ಈಗ ಪೀಠಿಕೆ ಬೇರೆಯೇ ವಿಷಯಕ್ಕೆ ಇಟ್ಟದ್ದಾದರೂ ಇರುವ ಮುನ್ನುಡಿ ಸಾರ್ವಕಾಲಿಕ. ಕತೆ ಕಾದಂಬರಿ ಕಾವ್ಯ ಪ್ರಬಂಧ ಹೀಗೆ ವಿವಿಧ ರೂಪಗಳಲ್ಲಿ ಅಗೋಚರವಾದ ವಿಚಾರವನ್ನು ತಿಳಿಯಲು ಹೆಣಗಾಡುತ್ತೇವೆ. ಕಣ್ಣೆದುರಿಗಿದ್ದ ವಸ್ತು ಕೂಡ ಯಾವುದೋ ತತ್ತ್ವವನ್ನು ಬೋಧಿಸುವಂತೆ ತೋರುವಲ್ಲಿ ಲೇಖಕ ತೊಡಗುತ್ತಾನೆ; ಓದುಗ ಅನುಸರಿಸುತ್ತಾನೆ ಅಥವಾ ಖಂಡಿಸುತ್ತಾನೆ. ಒಟ್ಟಾರೆಯಾಗಿ ಪುಸ್ತಕವೆಂಬ ಅನರ್ಘ್ಯ ರತ್ನದ ಬಳಕೆಯ ಕುರಿತಾಗಿ ಚಿಂತನೆಯನ್ನು ನಡೆಸುವುದಾದರೆ ನಮ್ಮ ಮುಂದೆ ಹಲವು ಪ್ರಾಥಮಿಕ ಸಮಸ್ಯೆಗಳು ಹಾಜರಾಗುತ್ತವೆ. ಅವುಗಳನ್ನು 'ಸಮಸ್ಯೆಗಳೆಂದುಕೊಳ್ಳಬೇಕೆ?' ಎನ್ನುವಲ್ಲಿಯೇ ಸಮಸ್ಯೆ ಹಾಜರು.
ಪುಸ್ತಕ ಓದುವುದರ ಕುರಿತು ಕೂಡ ಅನೇಕ ಪೂರ್ವಾಗ್ರಹಗಳಿವೆ. ಉದಾಹರಣೆಗೆ ಒಬ್ಬ ವ್ಯಕ್ತಿ ಸದಾ ದಪ್ಪ ದಪ್ಪ ಪುಸ್ತಕಗಳನ್ನು ಹೊಕ್ಕಿ ಅಲ್ಲಿನ ಜ್ಞಾನವನ್ನು ಎರವಲು ಪಡೆಯುತ್ತಾನೆ. ಅಲ್ಲಿ ಇದ್ದ ವಿಷಯ ಪ್ರಸ್ತುತಿ ಆತನ ಬುದ್ಧಿ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ಆ ವ್ಯಕ್ತಿಯಂತೆ ಜ್ಞಾನ ಪಡೆಯುವುದಕ್ಕಷ್ಟೇ ಓದುತ್ತಾರೆ ಎಂದುಕೊಳ್ಳುವುದು ತಪ್ಪು. ಮನರಂಜನೆಯ ಮಾಧ್ಯಮವಾಗಿ ಪುಸ್ತಕಗಳು ಅತ್ಯಂತ ಜನಪ್ರಿಯವಾಗಿದೆ. ಹೀಗೆ ಪುಸ್ತಕ ಓದುವುದು ಕೆಲವರಿಗೆ ಅಭ್ಯಾಸವಾಗಿಯೋ, ಕೆಲವರಿಗೋ ಹವ್ಯಾಸವಾಗಿಯೋ ಪರಿಚಿತ. ಓದುವಿಕೆಯ ನಾನಾ ಸ್ತರಗಳಲ್ಲಿ ನಾನಾ ರೀತಿಯ ವ್ಯಕ್ತಿತ್ವಗಳೂ ಕಾಣಸಿಗುತ್ತಾರೆ. ಪ್ರತಿಯೊಬ್ಬ ಓದುಗನ ಇಷ್ಟಗಳು ಬೇರೆಬೇರೆ ರೀತಿಯಲ್ಲಿರುತ್ತವೆ. ಅದೇ ರೀತಿ ಆತನ ಮೇಲೆ ಪುಸ್ತಕಗಳು ಬೀರುವ ರೀತಿ ಕೂಡ. ಎಲ್ಲರ ವಾದಗಳನ್ನು ಒಪ್ಪಿಕೊಳ್ಳುವುದಂತೂ ಕಷ್ಟವೇ. ಹಾಗಾಗಿ ವೈವಿಧ್ಯತೆ ಇದೆಯೆಂಬುದನ್ನು ಒಪ್ಪಿಕೊಳ್ಳಬೇಕು.
ನಮ್ಮ ಕಾಲೇಜುಗಳಲ್ಲಿ ಗ್ರಂಥಾಲಯದ ದೃಶ್ಯಗಳು ಹೆಚ್ಚು ಕಮ್ಮಿ ಹೀಗೆಯೇ ಇರುತ್ತವೆ. ಒಂದಷ್ಟು ಜನರು ನೋಟ್ಸು, ಅಸೈನ್ಮೆಂಟು ಎಂದು ಬಂದರೆ ಒಂದಷ್ಟು ಜನ ಪರೀಕ್ಷೆಯ ಅಪೂರ್ವ ತಯಾರಿಗೆ. ಮತ್ತೊಂದಷ್ಟು ಜನ ಮನರಂಜನೆಗೆ, ಕಾಲಹರಣಕ್ಕೆ ಬಂದರೆ, ಮತ್ತೊಂದಿಷ್ಟು ಕಾಟಾಚಾರಕ್ಕೆ. ಇಂಥ ವಿವಿಧ ವಿನೂತನ ವಿಷಯಗಳು ಮೇಳೈಸಿದ ಕಾಲೇಜು ಗ್ರಂಥಾಲಯಕ್ಕೆ ಕಾಲೇ ಇಡದವರದ್ದು ಮತ್ತೊಂದು ಪಂಥ. ಕಾಲೇಜುಗಳಲ್ಲಿ ಓದುಗರ ಇನ್ನೊಂದು ವರ್ಗವನ್ನು ಕಾಣೋಣ. ಖಾಲಿ ಕ್ಯಾಂಟೀನಿನ ಮೂಲೆಯಲ್ಲೋ ಪಾರ್ಕಿನ ಬೆಂಚಿನಲ್ಲೋ ಕೈಲೊಂದು ಪುಸ್ತಕವನ್ನಿಟ್ಟುಕೊಂಡು ಓದುವ ವರ್ಗಕ್ಕೆ ಗ್ರಂಥಾಲಯದ ಪ್ರಶಾಂತತೆಯ ಹಂಗಿಲ್ಲ. ಅಥವಾ ತುಂಬಿದ ಕ್ಯಾಂಟೀನಿನ ನಡುವೆ, ತುಂಬಿದ ಬಸ್ಸಿನ ಎಡೆಯಲ್ಲಿ ಪುಸ್ತಕ ಓದುವ ಹುಚ್ಚರಿದ್ದರೆ ಅವರಿಗಂತೂ ಲೋಕದ ಹಂಗು ಇಲ್ಲವೇ ಇಲ್ಲ.
ಕತೆಯೆನ್ನುವುದು ಮನೋಗತಿಯ ಜೊತೆ ಮೇಳೈಸಿ ಬುದ್ಧಿಗೆ ಹೊಸದಾದ ಹೊಳಹುಗಳನ್ನು ದಕ್ಕಿಸುತ್ತದೆ. ಮುಖ್ಯವಾಹಿನಿಯನ್ನು ಬಿಟ್ಟು ಮಾತುಗಳು ತಮ್ಮ ಪಾಡಿಗೆ ಕಟ್ಟಿಕೊಂಡ ವಿಷಯಗಳ ನಗರಕ್ಕೆ ದಾಂಗುಡಿಯಿಡುವ ದುಸ್ಸಾಹಸ ಕತೆಗಾರನ ಕೌಶಲಕ್ಕೆ ಸವಾಲಾದರೆ ಆ ಕತೆಗಳನ್ನು ತಮ್ಮದೇ ಪರಿಸರಕ್ಕೆ ಅನುವಾಗಿಸಿಕೊಂಡು ಓದುವುದು ಓದುಗನ ಸವಾಲು. ಇಂತಹ ಓದುಗನ ಚಿತ್ತದೊಳಗಿನ ಚಿತ್ರಗಾರನು ಶಾಂತಿಯಿಂದ ಇರಬೇಕು. ಹಾಗಾದಾಗ ಪುಸ್ತಕ ಲೋಕದಲ್ಲಿ ನಮಗೆ ಪ್ರವೇಶ. ಹಾಗೆಂದು ಮನಸಿನ ಶಾಂತಿಗೆ ಹೊರ ಗದ್ದಲಗಳು ಮುಖ್ಯವೇನು ಆಗುವುದಿಲ್ಲ. ಮನ ಮಂದಿರದ ನೆಮ್ಮದಿ ಮುಖ್ಯ.
ಓದುಗರ ನಾನಾ ವರ್ಗಗಳು ಎಂದಿಗೂ ಸಮಸ್ಯೆಯಲ್ಲ. ಹೇಳುವ ವಿಷಯಗಳ ಪ್ರಸ್ತುತಿಯ ರೀತಿ ಬೇರೆಯಷ್ಟೆ. ಕೆಲವೊಮ್ಮೆ ನಮ್ಮ ಓದುವಿಕೆ ನಿಧಾನವಾಗಬಹುದು ಅಥವಾ ನಿಂತೇ ಹೋಗಬಹುದು. ಇದಕ್ಕೆ ಕೆಲ ಘಟನೆಗಳೋ ಕೆಲ ಸಂದರ್ಭಗಳೋ ತಡೆಯಾಗಬಹುದು. ಆದರೆ ಅವೆಲ್ಲವನ್ನು ಮೀರಿ ನಾವು ಪುಸ್ತಕ ಲೋಕದೊಳಗೆ ಪ್ರವೇಶ ಪಡೆಯುವುದು ಪುಸ್ತಕ ಪ್ರೇಮಿಯ ಗುರಿಯಾಗುತ್ತದೆ. ನಿಧಾನವಾದ ಓದುವಿಕೆ ಮತ್ತೊಮ್ಮೆ ವೇಗ ಪಡೆದೇ ಪಡೆಯುತ್ತದೆ. ನೆನಪಿಡಿ ಪುಸ್ತಕ ಪ್ರೇಮಿ ಎಂದಿಗೂ ಭಗ್ನ ಪ್ರೇಮಿಯಾಗಲ್ಲ. ಆತ ಪುಸ್ತಕ ವಿರಹಿಯಾಗುತ್ತಾನಷ್ಟೇ!
(ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರಥಮ ವಷದ ವಿದ್ಯಾರ್ಥಿನಿ)