-ವಿಕಾಸ ನೇಗಿಲೋಣಿ
ಸ್ವಸ್ತಿಗೆ ಹೊಸ ಯಾವುದೇ ಸಾಹಸಗಳನ್ನೂ ಮಾಡುವ ಮನಸ್ಸಿರಲಿಲ್ಲ. ತುಂಬ ಆಸೆಪಟ್ಟು ಒಂದು ಮದುವೆ ಆಗಿದ್ದೇ ಸಾಕಾಗಿತ್ತು. ಅದೂ ಸಾಕಷ್ಟು ಹುಡುಗರನ್ನು ಹುಡುಕಾಡಿ, ಕೆಲವರನ್ನು ಭೇಟಿ ಮಾಡಿ, ಒಂದಿಬ್ಬರು ಅಂತಿಮ ಕೂಡ ಆಗಿ, ಒಂದು ನಿಶ್ಚಿತಾರ್ಥ ಮುರಿದಮೇಲೆ ಈ ಮದುವೆ ಏರ್ಪಟ್ಟಿತ್ತು. ಕುಂದಾಪುರದ ಹುಡುಗ, ಶಿಕಾರಿಪುರದ ಸ್ವಸ್ತಿಯನ್ನು ಮದುವೆಯಾಗಿದ್ದ. ಬಹಳ ಇಷ್ಟಪಟ್ಟು ತೆಗೆದುಕೊಂಡ ಧಾರೆ ಸೀರೆ, ಅದಕ್ಕಾಗಿ ಮೊದಲ ಸಲ ಎನ್ನುವಂತೆ ಮನೆಯೇ ಬ್ಯೂಟೀಶನ್ನನ್ನು ಕರೆಸಿಕೊಂಡು ಬ್ರೈಡಲ್ ಬ್ಯೂಟಿ ಮೇಕೋವರ್ ಮಾಡಿಸಿ, ಮದುವೆಗಾಗಿ ಶಿವಮೊಗ್ಗದಿಂದ ಒಬ್ಬ ವೀಡಿಯೋಗ್ರಾಫರನ್ನು ಕರೆಸಿ, ನಾಲ್ಕು ದಿನ ಎಲ್ಲ ಕ್ಯಾಂಡಿಡ್ ವೀಡಿಯೋ, ಫೋಟೋಗಳನ್ನೂ ಮಾಡಿಸಿ ಮದುವೆ ಮುಗಿಸಿದ ಮೇಲೆ ಸ್ವಸ್ತಿಗೆ ಏನೋ ಸುಸ್ತು, ನಿರಾಶೆ. ಎಂಗೇಜ್ಮೆಂಟ್‌ಗೆ ಕೆಲ ದಿನಗಳ ಹಿಂದೆ ಪರಿಚಯವಾಗಿ, ಮದುವೆ ಹೊತ್ತಿಗೆ ಅಪ್ಪಟ ಪ್ರೇಮಿಯೇ ಆಗಿದ್ದ ಸಲಿಲ್ ಜೊತೆಗೆ ಮದುವೆ ಆಗುವುದು ಸ್ವಸ್ತಿಗೆ ತೀರಾ ಇಷ್ಟದ, ಹೆಮ್ಮೆಯ ವಿಷಯವೇ ಆಗಿತ್ತು. ಆದರೂ ಮದುವೆ ಮುಗಿಸಿದ ದಿನ ರಾತ್ರಿ ಎಲ್ಲ ಸೇರಿ ಜೋಕು ಮಾಡುತ್ತಾ, ಸೂರು ಹಾರುವಂತೆ ಕೂಗಿ ಗದ್ದಲವೆಬ್ಬಿಸುತ್ತಿದ್ದರೆ ಸ್ವಸ್ತಿಗೆ ಯಾಕೋ ಮದುವೆ ಮುರಿದು ಹೋದ ಭಾವ ಬಂತು. ಸುಮ್ಮನೆ ಎದ್ದು ಹೋಗಿ ಸ್ನಾನದ ಮನೆಯಲ್ಲಿ ರಜಗೆಂಪು ಮಾಡಿದ ಮದರಂಗಿಯ ಕೈಯನ್ನು ತೊಳೆಯುತ್ತಾ, ತೊಳೆಯುತ್ತಾ ಅದು ಹೋಗುವುದಿಲ್ಲ ಅಂತ ಗೊತ್ತಾದಂತಾಗಿ ಮತ್ತೂ ಅಳು ಬಂದಿತು. ಆ ರಾತ್ರಿಯೆಲ್ಲ ಯಾಕೋ ಅಳು ಬರುತ್ತಲೇ ಇತ್ತು. ಮನೆ ಬಿಟ್ಟು ಹೋಗುತ್ತಿರುವುದಕ್ಕೆ ಅಷ್ಟೊಂದು ಅಳುತ್ತಿದ್ದಾಳೆ ಅಂತ ನೆಂಟರೆಲ್ಲ ತಿಳಿದರು. ಸಲಿಲ್ ಅವಳನ್ನು ಸಮಾಧಾನಿಸಲು ನೋಡಿ ಸಾಧ್ಯವಾಗದೇ, ಅವಳಷ್ಟಕ್ಕೇ ಬಿಟ್ಟರೆ ಸರಿ ಹೋದಾಳೆಂದು ಹಾಗೇ ಬಿಟ್ಟ.

ಆದರೆ ಏಕೋ ಗೊತ್ತಿಲ್ಲ, ತಾಯಿ ಮನೆಯನ್ನು ಬಿಟ್ಟು ಕುಂದಾಪುರಕ್ಕೆ ಸಲಿಲ್‌ನ ಮನೆಗೆ ಹೋಗಿ, ತನ್ನಿಚ್ಛೆಯಂತೆ ಹನಿಮೂನ್‌ಗೆ ಮಾಲ್ಡೀವ್ಸ್ಗೆ ಹೋಗಿಬಂದ ಮೇಲೂ ಆ ಮಂಕು ಯಾಕೋ ಹಾಗೇ ಉಳಿದುಕೊಂಡುಬಿಟ್ಟಿತು. ಇರುವ ಫೋಟೋಗಳನ್ನೆಲ್ಲ ನಾಲ್ಕು ವಾರ ಬಿಟ್ಟೂ ಬಿಡದೇ ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್ ಮಾಡಿ, ಪ್ರೊಫೈಲ್ ಪಿಕ್ ಮಾಡಿ, ಬರುವ ಕ್ಯೂಟ್, ಲವ್ಲಿ, ಎಪಿಕ್ ಕಾಮೆಂಟುಗಳಿಗೆ ಲವ್ ಸಿಂಬಲ್ಲಿನ ರಿಪ್ಲೇ ಹಾಕಿ ಕುಳಿತ ಮೇಲೂ ಅವಳ ಎದೆಯಲ್ಲೊಂದು ಖಾಲಿ ಸ್ಟೇಟ್ ಹಾಗೇ ಉಳಿದಿತ್ತು.

ಸ್ವಸ್ತಿ ಆಫೀಸು ಇದ್ದುದು ಮಲ್ಲೇಶ್ವರಂ ಎಯ್ತ್ ಕ್ರಾಸ್‌ನಲ್ಲಿ. ತಾವು ಮನೆ ಮಾಡಿರುವ ಸುಬ್ರಹ್ಮಣ್ಯಪುರದಿಂದ ಅದು ತೀರಾ ದೂರ. ನೀನು ಮಾಡುತ್ತಿರುವ ಕೆಲಸಕ್ಕೆ, ಜಾಬ್‌ಗೆ ಅಷ್ಟು ದೂರ ಹೋಗಬೇಕಾಗಿಲ್ಲ, ಅಲ್ಲಿ ಕೆಲಸ ಬಿಟ್ಟುಬಿಡು, ಹತ್ತಿರದಲ್ಲೇ ಅಂಥ ಒಂದು ಕೆಲಸಕ್ಕೆ ಸೇರಿಸುತ್ತೇನೆ ಅಂತ ಸಲಿಲ್ ಹೇಳಿನೋಡಿದ್ದ. ಒಮ್ಮೆ ಅವಳಿಗೆ ಅದು ಸರಿ ಅಂತಲೂ ಅನ್ನಿಸಿತ್ತು. ಯಾಕೆಂದರೆ ಹೋಗುವಾಗ ಗಡಿಬಿಡಿಯಲ್ಲಿ ಅಡುಗೆ ಮಾಡಿಡಬೇಕಿತ್ತು. ಓಡಿ ಬಂದು ಮತ್ತೇನೋ ಅಡುಗೆ ಮಾಡಬೇಕಾಗುತ್ತಿತ್ತು. ಹಾಗಂತ ಸಲಿಲ್ ಆಗಾಗ ಅನ್ನಕ್ಕೊಂದು ಇಟ್ಟು, ತಳ ಹೊತ್ತಿಸಿ, ಸ್ವಿಗ್ಗಿಯಿಂದ ತರಿಸಿಟ್ಟು ಮ್ಯಾನೇಜ್ ಮಾಡುತ್ತಿದ್ದನಾದರೂ ತಾನೇ ಅಡುಗೆ ಮಾಡಬೇಕು, ಇಲ್ಲವೆಂದರೆ ತಾನು ಈ ಅಡುಗೆ ಮನೆಯಿಂದ ವಿಮುಖನಾಗುತ್ತಿದ್ದೇನೆ, ತನ್ನ ಕರ್ತವ್ಯದಿಂದ ದೂರ ಹೋಗುತ್ತಿದ್ದೇನೆ ಅಂತ ಸ್ವಸ್ತಿಗೆ ಕಿರಿಕಿರಿಯಾಗುತ್ತಿತ್ತು. ಸಲಿಲ್ ಎಷ್ಟೇ ಸಮಾಧಾನಿಸಲು ಬಂದರೂ ಅವಳಿಗೆ ಅವನ ಮೇಲೆ, ತನ್ನ ಮೇಲೆ ವಿಪರೀತ ಕೋಪ ಉಕ್ಕುತ್ತಿತ್ತು.

ಹತ್ತಿರದಲ್ಲೇ ಕೆಲಸಕ್ಕೆ ಸೇರು, ಹೋಗಲಿ ಕೆಲಸ ಬಿಡು, ಹೋಗಲಿ, ನಾನೇ ಅಡುಗೆ ಮಾಡಿಕೊಳ್ಳುತ್ತೇನೆ ಅಂತ ಸಲಿಲ್ ಹೇಳಿದರೂ ಅವಳಿಗೆ ಯಾವುದನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಅಂತೂ ಮನೆಗೆ ಸಲಿಲ್‌ನ ಚಿಕ್ಕಮ್ಮ, ಚಿಕ್ಕಪ್ಪ ಕುಂದಾಪುರದಿಂದ ಬಂದು, ತಾನು ಬರುತ್ತಿದ್ದೇನೆ ಬರುತ್ತಿದ್ದೇನೆ ಅಂತ ಹೇಳಿ ಹೇಳಿ, ಬರೋದು ತಡವಾಗಿ ಚಿಕ್ಕಮ್ಮನೇ ಅಡುಗೆ ಮಾಡಿಟ್ಟು, ಕೆಲಸದಿಂದ ಬಂದ ಸ್ವಸ್ತಿಗೇ ಬಡಿಸಿದಾಗ ಅಳುವೇ ಬಂದುಬಿಟ್ಟಿತ್ತು. ಅದಾಗಿ ಎರಡು ರಾತ್ರಿ ಸಲಿಲ್ ಜೊತೆ ಒಂದು ಮಾತೂ ಆಡದೇ ಸತಾಯಿಸಿದ್ದಳು. ತನ್ನ ತಪ್ಪೇನೆಂದು ತಿಳಿದುಕೊಳ್ಳಲು ಒಂದು ದಿನ, ಬರಿದೇ ಹಠ ಸಾಧಿಸುತ್ತೀಯಾ ಅಂತ ಮತ್ತೊಂದು ದಿನ ಸಲಿಲ್ ಕೂಡ ಅವಳ ಹಠವನ್ನು ವಿಸ್ತರಿಸಿದ್ದ. ಆಫೀಸಿನಲ್ಲಿ ಟ್ರಾವೆಲ್ ಬುಕ್ ಮಾಡುವ ಕೆಲಸದಲ್ಲಿರುವ ಸ್ವಸ್ತಿ ಎಲ್ಲ ಊರುಗಳನ್ನೂ ಕಂಪ್ಯೂಟರ್ ಸ್ಕ್ರೀನ್ ಮೇಲೇ ನೋಡಿರುತ್ತಿದ್ದಳು. ಯಾರು ಬಂದರೂ ಅವರಿಗೆ ನಿಮ್ಮ ಟೇಸ್ಟ್ ಏನು ಅಂತ ತಿಳಿದುಕೊಂಡು ಸರಿಯಾದ ಜಾಗಕ್ಕೇ ಬುಕ್ ಮಾಡಿಕೊಡುತ್ತಿದ್ದಳು. ಹೋದವರು ತಿರುಗಿ ಬಂದು, ಪ್ಲೇಸ್ ಚೆನ್ನಾಗಿತ್ತು ಅಂತ ಹೇಳಿ ತಮ್ಮ ಪರಿಚಯದ ವ್ಯಕ್ತಿಗಳನ್ನು ಅವಳ ಏಜೆನ್ಸಿಗೆ ರೆಫರ್ ಮಾಡುತ್ತಿದ್ದರು. ಹೀಗೆ ಅವಳ ಕೆಲಸ ಮ್ಯಾನೇಜರ್‌ಗೂ ಮೆಚ್ಚುಗೆಯಾಗಿ, ಅವಳ ಕರ್ತವ್ಯಕ್ಕೆ ಬೆಲೆ ಬಂದಿತ್ತು. ಈ ಹೊತ್ತಿಗೆ ಕೆಲಸ ಬಿಟ್ಟು, ಹತ್ತಿರದಲ್ಲೇ ಕೆಲಸಕ್ಕೆ ಸೇರಿಕೋ ಅನ್ನುವ ಒತ್ತಡ, ಒತ್ತಾಸೆ ಸಲಿಲ್ ಕಡೆಯಿಂದ, ಅವನ ಮೂಲಕ ಸ್ವಸ್ತಿಯ ಅಪ್ಪಾಮ್ಮನ ಕಡಯಿಂದ ಹೆಚ್ಚುತ್ತಾ ಹೋಗುತ್ತಿತ್ತು. ಅವಳಿಗೆ ಆ ಕೆಲಸ ಹಿಡಿಸಿರಲಿಲ್ಲವಾದರೂ, ದೂರ ಅಂತ ಗೊತ್ತಿದ್ದರೂ ಸಲಿಲ್ ಒತ್ತಾಯ ಮಾಡಿದಷ್ಟೂ ಅವಳಿಗೆ ಆ ಕೆಲಸವನ್ನು ಏನಾದರೂ ಬಿಡಬಾರದೆಂಬ ಹಠ ಹೆಚ್ಚುತ್ತಾ ಹೋಯಿತು. ಇದನ್ನು ತಿಳಿಯದ ಸಲಿಲ್, ನಿನ್ನ ಕೆಲಸದ ಆಸಕ್ತಿಯಲ್ಲಿ ಮೂಗು ತೂರಿಸುತ್ತಿಲ್ಲ, ನಿನ್ನ ಸಂಬಳ ನನಗೆ ಬೇಕಾಗಿಲ್ಲ, ಹೋಗಲಿ, ಬೈಕ್ ಆದರೂ ತೆಗೆದುಕೊಂಡು ಬಸ್ಸಲ್ಲಿ ಓಡಾಡುವ ತಲೆನೋವನ್ನು ಕಮ್ಮಿ ಮಾಡಿಕೋ, ಕ್ಯಾಬ್‌ಗೆ ಹೋಗು, ನಾನೇ ಹಣ ಕೊಡುತ್ತೇನೆ ಎಂಬಿತ್ಯಾದಿಯಾಗಿ ಅವಳನ್ನು ಬೇರೆ ಬೇರೆ ದಾರಿಗಳಿಂದ ಬಂದು ಅಡ್ಡಗಟ್ಟಲು ನೋಡುತ್ತಿದ್ದ.

ಹಾಗೇ ಸ್ವಸ್ತಿ ಮಲ್ಲೇಶ್ವರಂ ಟ್ರಾವೆಲ್ಸ್ ಕೆಲಸವನ್ನು ಬಿಡದಿರಲು ನಿರ್ಧಾರ ಮಾಡಿದ್ದು.

ಸ್ವಸ್ತಿ ಬಸ್ಸು ಹತ್ತುವ ಹೊತ್ತಿಗೆ ಯಾವಾಗಲೂ ಮೊದಲ ನಾಲ್ಕು ರೋ ಸೀಟುಗಳು ಭರ್ತಿಯಾಗಿರುತ್ತಿದ್ದವು. ಮಾರುಕಟ್ಟೆಗೆ ಹೋಗುವ ಹೆಂಗಸರು ಬುಟ್ಟಿ ಇಟ್ಟುಕೊಂಡು ಹೂ ಕಟ್ಟುತ್ತಲೋ, ವಯಸ್ಸಾದವರು ನಿದ್ದೆ ಮಾಡುತ್ತಲೋ, ಕಾಲೇಜು ಹುಡುಗಿಯರು ಇಯರ್ ಫೋನ್ ಸಿಕ್ಕಿಸಿಕೊಂಡೋ ಆ ಪ್ರಯಾಣವನ್ನು ತಮ್ಮ ಸ್ವತ್ತನ್ನಾಗಿ ಮಾಡಿಕೊಂಡಿರುತ್ತಿದ್ದರು. ಹಾಗಾಗಿ ತಮಗೇ ಅಂತ ಇರುವ ಸೀಟುಗಳು ತನಗಾಗಿ ಕಾದಿರುವುದಿಲ್ಲ ಅಂತ ಅವಳಿಗೆ ಅರ್ಥವಾದಂತೇ ಅವಳು ಮಿಕ್ಕ ಸೀಟುಗಳ ತಲಾಶ್‌ಗೆ ತೊಡಗುತ್ತಿದ್ದಳು. ಹೇಗೋ ಗಂಡಸರ ಸೀಟೇ ಸಿಗುತ್ತಿತ್ತು, ಹೋಗುತ್ತಾ ಹೋಗುತ್ತಾ ಅವಳಿಗೆ ಗಂಡಸರ ಸೀಟುಗಳೇ ಹೆಚ್ಚು ಆಪ್ತವಾಗುತ್ತಿತ್ತು. ಗಂಡಸರೇ ತುಂಬಿರುವ ಜಾಗದಲ್ಲಿ ಕೂತಾಗ ಒಂದಷ್ಟು ಗಂಡಸರೇ ಸೇರಿಕೊಂಡು ಆಡುವ ಮಾತುಗಳು ಮಜಾ ಕೊಡುತ್ತಿದ್ದವು. ತೀರಾ ಪೋಲಿ ಜೋಕುಗಳನ್ನು ಸಿಡಿಸುವ ಗುಂಪಷ್ಟೇ ಅಲ್ಲ, ಆಫೀಸು, ಪಾರ್ಟಿ, ವೀಕೆಂಡು ಅಂತ ಒಂದು ಅವರದೇ ಜಗತ್ತಿನ ಮಾತುಗಳನ್ನು ಅವರು ಆಡುತ್ತಿರುವಾಗೆಲ್ಲ ಸ್ವಸ್ತಿಗೆ ಅದನ್ನು ಸುಮ್ಮನೇ ಕೇಳಿಸಿಕೊಳ್ಳಬೇಕು ಅನ್ನಿಸುವುದು. ಗಾಳಿಯಲ್ಲಿ ಹಾರಾಡುವ ಮಾತಿನಂತೆ ಹಗುರವೂ, ಕಚಗುಳಿ ಇಡುವಂಥವೂ ಆಗಿದ್ದರಿಂದ, ಇಯರ್ ಫೋನ್ ಹಾಕಿಕೊಂಡು, ಕೇಳಿಸಲೇ ಇಲ್ಲ ಅನ್ನುವಂತೆ ನಾಟಕವಾಡುತ್ತಾ, ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅದೇನೋ ವಿಚಿತ್ರ ಆನಂದವನ್ನು ಮೈದುಂಬಿಕೊಂಡು ಸ್ವಸ್ತಿ ಮನೆಗೆ ಬರುತ್ತಿದ್ದಳು.

ಹೀಗಿರುವಾಗ ಸಲಿಲ್‌ನ ಅಮ್ಮ ಒಂದು ತಿಂಗಳ ಮಟ್ಟಿಗೆ ಬೆಂಗಳೂರಿಗೆ ಬಂದರು. ಅವಳೇ ಅಡುಗೆ ಮಾಡುತ್ತಿದ್ದ ಕಾರಣ ಸ್ವಸ್ತಿಗೆ ಸ್ವಲ್ಪ ಆರಾಮವೂ ಆಯಿತು. ಸ್ವಲ್ಪ ತಡವಾಗಿಯೂ ಎದ್ದೇಳುತ್ತಿದ್ದ ಸ್ವಸ್ತಿ, ಕಾರ್ಟೂನ್ ನೋಡಿ, ನಿಧಾನಕ್ಕೆ ತಿಂಡಿ ತಿಂದು, ಎರಡು ಬಸ್ಸುಗಳನ್ನು ಬದಲಾಯಿಸಿ ಮಲ್ಲೇಶ್ವರಂಗೆ ಹೋಗುತ್ತಿದ್ದಳು. ಕೆಲವೊಮ್ಮೆ ಮಲ್ಲೇಶ್ವರಂನ ದಾರಿಗಳಲ್ಲಿ ಒಬ್ಬಳೇ ಸುಮ್ಮನೇ ನಡೆದಾಡುತ್ತಾ, ಗದ್ದಲ ಮತ್ತು ಗಾಳಿಯನ್ನು ಕಿವಿಗೆ ತುಂಬಿಕೊಳ್ಳುತ್ತಾ ಸಾಕಷ್ಟು ಖಾಲಿ ಇರುವ ಬಸ್ಸುಗಳನ್ನೇ ಹತ್ತಿ, ಮನೆಗೆ ಬರುತ್ತಿದ್ದಳು. ತಡವಾಯಿತೆಂದರೆ ಮಲ್ಲೇಶ್ವರಂನ ಕ್ರಾಸ್‌ನಲ್ಲಿ ಸುಮ್ಮನೇ ಓಡಾಡುವ ಖುಷಿಯನ್ನು ಸಲಿಲ್‌ನ ಹತ್ತಿರ ಹಂಚಿಕೊಳ್ಳುತ್ತಿದ್ದಳು. ಅವನು ಅವಳನ್ನು ಹಾಗೇ ನೋಡುತ್ತಿದ್ದ, ನಿನ್ನದು ಹುಚ್ಚಾಟ ಮಾರಾಯ್ತಿ ಅಂತ ಕೆನ್ನೆ ಚಿವುಟುತ್ತಿದ್ದ. ಅಮ್ಮನಿಗೊಂದು ಹೇಳಬೇಡ ಅಂತ ಶ್ ಶ್ ಅಂತ ಮಾಡುತ್ತಿದ್ದ. ಹಾಗಲಕಾಯಿಯನ್ನು ಕಹಿ ಇಲ್ಲದಂತೆ ಪದಾರ್ಥ ಮಾಡುವುದು ಹೇಗೆ ಅಂತ ಬೆಳಿಗ್ಗೆ ಅತ್ತೆ ಸ್ವಸ್ತಿಗೆ ಹೇಳುತ್ತಿದ್ದರೆ ಅದು ಕಿವಿಗೇ ಬೀಳುತ್ತಿರಲಿಲ್ಲ, ಅವಳ ಕಿವಿಯ ತುಂಬ ಮಲ್ಲೇಶ್ವರಂ ಒಳದಾರಿಗಳ ಮಬ್ಬುಗತ್ತಲ ಗಾಳಿಯೇ ತುಂಬಿಕೊಂಡ ಹಾಗೆ ಉನ್ಮತ್ತತೆ ಆವರಿಸಿಕೊಳ್ಳುತ್ತಿತ್ತು.

ಹಾಗೆ ಇರುವಾಗಲೇ ಸಲಿಲ್‌ನ ಅಮ್ಮ, ಅವಳು ಬಸ್ಸಲ್ಲೇಕೆ ಸುತ್ತಬೇಕು, ನೀನು ಹೇಗಿದ್ದರೂ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಿ, ಬೆಳಿಗ್ಗೆ ಅವಳನ್ನು ಕೊಂಡು ಹೋಗಿ ಬಿಟ್ಟು ಬಾ, ರಾತ್ರಿ ಕರೆದುಕೊಂಡು ಬಾ ಅಂತ ಆಜ್ಞೆ ಹೊರಡಿಸಿದಳು. ಅಷ್ಟಕ್ಕೂ ಸಲಿಲ್‌ಗೆ ಇದರಲ್ಲಿ ಆಸಕ್ತಿ ಇಲ್ಲದಿರಲಿಲ್ಲ. ಬೈಕಿನಲ್ಲಿ ಕರೆದೊಯ್ದು, ಬರುವಾಗ ಫುಡ್ ಸ್ಟ್ರೀಟ್‌ನಲ್ಲಿ ಒಂದೇ ತಟ್ಟೆಯಲ್ಲಿ ಇಬ್ಬರೂ ಅವರೆಕಾಳು ದೋಸೆ ತಿಂದುಕೊಂಡು ಬರಬೇಕು, ಅವಳು ತನ್ನನ್ನು ತಬ್ಬಿ ಹಿಡಿಯಬೇಕು, ಯಾವುದೋ ಕತ್ತಲಲ್ಲಿ ಅಚಾನಕ್ ನಿಲ್ಲಿಸಿ, ಸುಖಿಸಬೇಕು ಅಂತೆಲ್ಲ ಫ್ಯಾಂಟಸಿಗಳಿದ್ದವು. ಆದರೆ ಯಾವುದರಲ್ಲೂ ಸ್ವಸ್ತಿಗೆ ಒತ್ತಾಯ ಮಾಡಬಾರದು ಅಂತ ಮೊದಲೇ ಸಲಿಲ್ ನಿರ್ಧರಿಸಿದ್ದ. ಆದರೆ ಈಗ ಅಮ್ಮನೇ ಸ್ವಸ್ತಿ ಎದುರು ಈ ಮಾತನ್ನು ಹೇಳಿ, ಅವಳಿಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೇ ಅವಕಾಶ ಆಗದಾಗ ಬೆಳಿಗ್ಗೆ ಬಿಡಲು ಹೋದ. ಬಿಟ್ಟು, ಕೈ ಮಾಡುವಾಗ ಸ್ವಸ್ತಿ ಇದೆಲ್ಲ ಇಷ್ಟ ಆಗ್ತಾ ಉಂಟೋ, ಇಲ್ಲವೋ ಅಂತ ತೋರಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಬಾಯ್ ಮಾಡಿ ಹೊರಟು ಹೋಗಿದ್ದಳು.

ಹಾಗೇ ರಾತ್ರಿ ಕರೆದುಕೊಂಡು ಬರುವುದಕ್ಕೆ ಸಲಿಲ್ ಹೋಗುವ ನಿರ್ಧಾರ ಮಾಡಿದ.

******
ಮಲ್ಲೇಶ್ವರಂನಲ್ಲಿ ಸ್ವಸ್ತಿ ಕೆಲಸ ಮಾಡುತ್ತಿದ್ದ ಏಜೆನ್ಸಿಯ ಹಿಂದೆ ದೊಡ್ಡ ಮರವಿತ್ತು, ಅದು ಯಾವ ಮರವೇ ಆಗಿರಲಿ, ಅದನ್ನು ಆಲದ ಮರ ಅಂತ ಕರೆಯುತ್ತೇನೆ ಅಂತ ಸದಾ ಸ್ವಸ್ತಿ ವಾದಿಸುತ್ತಿದ್ದಳು. ಆ ಮರದ ಎಲೆಗಳು ಹಾರಿ ಬಂದು ಕಿಟಕಿಯಿಂದ ಇವರ ಫರ್ಮ್ಗೆ ಬೀಳುತ್ತಿದ್ದವು. ಇರುವ ಕಸದ ಜೊತೆ ಮತ್ತೊಂದು ಅಂತ ಕೆಲಸದವಳು ಬೈಯುತ್ತಲೇ ಇರುತ್ತಿದ್ದಳು, ಆದರೆ ಯಾಕೋ ಸ್ವಸ್ತಿಗೆ ಹಾರಿ ಬರುವ ಆ ಎಲೆಗಳೆಂದರೆ ಇಷ್ಟ. ಅದೂ ಕೆಲವೊಮ್ಮೆ ಅವಳ ಸೀಟಿನ ಕಳಗೇ ಬಂದು ಬೀಳುತ್ತಿದ್ದವು. ಸ್ವಸ್ತಿ ಅವುಗಳನ್ನು ಕೈಗೆತ್ತಿಕೊಂಡು ನೇವರಿಸುತ್ತಿದ್ದಳು. ಆಗೆಲ್ಲ ದೊರಗುದೊರಗಾದ ಆ ಎಲೆಗಳು ಅವಳ ಮೃದು ಕೈಗೆ ಹಿತವಾದ ಸ್ಪರ್ಶ ಕೊಡುತ್ತಿದ್ದವು.

ಆವತ್ತೇ ಬೆಳಿಗ್ಗೆ ಒಂದು ಹೊಸ ಜೋಡಿ ಏಜೆನ್ಸಿಗೆ ಬಂತು. ಬಾಲಿಗೆ ತ್ರಿ ಡೇಸ್, ಟೂ ನೈಟ್ಸ್ ಪ್ಯಾಕೇಜು ಬುಕ್ ಮಾಡಿಕೊಡಲು ಹೇಳಿದರು. ಸ್ವಸ್ತಿ ಅವರನ್ನು ಕೂರಿಸಿ, ಬುಕ್ ಮಾಡುವ ಕೆಲಸದಲ್ಲಿ ತೊಡಗಿದಳು. ಆ ನವವಧು ಆಗಾಗ ನಗುತ್ತಾ, ಅವನು ಅವಳ ಕಿವಿಯಲ್ಲೇನೋ ಪಿಸುಗುಡುತ್ತಾ, ಅವನವಳ ಕಪ್ಪು ವೇಲನ್ನು ಸರಿಸಿ ಮದರಂಗಿ ಬೆರಳುಗಳನ್ನು ನೇವರಿಸುತ್ತಾ ತನ್ನದೇ ಲೋಕದಲ್ಲಿ ಇರುವುದನ್ನು ಸ್ವಸ್ತಿ ನೋಡುತ್ತಾ ನೋಡುತ್ತಾ ಸುಖಾಸುಮ್ಮನೆ ಸಿಡಿಮಿಡಿಯಾದಳು. ಟೀ ಯಾಕೆ ಬಿಸಿ ಇದೆ ಅಂತ ಆಯಾಳನ್ನು ಬೈದಳು, ಬರೆವ ಪೆನ್ನೆಲ್ಲ ಇಂಕು ಕಾರಿಕೊಂಡು, ಕೈಯೆಲ್ಲ ಮಸಿಯಾಗಿ, ಅವಳು ಅದನ್ನು ತೊಳೆದುಕೊಳ್ಳಲು ವಾಶ್‌ರೂಮಿಗೆ ಹೋಗಿ ಜಾಸ್ತಿ ಸಮಯವನ್ನೇ ತೆಗೆದುಕೊಂಡಳು.
ಕನ್ನಡಿಯಲ್ಲಿ ಬಿದ್ದುಕೊಂಡ ತನ್ನನ್ನೇ ತಾನು ನೋಡುವಾಗ ಸಲಿಲ್ ಬೈಕಿನಲ್ಲಿ ಬಿಟ್ಟು ಹೋಗಿದ್ದು ಮತ್ತು ಸಂಜೆ ಅವನು ಕರೆದುಕೊಂಡು ಹೋಗಲು ಬರುತ್ತಿವುದು ಜ್ಞಾಪಕಕ್ಕೆ ಬಂತು. ಹೊರಗೆ ಬಂದವಳು ಆಚೆ ನಿಂತು ಕಿಟಕಿಯಿಂದ ನೋಡಿದಳು. ಮರ ಕಾಣುತ್ತಿರಲಿಲ್ಲ, ಆದರೆ ಅಲ್ಲಿ ನುಗ್ಗಿ ಬರುವ ಗಾಳಿ ಆ ಮರದ್ದೇ ಅಂತ ಅನ್ನಿಸಿ, ಹೋಗಿ ಕಿಟಕಿಯಿಂದ ಹಣಕಿ ಹಣಕಿ ಆ ಮರದ ಕೆಲ ಭಾಗವಾದರೂ ಕಾಣಿಸಬಹುದು ಅಂತ ಪ್ರಯತ್ನಿಸಿದಳು. ಮರ ತನ್ನ ಮೈಯನ್ನು ಅವಳಿಂದ ಅಡಗಿಸಿ ಇಟ್ಟಂತೆ ಆಚೆಕಡೆಗೆ ಬಾಗಿಕೊಂಡಿತು.

ಹೀಗೆ ತಪ್ಪಿಸಿಕೊಂಡು ಎಷ್ಟು ದಿನ ಇರುತ್ತೀಯಾ, ಹೆಚ್ಚು ಆಟ ಆಡಿದರೆ ನಿನ್ನನ್ನು ಕಡಿಸಿ ಹಾಕಿಸುತ್ತೇನೆ ಅಂತ ಸ್ವಸ್ತಿ ಮನಸಲ್ಲೇ ಅಂದುಕೊಂಡಳು. ಕೈಲಿರುವ ಎಲೆಯನ್ನು ನೆಲದ ಮೇಲೆ ಎಸೆದು, ಕಸ ಎಲ್ಲ ಹಾಗೇ ಉಂಟಲ್ಲ ಅಂತ ಜೋರಾಗಿ ಕೂಗುವಂತೆ ಕಂಪ್ಲೇಂಟ್ ಮಾಡಿದಳು. ಇನ್ನೂ ಎಷ್ಟು ಹೊತ್ತು ಆಗ್ತದೆ ಅಂತ ಆ ನವವಿವಾಹಿತ ಗಂಡಸು ಬಂದು ಕಿರಿಕಿರಿಯಲ್ಲೇ ಕೇಳಿದಾಗ, ವಾಪಾಸ್ ಚೇರ್‌ಗೆ ಬಂದು ಕುಳಿತು ಕೆಲಸ ಪ್ರಾರಂಭಿಸಿದರೂ ಅವಳಿಗೇಕೋ ಮಂಕು ಆವರಿಸಿಕೊಂಡೇ ಇತ್ತು.

******
ನೀನು ಹೊರಡುವುದಿಲ್ಲವಾ ಅಂತ ಪ್ಯೂನ್ ಕೇಳಿದಾಗ ಸಂಜೆಯಾಯ್ತೆಂದು ಅರಿವಾಯಿತು. ಅದೇನೋ ಉದಾಸೀನದಿಂದ ಎದ್ದು ಬ್ಯಾಗ್ ತೆಗೆದುಕೊಂಡು ಸ್ವಸ್ತಿ ಹೊರಟಳು. ಹಿಂದೆ ಹೋಗೇ ಇರದ ಒಂದು ಮಬ್ಬುಗತ್ತಲ ರಸ್ತೆಯಲ್ಲಿ ಹೀಗೇ ನಡೆಯತೊಡಗಿದಳು. ಆಗಾಗ ಎದುರಾಗುವ ಬೀದಿ ಬೆಳಕು, ಇದ್ದಕ್ಕಿದ್ದ ಹಾಗೇ ಎದುರಾಗುವ ಮಸುಕು ಕತ್ತಲು, ಯಾವುದೋ ತಿರುವಿನಲ್ಲಿ ಸಿಗಬಹುದಾದ ಅಪರಿಚಿತರ ಹಿಂಡು, ಎಲ್ಲೋ ಮಲ್ಲಿಗೆ ದಂಡೆಯ ಕುತ್ತರಿ ಇಟ್ಟುಕೊಂಡು ಹೂವಿಗೆ ನೀರು ಚಿಮುಕಿಸುತ್ತಾ ಕುಳಿತ ಜೀವಗಳು, ಹಿಂದೆ ಹಿಂದೆ ಬರುವವರೆಲ್ಲ ಹಿಂಬಾಲಿಸುವವರೋ ಅಲ್ಲವೋ ಅನ್ನುವ ಗೊಂದಲ, ಬೈಕಿನ ಹಾರನ್ನಾದರೆ ಅದು ಸಲಿಲ್‌ನದೇ ಇರಬಹುದು ಎಂಬ ಅನುಮಾನಗಳನ್ನು ದಾಟುತ್ತಾ ಸ್ವಸ್ತಿ ನಡೆಯುತ್ತಲೇ ಹೋದಳು.

ದೂರದಲ್ಲಿ ಯಾವುದೋ ಸ್ಟಾಪ್ ಅಲ್ಲದ ಸ್ಟಾಪ್‌ನಲ್ಲಿ ಬಸ್ಸು ಕಂಡಿತು. ಓಡತೊಡಗಿದಳು, ಓಡುತ್ತಲೇ ಹೋದಳು. ಅದು ನಿಲ್ಲಲಿಕ್ಕಿಲ್ಲ ಅಂತ ಅನ್ನಿಸಿದಾಗ ಹಿಡಿಯಲೇ ಬೇಕನ್ನಿಸಿ ಇನ್ನೂ ಓಡಿದಳು.
ಕಡೆಗೂ ಹಿಂದಿನ ಬಾಗಿಲಿನಿಂದ ಸ್ವಸ್ತಿ ಹತ್ತಿಕೊಂಡಳು. ಅಂತೂ ಸಿಕ್ಕಿತು ಅಂತ ಹೆಮ್ಮೆಯಿಂದ ಸರಳು ಹಿಡಿದು ನಿಂತಾಗ ಎಲ್ಲರೂ ಅವಳನ್ನೇ ಮಿಕಿಮಿಕಿ ನೋಡಿದರು. ಓಡಿ ಸುಸ್ತಾಗಿದ್ದರಿಂದ ಯಾರಾದರೂ ಒಂದು ಸೀಟು ಬಿಟ್ಟುಕೊಡಬಹುದಾ ಅಂತ ಆಸೆಯಿಂದ ನೋಡಿದರೆ ಎಲ್ಲ ಆಸನಗಳೂ ಫುಲ್ಲಾಗಿದ್ದವು.
ಸ್ವಸ್ತಿ ಹಾಗೇ ನಿಂತುಕೊಂಡು ಜೋರಾಗಿ ನಿಟ್ಟುಸಿರು ಬಿಟ್ಟಳು.

******
ಅವಳನ್ನು ಡ್ರಾಪ್ ಮಾಡಿದ ಜಾಗದಲ್ಲೇ ಬೈಕು ತಂದು ನಿಲ್ಲಿಸಿದ ಸಲಿಲ್, ಅವಳು ಬರುವ ಮೊದಲು ಒಂದು ಪಾನ್ ಹಾಕಿಬಿಡೋಣ ಅಂತ ಪಾನ್ ಶಾಪ್‌ಗೆ ಓಡಿದ.

(ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬರಹಗಾರರಾಗಿರುವ ವಿಕಾಸ ನೇಗಿಲೋಣಿ ಪತ್ರಕರ್ತ ಮತ್ತು ಕಥೆಗಾರ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡಿದ್ದಾರೆ. ಹಲವು ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ, ಸಂಭಾಷಣೆ, ಚಿತ್ರಕಥೆಗಳನ್ನೂ ಬರೆದಿದ್ದಾರೆ.)