-ಸುಶ್ರುತ ದೊಡ್ಡೇರಿ
ನಗರದ ಚಿತ್ರವನ್ನು ಗೋಡೆಗೆ ನೇತುಹಾಕಿದರೆ
ಅದರಲ್ಲಿ ಸಾವಿರಾರು ಜಲಪಾತಗಳು
ಎಲ್ಲವಕ್ಕೂ ಕಡುಗಪ್ಪು ಬಣ್ಣ
ಎಲ್ಲ ಜಲಪಾತಗಳಲ್ಲೂ ಭೋರ್ಗರೆಯುತ ಹರಿವ
ಜಲರೂಪಿ ವಾಹನಗಳು, ಜಲರೂಪಿ ಜನಗಳು
ಕೆಂದಾವರೆ ಕಂಡಲ್ಲಿ ನಿಂತು, ಘಳಿಗೆ ಕಾದು,
ಹೂವು ಹಸಿರಾದದ್ದೇ ಮತ್ತೆ ದುಡುದುಡು ಇಳಿವ
ನಿಶ್ತಂತು ಶರಧಿಪರಿ ಧಾರೆ
ಎತ್ತ ಹೋಗುತ್ತಿದ್ದೇವೆ ಎಲ್ಲ?
ಹಾಹಾಕಾರ ಅಲ್ಲಲ್ಲಿ:
ಕಲುಷಿತ ವಾತಾವರಣ!
ಕಲುಷಿತ ವಾತಾವರಣ!!
ಉಸಿರಾಡಲೂ ಇಲ್ಲ ಬೇಕಾದಷ್ಟು ಸ್ವಚ್ಛಗಾಳಿ
ಹಿಂದೆ ತಿರುಗಿ ನೋಡಿದರೆ
ನಮ್ಮ ವಾಹನವೂ ಉಗುಳುತ್ತಿದೆ ಹೊಗೆ
ಕೊಡಿ ಶಾಲೆಗಳಿಗೆ ರಜೆ
ಮಾಡಿ ಕೆಲಸ ಮನೆಯಿಂದಲೇ
ಸಮ ಬೆಸ ಸಾಮು ಶುರುವಾಗಿದೆ ಮತ್ತೆ
ಒಂದು ದೇಹ ಎಷ್ಟು ತುಂಡಾಯಿತೆಂಬ ಲೆಕ್ಕ
ಒಂದು ರಸ್ತೆಯಲೆಷ್ಟು ಗುಂಡಿಗಳಿವೆಯೆಂಬ ಲೆಕ್ಕ
ಒಂದು ಭಾಷಣದಲ್ಲೆಷ್ಟು ಸುಳ್ಳಡಗಿತ್ತೆಂಬ ಲೆಕ್ಕ
ಒಂದು ಗುಂಪಲ್ಯಾರು ಎಡ ಯಾರು ಬಲವೆಂಬ ಲೆಕ್ಕ
ಒಂದು ಸಮಜಾಯಿಷಿಯಲ್ಲಿ ಮುಚ್ಚಿಟ್ಟಿದ್ದೆಷ್ಟೆಂಬ ಲೆಕ್ಕ
ಒಂದು ಮಳೆಬಿಲ್ಲು ಎಷ್ಟು ಹನಿಗಳ ಹಾದು ಬಂತೆಂಬ ಲೆಕ್ಕ
ಯಾರು ಕೊಡುವರು
ಒಂದು ಲೆಕ್ಕದಲ್ಲೆಷ್ಟು ತಪ್ಪಿದೆಯೆಂಬ ಲೆಕ್ಕ
ಕುಳಿತಿದ್ದೇವೆ ಕರಿಹಲಗೆಯ ಮುಂದೆ ಎಲ್ಲ
ಯುಗಯುಗದಲ್ಲೂ ಮೂಡಿಬರುವೆನೆಂದಿದ್ದ ಮೇಷ್ಟ್ರು
ಯಾಕೋ ಇನ್ನೂ ಬಂದೇ ಇಲ್ಲ
ಇನ್ನೂ ಯಾವ ಬೆಲ್ ಹೊಡೆಯಲು ಕಾಯುತ್ತಿರುವರೋ
ಈಗ ಈ ಲೆಕ್ಕವನ್ನೆಲ್ಲ ಬಿಡಿಸಬೇಕಿದೆ ನಾವೇ
ನಮ್ನಮ್ಮ ಪುಸ್ತಕದಲ್ಲಿ ನಮನಮಗೆ ತಿಳಿದಂತೆ
ನಮ್ಮನಮ್ಮ ಲೆಕ್ಕ ಬಿಡಿಸಿ ತುಂಬಿಸಬೇಕಿದೆ ಪುಟಗಳ
ನೆರೆಯವರು ನೆರೆದವರು ನೆರವಾಗುವವರು
ಎಷ್ಟು ಕಾಲ ಜೊತೆಗಿರುವರೋ ಯಾರಿಗೆ ಗೊತ್ತು?
ಪುಸ್ತಕವ ಚೀಲದಲ್ಲಿಟ್ಟು ಜಿಗಿಯಲೇಬೇಕು
ಆ ಅದೇ ಜಲಪಾತಕ್ಕೆ: ಆಗುವ ಹಂಬಲದಲ್ಲಿ
ಹರಿವ ನೀರೊಳಗಿನ ಮತ್ತೊಂದು ಬಿಂದು.
(ಲೇಖಕರು ಕವಿ ಮತ್ತು ಲಲಿತ ಪ್ರಬಂಧಕಾರರು)