-ಪ್ರಸನ್ನ ಕಂಬದಮನೆ
ಕೆಲವೊಂದು ಘಟನೆಗಳು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಘಟಿಸಬಾರದು ಎಂಬುದು ಎಲ್ಲರ ಆಶಯವಾಗಿರುತ್ತದೆ; ಆದರೆ ಯಾವುದು ಆಗಬಾರದಿತ್ತೋ ಅದು ವಾಸ್ತವವಾಗಿಯೇಬಿಡುತ್ತದೆ. ಕೋಟ್ಯಂತರ ಜನರ ಬದುಕು ರಾತ್ರಿ ಬೆಳಗಾಗುವುದರಲ್ಲಿ ಬೀದಿಗೆ ಬಂದುಬಿಡುತ್ತದೆ. ಬಹುಶಃ ನಿಮಗೆಲ್ಲ ಸೆಪ್ಟೆಂಬರ್ 2008ರಲ್ಲಿ ಅಮೇರಿಕದಲ್ಲಿ ನಡೆದ ಲೇಮನ್ ಬ್ರದರ್ಸ್ ಕಂಪನಿಯ ಹಗರಣದ ಬಗ್ಗೆ ತಿಳಿದಿರುತ್ತದೆ. ಈ ಒಂದು ಹಗರಣ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮ ಭೀಕರವಾದದ್ದು. ಆಗ ಒಮ್ಮೆಲೆ ಜಾಗತಿಕ ಆರ್ಥಿಕರಂಗ ಈ ಹಗರಣದಿಂದ ಬೆಚ್ಚಿಬಿದ್ದಿತ್ತು. ಈಗ ಕೋವಿಡ್‌ನಿಂದ ಜಗತ್ತು ಚೇತರಿಸಿಕೊಂಡು ಎಲ್ಲದೂ ಸರಿಯಾದ ಹಾದಿಗೆ ಬರುತ್ತಿದೆ ಎಂದು ಸಮಾಧಾನದಿಂದಿರುವಾಗ ಮೂರು ತಿಂಗಳಿಂದೀಚೆಗೆ ಮತ್ತೆ ‘ಆರ್ಥಿಕ ಹಿಂಜರಿತ’ದ ಬಗ್ಗೆ ಗುಸು ಗುಸು ಶುರುವಾಯಿತು; 'ಭಾರತದಲ್ಲಿ ಸಮಸ್ಯೆಯಾಗುವುದಿಲ್ಲ' ಎಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಪಡುತ್ತಿರುವಾಗ ಒಂದೊಂದೇ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿ ಬಿತ್ತರವಾಗತೊಡಗಿತು. 

2023 ಶುರುವಾಗಿ ಇನ್ನೂ ಒಂದು ತಿಂಗಳು ಆದದ್ದಷ್ಟೇ, ಅದಾಗಲೇ 20,000 ಕ್ಕೂ ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರತಿದಿನವೂ ಒಂದೊಂದು ಸಂಸ್ಥೆ ಉದ್ಯೋಗಿಗಳನ್ನು ವಜಾಗೊಳಿಸುವುದರ ಬಗ್ಗೆ ಸುದ್ದಿಯನ್ನು ಪ್ರಕಟಿಸುತ್ತಲೇ ಇವೆ. ಚಿಗುರುತ್ತಿದ್ದ ಆರ್ಥಿಕತೆಯ ಮೇಲೆ ಇವುಗಳು ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುವುದಂತೂ ಸತ್ಯವಾಗಿದ್ದು ಒಳ್ಳೆಯದಾಗಬಹುದೆಂದು ನಿರೀಕ್ಷಿಸಬಹುದಷ್ಟೇ. ಇವೆಲ್ಲ ಸಮಸ್ಯೆಗಳ ನಡುವೆ ನಮ್ಮ ದೇಶದಲ್ಲಿ ಆಗಾಗ ಸದ್ದು ಮಾಡುವುದು 'ಹಗರಣಗಳು'. ದುರ್ದೈವವೆಂದರೆ ಪ್ರತೀ ಬಾರಿಯೂ ಸಮಾಜದಲ್ಲಿ 'ದೊಡ್ಡವರು' ಅನ್ನಿಸಿಕೊಂಡಂವರು ಮಾಡುವ ಹಗರಣಗಳ ಬಲಿಪಶುವಾಗುವುದು ಕಷ್ಟಪಟ್ಟು ದುಡಿದು ಜೀವನ ಸಾಗಿಸುವ 'ಸಾಮಾನ್ಯ ಜನರೇ' ಆಗಿದ್ದಾರೆ.

ಈಗ ನಮ್ಮ ದೇಶದ ಬ್ಯಾಂಕಿಂಗೇತರ ಸಂಸ್ಥೆಗಳು(ಎನ್‌ಬಿಎಫ್‌ಸಿ) ಮತ್ತವುಗಳ ಸ್ಥಿತಿಗತಿಗಳ ಬಗ್ಗೆ ನೋಡೋಣ. ಅಧಿಕೃತವಾಗಿ ಆರ್‌ಬಿಐ 1964ರಲ್ಲಿ ಎನ್‌ಬಿಎಫ್‌ಸಿ ಗಳಿಗೆ ಪರವಾನಿಗೆ ನೀಡಿತು. ಆದರೆ ಅದಕ್ಕೂ ಮುಂಚೆ 1940ರಿಂದಲೇ ಈ ತೆರನಾದ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದವು. ನಮ್ಮ ದೇಶದ ಜಿಡಿಪಿಗೆ ಶೇ 13ರಷ್ಟು ಕೊಡುಗೆ ನೀಡುವ ಈ ವಿಭಾಗದ ಸಂಸ್ಥೆಗಳು ಸಾಮಾನ್ಯ ಬ್ಯಾಂಕಿಂಗ್ ವ್ಯವಸ್ಥೆಗಳ ಚೌಕಟ್ಟನ್ನು ಮೀರಿ ಕಾರ್ಯನಿರ್ವಹಿಸುತ್ತವೆ.  ಇವುಗಳು ಪ್ರಮುಖವಾಗಿ ಬ್ಯಾಂಕುಗಳಿಗೆ ಪೈಪೋಟಿ ನೀಡುವ ಸಂಸ್ಥೆಗಳಾಗಿ ಬದಲಾಗಿದ್ದು ಈಗ ಇತಿಹಾಸ. ಬ್ಯಾಂಕುಗಳು ತಲುಪದ ಜಾಗಗಳನ್ನು ಮತ್ತು ವಿಭಾಗಗಳನ್ನು ಈ ಸಂಸ್ಥೆಗಳು ತಲುಪಿದ್ದು ದೊಡ್ಡ ಗ್ರಾಹಕ ವಲಯವನ್ನು ಸೃಷ್ಟಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ವಾಹನ ಸಾಲ, ಚಿನ್ನದ ಸಾಲ, ಕೃಷಿ ಸಾಲ ಮತ್ತು ಅನೇಕಾನೇಕ ವಿಧವಿಧದ ಸಾಲಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ತಲುಪಿಸಿದ್ದು ಇದೇ ಎನ್‌ಬಿಎಫ್‌ಸಿಗಳು. ನಮ್ಮ ದೇಶದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ತಲುಪಲಾಗದ ಅಥವಾ ಒಂದು ಆರ್ಥಿಕ ವ್ಯವಸ್ಥೆಯಲ್ಲಿನ ಅಂತರವನ್ನು ಕಡಿಮೆ ಮಾಡಿದ್ದು ಇದೇ ಬ್ಯಾಂಕಿಂಗೇತರ ಸಂಸ್ಥೆಗಳು. 

ಏನಿದು ಬ್ಯಾಂಕಿಗೇತರ ಸಂಸ್ಥೆಗಳು: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ)ಗಳೆಂದರೆ ಬ್ಯಾಂಕ್ ಲೈಸೆನ್ಸ್ ಇಲ್ಲದೆ ಬ್ಯಾಂಕ್ ನೀಡುವ ಸಾಲಗಳ ಸೇವೆ ನೀಡುವ ಸಂಸ್ಥೆಗಳು. ಒಬ್ಬ ವ್ಯಕ್ತಿಯು ಕಾರನ್ನು ಖರೀದಿಸಲು ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ನೀಡಿರುತ್ತಾನೆ ಆದರೆ ಬ್ಯಾಂಕ್ ಆತನ ಅರ್ಜಿಯನ್ನು ಪರಿಶೀಲಿಸಿ ಆ ವ್ಯಕ್ತಿಯ ಮರುಪಾವತಿಸುವ ಸಾಮರ್ಥ್ಯವನ್ನೂ ಪರೀಕ್ಷಿಸಿ ಹಣ ಮಂಜೂರು ಮಾಡಲು ಕನಿಷ್ಟವೆಂದರೂ 20 ದಿನ ಬೇಕಾಗುತ್ತದೆ. ಅದೂ ಅಲ್ಲದೆ ಬ್ಯಾಂಕಿಂಗ್ ನಿಯಮಗಳ ಅಡಿಯಲ್ಲಿ ಅರ್ಜಿ ಪುರಸ್ಕಾರಗೊಳ್ಳದೆ ಸಾಲ ಮಂಜೂರು ಕೂಡ ಆಗದಿರಬಹುದು. ಆದರೆ ಇದೇ ವ್ಯಕ್ತಿಗೆ ಕೇವಲ ಎರಡು ದಿನದಲ್ಲಿ ಕಾರ್ ಲೋನನ್ನು ಸಂಸ್ಥೆಯೊಂದು ಮಂಜೂರು ಮಾಡುತ್ತದೆ. ಹೀಗೆ ಬ್ಯಾಂಕಿನ ನೆರಳಿನಂತೆ ಕೆಲಸ ಮಾಡುವ ಸಂಸ್ಥೆಗಳೇ ಬ್ಯಾಂಕಿಂಗೇತರ ಸಂಸ್ಥೆಗಳು(ಎನ್‌ಬಿಎಫ್‌ಸಿ). ಹಾಗಾಗಿಯೇ ಶ್ಯಾಡೋ ಬ್ಯಾಂಕಿಂಗ್ ಕಂಪನಿಗಳು ಎಂದು ಕೂಡ ಈ ಸಂಸ್ಥೆಗಳನ್ನು ಕರೆಯುತ್ತಾರೆ.

ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಅನ್ನಿಸುವಾಗ ಎಡವಟ್ಟುಗಳು ಘಟಿಸಿಬಿಡುತ್ತದೆ. ಸಾಮಾನ್ಯ ಜನರ ನಂಬಿಕೆಗಳಿಗೆ ಘಾಸಿ ಉಂಟುಮಾಡುವಂತಹ ಹಗರಣಗಳು ಬೆಳಕಿಗೆ ಬಂದುಬಿಡುತ್ತದೆ. ಈ ವ್ಯವಸ್ಥೆಯಲ್ಲಿ ಕೂಡ ಹಾಗೆ ಆಗಿದ್ದು ವಿಪರ್ಯಾಸ. ಎನ್ ಬಿ ಎಫ್ ಸಿಗಳು  ದೇಶದ ಆರ್ಥಿಕತೆಗೆ ಸವಾಲಾಗುತ್ತಿವೆಯ? ಹೀಗೊಂದು ದಟ್ಟವಾದ ಪ್ರಶ್ನೆ ಈಗ ಏಳುತ್ತಿದೆ. 2018ರ ಅಕ್ಟೋಬರ್ ವರೆಗೆ ಎನ್‌ಬಿಎಫ್‌ಸಿ ನಮಗೊಂದು ಸಮಸ್ಯೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಯಾವಾಗ ಐಎಲ್ & ಎಫ್‌ಎಸ್ ಹಗರಣ ಬೆಳಕಿಗೆ ಬಂತೋ ಆಗಿನಿಂದ ಈ ಬ್ಯಾಂಕಿಂಗೇತರ ಸಂಸ್ಥೆಗಳ ಹುಳುಕುಗಳು ಒಂದಾದ ಮೇಲೊಂದು ಹೊರಗೆ ಬೀಳುತ್ತಲೇ ಇದೆ.

ರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ಕೊಡುವುದೊಂದೇ ಅಲ್ಲದೆ ಗ್ರಾಹಕರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ ಜೊತೆಗೆ ಹಣ ಪಾವತಿ, ವರ್ಗಾವಣೆಯಂತಹ ಇತರ ಸೌಲಭ್ಯಗಳನ್ನೂ ನೀಡುತ್ತವೆ ಅಂದರೆ ಬ್ಯಾಂಕುಗಳು ಸುರಕ್ಷಿತ ಎಂದರ್ಥ . ಆದರೆ ಠೇವಣಿ ಸಂಗ್ರಹಿಸುವ ಎನ್‌ಬಿಎಫ್‌ಸಿಗಳ ಸಂಖ್ಯೆ ತೀರಾ ಕಡಿಮೆಯಿದ್ದು ಸಾಲ ಕೊಡುವ ಸಂಸ್ಥೆಗಳೇ ಜಾಸ್ತಿ ಇವೆ. ಇವುಗಳ ಆದಾಯದ ಮೂಲವೇ ಮುಕ್ತ ಮಾರುಕಟ್ಟೆಗಳು, ಮ್ಯೂಚುವಲ್ ಫಂಡ್ ಹೂಡಿಕೆದಾರರುಗಳಾಗಿವೆ. ಅನೇಕ ವಿಧದ ಎನ್‌ಬಿಎಫ್‌ಸಿಗಳು ನಮ್ಮ ನಡುವೆ ಕೆಲಸ ಮಾಡುತ್ತಿವೆ. ಕೆಲವೊಂದು ಸಂಸ್ಥೆಗಳು ಬಂಗಾರವನ್ನು ಅಡವಿಟ್ಟುಕೊಂಡು ಸಾಲ ನೀಡಿದರೆ ಇನ್ನೂ ಕೆಲವು ಸಂಸ್ಥೆಗಳು ಕೇವಲ ವಾಹನಗಳ ಖರೀದಿಗೆ  ಮಾತ್ರ ಸಾಲ ನೀಡುತ್ತವೆ. ಇನ್ನೊಂದಿಷ್ಟು ಸಂಸ್ಥೆಗಳು ಗೃಹಸಾಲ ಹಾಗೂ ವೈಯಕ್ತಿಕ ಸಾಲವನ್ನು ನೀಡುತ್ತವೆ. ಒಟ್ಟಿನಲ್ಲಿ ಸಾಲ ಕೊಡಲು ತಾ ಮುಂದು ತಾ ಮುಂದು ಎಂದು ಈ ಎನ್‌ಬಿಎಫ್‌ಸಿಗಳು ಬಂದು ನಿಲ್ಲುತ್ತವೆ.  

ನಮ್ಮ ದೇಶದಲ್ಲಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಮೇಲೆ ಆರ್‌ಬಿಐ ಹೆಚ್ಚಿನ ನಿಯಂತ್ರಣವನ್ನು ಹೊಂದಿರಲಿಲ್ಲ. ಈ ಒಂದು ಕಾರಣದಿಂದಲೇ ಈ ಸಂಸ್ಥೆಗಳು ಬೇಕಾಬಿಟ್ಟಿ ವ್ಯವಹಾರ ಮಾಡಲು ಪ್ರಾರಂಭಿಸಿದವು; ಜೊತೆ ಜೊತೆಗೆ ವಿಪರೀತವಾಗಿ ಬೆಳೆದವು ಕೂಡ. ನಮ್ಮ ದೇಶದಲ್ಲಿ ಸುಮಾರು 11,400 ಎನ್‌ಬಿಎಫ್‌ಸಿ ಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳು ನೀಡಿದ ಸಾಲದ ಮೊತ್ತ ರಾಷ್ಟ್ರೀಯ ಬ್ಯಾಂಕುಗಳು ನೀಡಿದ ಸಾಲವನ್ನೂ ಮೀರಿಸುವಷ್ಟಿದೆ ಅಂದರೆ ಈ ಸಂಸ್ಥೆಗಳ ವ್ಯಾಪ್ತಿಯನ್ನು ನೀವೇ ಅಂದಾಜಿಸಿಕೊಳ್ಳಿ.  

ಕಳೆದ ಅಕ್ಟೋಬರ್ 2018 ರಲ್ಲಿ ನಮ್ಮ ದೇಶದ ಅತ್ಯಂತ ಹಳೆಯ ಎನ್‌ಬಿಎಫ್‌ಸಿಗಳಲ್ಲೊಂದಾದ ಐಎಲ್ & ಎಫ್‌ಎಸ್ ಸಂಸ್ಥೆಯ ಹಗರಣ ಬೆಳಕಿಗೆ ಬಂತು. ಅದಾದ ಮೇಲೆ ಡಿಎಚ್‌ಎಫ್‌ಎಲ್, ಅಲ್ಟಿಕೊ ಕ್ಯಾಪಿಟಲ್ ಲಿಮಿಟೆಡ್ ಹೀಗೆ ಒಂದರ ಮೇಲೆ ಒಂದು ಎನ್‌ಬಿಎಫ್‌ಸಿಯ ಹಗರಣ ಬೆಳಕಿಗೆ ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಮುಕ್ತ ಮಾರುಕಟ್ಟೆಯಿಂದ ಮನಸೋ ಇಚ್ಛೆ ಸಾಲವನ್ನು ಎತ್ತುವಳಿ ಮಾಡಿ, ಶಂಕಾಸ್ಪದವಾದ ಅನೇಕ ಯೋಜನೆಗಳಲ್ಲಿ ಹೂಡಿಕೆ ಮಾಡುವ ಕೆಲಸವನ್ನು ಈ ಎನ್‌ಬಿಎಫ್‌ಸಿಗಳು ಮಾಡಿದವು. ದುರ್ದೈವವೆಂದರೆ ಭಾರತದ ಕಾರ್ಪೋರೇಟ್ ಜಗತ್ತಿನ ಅನೇಕ ಗಣ್ಯರು ಇಂಥ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಲ್ಲಿದ್ದರು ಮತ್ತೆ ಇದ್ದಾರೆ. ಇವರುಗಳೆಲ್ಲ ಇದ್ದು ಕೂಡ ಸಾಲ ಮರುಪಾವತಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಬೆಳವಣಿಗೆಗಳನ್ನು ನೋಡುತ್ತಾ ಮೂಕಪ್ರೇಕ್ಷಕರಾಗಿ ಉಳಿದು ಕಂಪನಿಗಳಿಗೆ, ಹೂಡಿಕೆದಾರರಿಗೆ ಮತ್ತು ಸಾಲ ನೀಡಿದವರಿಗೆ ದ್ರೋಹ ಬಗೆಯುವ ಕೆಲಸವನ್ನು ಈ ನಿರ್ದೇಶಕರುಗಳು ಮಾಡಿದರು. ಈ ಕಂಪನಿಗಳು ಮಾಡಿರುವ ಹೂಡಿಕೆಯ ಗುಣಮಟ್ಟವನ್ನು ಪರಿಶೀಲಿಸುವಲ್ಲಿ ಆಂತರಿಕ ಮೌಲ್ಯಮಾಪನಾ ಸಮಿತಿಗಳು ವಿಫಲವಾದವು. ಆಂತರಿಕ ಲೆಕ್ಕಪರಿಶೋಧಕರು ಇಂತಹ ಅವ್ಯವಹಾರಗಳ ಕುರಿತು ಎಚ್ಚರಿಕೆ ನೀಡದೆ ಮೌನವಾಗುಳಿದರು. ಇದೆಲ್ಲದರ ಒಟ್ಟು ಪರಿಣಾಮದಿಂದ ಅತ್ಯಂತ ಸಾಮಾನ್ಯ ಮಟ್ಟದ ಪರಿಶೀಲನೆಯೂ ಇಲ್ಲವಾಯಿತು. ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಬ್ಯಾಂಕ್‌ಗಿಂತ ಹೆಚ್ಚಿನದಾಗಿ ಮೆಚ್ಚಿಕೊಂಡಿದ್ದು ಇದೇ ಎನ್‌ಬಿಎಫ್‌ಸಿಗಳನ್ನು. ಎನ್‌ಬಿಎಫ್‌ಸಿಯ 45 ರಿಂದ 50 ಪ್ರತಿಶತ ಆದಾಯ ಬರುತ್ತಿದ್ದುದು ಮ್ಯೂಚುವಲ್ ಫಂಡ್‌ಗಳಿಂದ. ಆದರೆ ಯಾವಾಗ ಐಎಲ್ & ಎಫ್‌ಎಸ್ ಹಗರಣ ಬೆಳಕಿಗೆ ಬಂತೋ ಆಗ ಅನೇಕ ಮ್ಯೂಚುವಲ್ ಫಂಡ್ ಇನ್‌ವೆಸ್ಟ್ಮೆಂಟ್ ಕಂಪನಿಗಳು ಹೂಡಿಕೆ ಮಾಡಲು ಹಿಂಜರಿದರು; ಇದರ  ಪರಿಣಾಮ ದೇಶದ ಜಿಡಿಪಿಯ ಮೇಲೂ ಬಿತ್ತು.

ಎನ್‌ಬಿಎಫ್‌ಸಿಗಳು ಸ್ತಬ್ಧವಾಗಲು ಕಾರಣವೇನು?: ಶೇಕಡಾ 40% ಕನ್ಸ್ಯೂಮರ್ ಫೈನಾನ್ಸಿಂಗ್ ಮಾಡುತ್ತಿದ್ದ ಇದೇ ಎನ್‌ಬಿಎಫ್‌ಸಿಗಳು ಇವತ್ತು ಭಾಗಶಃ ಸ್ತಭ್ದವಾಗಿವೆ. ಹಾಗಾದರೆ ಯಾಕೆ ಈ ಸ್ಥಿತಿ ಬಂತು? ಐಎಲ್ & ಎಫ್‌ಎಸ್, ಡಿಎಚ್‌ಎಫ್‌ಎಲ್ ನಂತಹ ಸಂಸ್ಥೆಗಳಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅನೇಕ ವ್ಯಕ್ತಿಗಳು ವ್ಯವಹಾರವನ್ನು ಮುಚ್ಚಿಡಲು ಪ್ರಯತ್ನಿಸಿದರು. ಕಂಪನಿಯು ಭಾರಿ ನಷ್ಟದ ಹಾದಿಯಲ್ಲಿ ಸಾಗಿದ್ದರೂ ಪೂರ್ಣಕಾಲಿಕ ನಿರ್ದೇಶಕರು ಮಾತ್ರ ಸಿಬ್ಬಂದಿಗೆ ದೊಡ್ಡಮೊತ್ತದ ವೇತನದ ಚೆಕ್‌ಗಳನ್ನು ಬರೆಯಲು ಸೀಮಿತಗೊಂಡಿದ್ದರು. ಸಂಸ್ಥೆಗಳ ಮೌಲ್ಯಮಾಪನ ವಿಷಯದಲ್ಲಿ ಅನೇಕ ಮೌಲ್ಯಮಾಪನ ಸಂಸ್ಥೆಗಳು ಅಪ್ರಾಮಾಣಿಕವಾಗಿ ವರ್ತಿಸಿದವು. ಇದೆಲ್ಲದರ ಪರಿಣಾಮದಿಂದ ಒದಗಬಹುದಾದ ಆಪತ್ತಿನ ಅರಿವಿದ್ದೂ, ಅದನ್ನು ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳಲು ಕಂಪನಿಗಳು ವಿಫಲವಾದವು. ಅಂದು ಆರ್‌ಬಿಐನ ಕಠಿಣ ನಿಯಮಗಳ ಅನ್ವಯವಾಗದಿರುವುದರಿಂದ, ಭದ್ರತೆಯಿಲ್ಲದೆ ಮಾರುಕಟ್ಟೆಯಿಂದ ಬೇಕಾಬಿಟ್ಟಿ ಸಾಲ ಎತ್ತುವಳಿ ಮಾಡಿದವು. ಭಾರತದಲ್ಲೇ ಅತ್ಯಂತ ಪ್ರತಿಷ್ಠಿತರು ಮತ್ತು ನಂಬಿಕಸ್ಥರು ಎನಿಸಿಕೊಂಡಿದ್ದ ನಿರ್ದೇಶಕ ಮಂಡಳಿ ಸದಸ್ಯರೇ ಇದ್ದ ಕಂಪನಿಗಳು ಅಪಾಯಕಾರಿ ಸ್ಥಳದಲ್ಲಿ ಹೂಡಿಕೆ ಮಾಡಿವೆ ಎಂಬುದನ್ನು ಅರಗಿಸಿಕೊಳ್ಳಲೇ ಕಷ್ಟವಾಗುತ್ತಿದೆ. ಇದನ್ನು ಮೈಮರೆವು ಅಥವಾ ಅಸಾಮರ್ಥ್ಯ ಎನ್ನುವುದೋ ಅಥವಾ ದುರಾಸೆ ಇಲ್ಲವೇ ದುರಹಂಕಾರ ಎಂದು ಬಣ್ಣಿಸುವುದೋ ಎಂಬುದೇ ತಿಳಿಯದಾಗಿದೆ. ಅದೇನೇ ಇದ್ದರೂ ಅವರ ಮೇಲಿರಿಸಿದ್ದ ನಂಬಿಕೆ ನಶಿಸಿರುವುದಂತೂ ಸ್ಪಷ್ಟ.

ಎನ್‌ಬಿಎಫ್‌ಸಿಗಳನ್ನು ಫಂಡ್ ಮಾಡುತ್ತಿದ್ದ ಅನೇಕ ಮ್ಯೂಚುವಲ್ ಫಂಡ್ ಇನ್‌ವೆಸ್ಟ್ಮೆಂಟ್ ಕಂಪನಿಗಳು ಈಗ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ. ರಿಯಲ್ ಎಸ್ಟೇಟ್ ವಿಭಾಗದಲ್ಲಿ ಅನೇಕ ಬಿಲ್ಡರ್‌ಗಳು ಹಣ ತರುತ್ತಿದ್ದುದು ಇದೇ ಎನ್‌ಬಿಎಫ್‌ಸಿಗಳಿಂದ. ಆದರೆ ಯಾವಾಗ ಹಣದ ಹೂಡಿಕೆಯೇ ಇಲ್ಲದಾಯಿತೋ ಎನ್‌ಬಿಎಫ್‌ಸಿಗಳ ಬಳಿ ಬಿಲ್ಡರ್‌ಗಳಿಗೆ ನೀಡಲು ಹಣ ಇಲ್ಲದಾಯಿತು; ರಿಯಲ್ ಎಸ್ಟೇಟ್ ಸೆಕ್ಟರ್‌ನಲ್ಲಿನ ಅನೇಕ ಬಿಲ್ಡರ್‌ಗಳು ದೊಡ್ಡ ದೊಡ್ಡ ಯೋಜನೆಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂತು. ಇವೆಲ್ಲವೂ ಒಟ್ಟಿಗೆ ಸೇರಿ ನಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು. 

ಆರ್‌ಬಿಐ ಅಂದಾಜು 4 ಸಾವಿರ ಎನ್‌ಬಿಎಫ್‌ಸಿಗಳ ನೋಂದಣಿ ರದ್ದುಪಡಿಸಿ, ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಆಗಬೇಕಾದ ಬದಲಾವಣೆ ಅಥವಾ ನಿರ್ಧಾರಗಳು ಹಲವಿದೆ. ಈಗ ಆರ್‌ಬಿಐ ಎನ್‌ಬಿಎಫ್‌ಸಿಗಳ ಮೇಲೆ ಅಂಕುಶ ಹಾಕಲು ಶುರು ಮಾಡಿದೆ. ಕಳೆದ ಜನವರಿ 2022 ರಲ್ಲಿ 'ಬ್ಯಾಂಕಿಂಗೇತರ ಸಂಸ್ಥೆಗಳಿಗಾಗಿಯೇ ‘ಮಾಸ್ಟರ್ ಸರ್ಕ್ಯುಲರ್' ಒಂದನ್ನು ಹೊರಡಿಸಿದ್ದು ಇದರಲ್ಲಿ ಅನೇಕ  ನಿಯಮಗಳನ್ನು ಅಳವಡಿಸಿಕೊಳ್ಳಲು ಈ ಸಂಸ್ಥೆಗಳಿಗೆ ಸೂಚಿಸಿದ್ದು ಇವುಗಳಲ್ಲಿ ಪ್ರಮುಖವಾಗಿ ಲಿಕ್ವಿಡಿಟೀ ಕವರೇಜ್ ರೇಶಿಯೋ(LCR) ವನ್ನು ಕಾಪಾಡಿಟ್ಟುಕೊಳ್ಳಲು ಸೂಚಿಸಿದೆ. ಇದರಿಂದ ಆಗುವ ಪ್ರಯೋಜನವೆಂದರೆ ಅಲ್ಪಾವಧಿ ಹಣಕಾಸು ಬಾಧ್ಯತೆಗಳನ್ನು ಈ ಬ್ಯಾಂಕಿಂಗೇತರ ಸಂಸ್ಥೆಗಳು ಯಶಸ್ವಿಯಾಗಿ ನಿಭಾಯಿಸಬಹುದಾಗಿದೆ ಮತ್ತು ಗ್ರಾಹಕರ ಹಿತವನ್ನು ಕಾಪಾಡಬಹುದಾಗಿದೆ. ಇದಲ್ಲದೇ ಸ್ಕೇಲ್ ಬೇಸ್ಡ್ ರೆಗ್ಯುಲೇಶನ್(SBR) ಅನ್ನು ಘೋಷಿಸಿದ್ದು ಇದರ ಪ್ರಕಾರ ಎನ್‌ಬಿಎಫ್‌ಸಿ ಗಳ ವರ್ಗೀಕರಣ ನಡೆಯಲಿದ್ದು ಸಾಲಗಳ ಮರುಪಾವತಿ 90 ದಿನಗಳಲ್ಲಿ ಆಗದಿದ್ದರೆ NPA ಎಂದು ಘೋಷಿಸಬೇಕೆಂದು ಕೂಡ ಹೇಳಲಾಗಿದೆ; ಮುಂಚೆ 180 ದಿನಗಳ ವ್ಯಾಪ್ತಿಯಿತ್ತು. ಸಂಕಷ್ಟದ ಸುಳಿಗೆ ಸಿಲುಕಿರುವ ಎನ್‌ಬಿಎಫ್‌ಸಿಗಳನ್ನು ಪಾರು ಪಾರುಮಾಡಲು ಕೇಂದ್ರ ವಿತ್ತ ಸಚಿವಾಲಯ ಅನೇಕ ಕಾರ್ಯಸೂಚಿಗಳನ್ನು ಪ್ರಕಟಿಸಿದೆ. ಹಂತಹಂತವಾಗಿ ಅಂಕುಶವನ್ನು ಸಿದ್ದಪಡಿಸಿರುವ ಆರ್‌ಬಿಐ ಎನ್‌ಬಿಎಫ್‌ಸಿಯಲ್ಲಿನ ಹುಳುಕುಗಳನ್ನು ಸರಿ ಮಾಡಲು ಪ್ರಯತ್ನಿಸುತ್ತಿರುವುದಂತೂ ಸತ್ಯ. ಇದರಿಂದ ಮುಂದೆ ಇನ್ನೂ ಒಂದಿಷ್ಟು ಹಗರಣಗಳು ಬೆಳಕಿಗೆ ಬಂದರೂ ಅಚ್ಚರಿಯಿಲ್ಲ. ಇದಕ್ಕೆ ಪೂರಕವಾಗಿ ವಿತ್ತ ಸಚಿವಾಲಯ ಮಾರುಕಟ್ಟೆ ಪ್ರತಿನಿಧಿಗಳೊಂದಿಗೆ ರ್ಚಚಿಸಿ, ಮಾರುಕಟ್ಟೆಯಲ್ಲಿ ವಿಶ್ವಾಸ ಮರುಸ್ಥಾಪನೆಗೆ ಪ್ರಯತ್ನಿಸಬೇಕು.

ಹಳ್ಳಿಯಲ್ಲಿನ ಸಣ್ಣ ಸಹಕಾರಿ ಸಂಸ್ಥೆಗಳಿಂದ ಹಿಡಿದು ಸಾವಿರಾರು ಕೋಟಿ ವ್ಯವಹಾರ ಮಾಡುವ ದೊಡ್ಡ ಆರ್ಥಿಕ ಸಂಸ್ಥೆಗಳವರೆಗೆ ಎಲ್ಲೆಡೆ ಆರ್ಥಿಕ ಅಶಿಸ್ತು ಸ್ಪಷ್ಟವಾಗಿ ಈಗ ಗೋಚರಿಸುತ್ತಿದೆ. ಇವುಗಳಿಗೆ ಪರಿಹಾರ, ತನಿಖೆ ಮತ್ತು ಕಟ್ಟುನಿಟ್ಟಾದ ನಿಯಮಗಳೇ ಆಗಿವೆ. ವ್ಯವಸ್ಥೆಯ ಮೇಲಿನ ನಂಬಿಕೆಗೆ ಪದೇ ಪದೇ ಉಂಟಾಗುತ್ತಿರುವ ಘಾಸಿಯಿಂದ ಈ ದೇಶದ ಸಾಮಾನ್ಯ ಜನರು ಭಾವನಾತ್ಮಕವಾಗಿ ಬಳಲಿರುವುದಂತೂ ಸತ್ಯ. ದೇಶದ ಬ್ಯಾಂಕಿಂಗ್ ಸೆಕ್ಟರ್‌ನಲ್ಲಾದ ಹಗರಣಗಳು ಅನೇಕ. ಮತ್ತು ಆ ಸೆಕ್ಟರ್‌ಗಳನ್ನು ಸರಿಮಾಡಲು ಸರ್ಕಾರ ಶ್ರಮಿಸುತ್ತಿರುವುದಂತೂ ಸತ್ಯ. ಅದೇ ರೀತಿ ಬ್ಯಾಂಕಿಂಗೇತರ ಸಂಸ್ಥೆಗಳು ಕೂಡ ಆದಷ್ಟು ಬೇಗ ಶುದ್ಧವಾಗಲಿ.  

(ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪ್ರಸನ್ನ ಕಂಬದಮನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯವರು. ಆರ್ಥಿಕ, ವಾಣಿಜ್ಯ ಇತ್ಯಾದಿ ವಿಷಯಗಳ ಕುರಿತು ಇವರು ಬರೆದ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.)