಿ ಬರುತಲಿಹ
ಯಮುನೆಯಾಂತರ್ಯವನು ಶ್ಯಾಮನರಿತು -
ಸಣ್ಣ ಕಲ್ಲನು ಹೆಕ್ಕುತಲಿ ಸಹಜದಿಂದೆಸೆದು
ಅಲೆಯೆಬ್ಬಿಸಿದನಾತ ರಾಧೆಗಾತು || 3 ||

ಮಧ್ಯರಾತ್ರಿಯಲಂದು ಸೀಳಿಕೊಂಡೆನು ನನ್ನ
ನಿನ್ನ ಬದುಕಿಸುವಾಸೆಯನ್ನು ತಳೆದು |
ದಡದಿ ಬೆಡಗಿಯ ಜೊತೆಗೆ ಭುಜಬಳಸಿ ಕುಳಿತೀಗ
ಕೆಣಕುತಿಹೆ ನನ್ನ ನೀ ಕಲ್ಲನೆಸೆದು || 4 ||

ಮಾಡಿದುಪಕಾರಗಳ ಮರೆತೆಯೇನೋ ಶ್ಯಾಮ
ನಿನಗೀಜು ಕಲಿಸಿದ್ದೆನೊಡಲಿನಲ್ಲಿ |
ಸೊಕ್ಕು ತೋರುವೆಯೀಗ ‘ದಕ್ಕದಿರಲೀ ರಾಧೆ'-
ಯೆನುತ ಹರಿದಳು ಯಮುನೆ ಕೋಪದಲ್ಲಿ || 5 ||

ಗಂಭೀರ ನುಡಿಗಳಿಗೆ ದಿಗಿಲುಗೊಂಡನು ಶ್ಯಾಮ
ಧುಮುಕಿದನು ತಡಮಾಡದೆಲೆ ಯಮುನೆಗೆ |
ಶ್ಯಾಮನಾಲಿಂಗನಕೆ ಕಪ್ಪಗಾಯಿತು ನೀರು
ಬೊಗಸೆಯಲಿ ಮರಳೆತ್ತಿ ತಂದ ದಡೆಗೆ || 6 ||

ಹಸಿಮೈಯನೊರೆಸಿದಳು ನಲ್ಲೆ ದಾವಣಿಯಿಂದ
ಶ್ಯಾಮ ಕುಸಿದನು ಬೊಗಸೆ ನೋಡಿ ಬೆವತು |
ಹುಡುಕಿದನು ಸಿಗಲಿಲ್ಲ ತಾನೆಸೆದ ಕಲ್ಲುಗಳು
ಯೋಚಿಸುತಲಿಹನೀಗ ರಾಧೆ ಕುರಿತು || 7 ||

******
ಕುಟಿಲಪ್ರೀತಿ
ಮೊಗದ ಮೇಲಿನ ನಗೆಗೆ ದ್ವೇಷದುರಿಯನು ತೀಡಿ
ತಿಳಿಬಗೆಗೆ ಕೆಸರೆರಚೊ ಕುಟಿಲವೇಕೆ? |
ನಡುಬೀದಿಯಲಿ ಸಿಕ್ಕ ಭರವಸೆಯ ಕತ್ತಮುಕಿ
ಉಸಿರುಗಟ್ಟಿಸುವಂಥ ಛಲವಿದೇಕೆ? // 1 //

ನಿತ್ಯವರಳುವ ನಗೆಯ ಮಲ್ಲಿಗೆಯ ದೂರುತಲಿ
ಮನದಾಸೆ ಮುರುಟಿಸುವ ಮದವಿದೇಕೆ? |
ಸತ್ಯ ತೆರೆದಿಡೊ ಮನವು ಮಿಥ್ಯವಲ್ಲದ ಪ್ರೀತಿ
ಬೇಡವೆನ್ನುವ ಬರಡು ಶಪಥವೇಕೆ? // 2 //

ಕನಸುಗಂಗಳ ಸುಟ್ಟ ಶುಷ್ಕಭಾವಗಳೊಲವು
ಮುಸಿನಗುತ ನೆಮ್ಮದಿಯ ನುಂಗುತಿರಲು |
ತೆವಳಲುಳಿವುದೆ ಕಸುವು? ಹಾರಲಿರುವುದೆ ರೆಕ್ಕೆ?
ಕುಸಿದ ನಂಬುಗೆ ಬದುಕು ನರಳುತಿರಲು // 3 //