ಶ್ರೀಕಲಾ ಡಿ.ಎಸ್. 
ವೇಲಾಪುರದ ಗುಪ್ತಧನನೆಂಬ ವ್ಯಾಪಾರಿಯ ಮನೆಯಲ್ಲಿ ಸೋಮನೆಂಬ ಹದಿನಾಲ್ಕು ವರ್ಷದ ಹುಡುಗನು ಕೆಲಸ ಮಾಡುತ್ತಿದ್ದನು.

“ಶ್ರೀಪುರದಲ್ಲಿದ್ದ ವಿಶ್ವನಾಥನು ತಾನು ಮಾಡುತ್ತಿದ್ದ ಉಪಾಧ್ಯಾಯ ವೃತ್ತಿಯನ್ನು ದೇವರೆಂದು ಭಾವಿಸಿಕೊಂಡಿದ್ದನು.”

ಎಂಬತ್ತು-ತೊಂಭತ್ತರ ದಶಕದಲ್ಲಿ ಕಥೆಪುಸ್ತಕಗಳನ್ನು ಓದುತ್ತಿದ್ದ ಮಕ್ಕಳು ಇದು ಯಾವ ಪುಸ್ತಕದ ಸಾಲುಗಳಿರಬಹುದು ಎಂಬುದನ್ನು ಬಹಳ ಸುಲಭವಾಗಿ ಊಹಿಸಬಲ್ಲರು! 
ಕಥೆ ನಡೆಯುತ್ತಿರುವ ಊರಿಗೊಂದು ಚಂದದ ಹೆಸರು, ಮುಖ್ಯಪಾತ್ರಗಳ ವೃತ್ತಿ ಮತ್ತು ಅವರಿಗೊಂದು ಎಲ್ಲೂ ಹೆಚ್ಚಾಗಿ ಕೇಳಿರದ ವಿಭಿನ್ನ ಹೆಸರು, ಜೊತೆಗೆ ಪಾತ್ರದ ಭಾವವನ್ನೂ ಮೊದಲ ಸಾಲಲ್ಲೇ ಹೇಳುವ ಈ ಬಗೆ `ಚಂದಮಾಮ’ದ ಕಥೆಗಳ ಒಂದು ವಿಶೇಷ. ಬಣ್ಣಬಣ್ಣದ ಮುದ್ದಾದ ಚಿತ್ರಗಳು ಇನ್ನೊಂದು ಬಹುದೊಡ್ಡ ಆಕರ್ಷಣೆ. ಇಡೀ ಊರಿನ ಹಿನ್ನೆಲೆಯ ಜೊತೆಗೆ ಇರುತ್ತಿದ್ದ ಆ ಚಿತ್ರಗಳಲ್ಲಿ ಅದೆಷ್ಟು ವಿವರಗಳಿರುತ್ತಿದ್ದವು. ಹಂಚಿನ ಮನೆ, ಮೆಟ್ಟಿಲು, ಮನೆಯ ಪಕ್ಕ ಮರ, ಅಲ್ಲಿಟ್ಟ ಬುಟ್ಟಿ, ಬಾವಿಕಟ್ಟೆಯಲ್ಲಿ ನೀರು ಸೇದಿ ಬಿಟ್ಟು ಹೋದ ಕೊಡಪಾನ, ದೂರದ ಬೀದಿಯಲ್ಲಿ ಹೋಗುತ್ತಿರುವ ನಾಯಿ, ಸೋಮನಿಗೆ ಕೆಂಪಗಿ, ರಾಮನಿಗೆ ಕಡುನೀಲಿ, ಮನೆಯೊಳಗಿನ ಬಾಗಿಲು ತೆರೆದಿದ್ದರೆ ಹೊರಗಿನ ರಸ್ತೆಯ ವಿವರಗಳನ್ನು ಆ ಬಾಗಿಲೊಳಗಿಂದಲೇ ಕೊಡುವ ಸೊಗಸು... ಎಲ್ಲವೂ ಆ ಊರಿಗೇ ಕರೆದುಕೊಂಡು ಹೋಗಿ ನಿಲ್ಲಿಸಿಬಿಡುತ್ತಿತ್ತು. 

ಒಂದೆರಡು ಧಾರಾವಾಹಿಗಳೂ ಇರುತ್ತಿದ್ದ ಚಂದಮಾಮವು ಮಾಸಿಕ ಪತ್ರಿಕೆಯಾದ ಕಾರಣ ಒಂದು ತಿಂಗಳ ಕಾಲ ಮುಂದಿನ ಎಪಿಸೋಡಿಗಾಗಿ ಕಾಯುವುದೇ ಮಹಾನ್ ಪರಿತಾಪದ ಕಾರ್ಯವಾಗಿಬಿಡುತ್ತಿತ್ತು. `ಡಕಾಯಿತ ಯುವರಾಜ’ನಂತಹ ಧಾರಾವಾಹಿಗಳಲ್ಲಿ ಮುಂದೇನಾಗಬಹುದು ಎಂಬ ಬಗ್ಗೆ ಒಂದು ತಿಂಗಳ ಕಾಲ ನನಗೆ-ಅಣ್ಣನಿಗೆ ಚರ್ಚೆ ನಡೆಯುತ್ತಿತ್ತು. ಅಣ್ಣ ಹೇಳಿದ ಹಾಗೆಯೇ ಕಥೆಯಲ್ಲೂ ನಡೆಯುವ ಸಾಧ್ಯತೆಗಳು ಯಾವಾಗಲೂ ಹೆಚ್ಚೇ ಇರುತ್ತಿದ್ದುದು ನನ್ನ ಪಾಲಿಗೆ ಸೋಜಿಗವೂ, ಸ್ವಲ್ಪ ಕಿರಿಕಿರಿಗೂ ಕಾರಣವಾಗುತ್ತಿತ್ತು. ತಾನು ಹೇಳಿದಂತೆ ಕಥೆಯಲ್ಲೂ ಘಟಿಸಿದರೆ (ಕರಾರುವಕ್ಕಾಗಿ ಅಲ್ಲ) ಅವನಿಗೆ ನನ್ನ ಬಳಿ ಸ್ಟಾಕ್ ಇಟ್ಟಿದ್ದ ಚಾಕಲೇಟ್ ಕೊಡಬೇಕಾಗಿ ಬರುವುದೇ ಕಿರಿಕಿರಿಗೆ ಕಾರಣ. ಅಮ್ಮನಿಗೆ ಕಥೆಯನ್ನು ಬೆಳೆಸುವುದು ನಮಗಿಂತ ಚೆನ್ನಾಗಿ ಬರುತ್ತಿತ್ತು. ಆದರೆ ಇದಕ್ಕೆಲ್ಲಾ ಅವಳ ಮೂಡ್ ಚೆನ್ನಾಗಿರಬೇಕಾಗುತ್ತಿತ್ತು. ಅಂದರೆ ಅವಳು ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಹೊತ್ತಲ್ಲೆಲ್ಲಾ ರಾಜಕುಮಾರನಿಗೆ ಪಟ್ಟ ಸಿಗಬಹುದೋ ಅಂತ ಕೇಳಿದರೆ ನಮಗೆ ಪೆಟ್ಟು ಸಿಗುವುದು ಗ್ಯಾರೆಂಟಿ! ಅದೇ ಮೂಡ್ ಚೆನ್ನಾಗಿರುವ ಹೊತ್ತಲ್ಲಿ ಎಪಿಸೋಡುಗಟ್ಟಲೆ ಕಥೆಯನ್ನು ಹೆಣೆದು ಬಿಡುತ್ತಿದ್ದಳು. 

ಇನ್ನು ಚಿತ್ರಕಥೆಗಳೇ ಹೆಚ್ಚಿರುತ್ತಿದ್ದ ಬಾಲಮಂಗಳದ ಬಗೆಯೇ ಬೇರೆ ಥರದ್ದು. ಡಿಂಗ, ‘ಶಕ್ತಿಮದ್ದಿ’ನ ಲಂಬೋದರ, ಹಾರುವ ಹುಡಿಯ ‘ಫಕ್ರು’, ಟುಟ್ಟುರಂತಹ ವಿಶೇಷ ಸೂಪರ್ ಹೀರೋಗಳು. ಈ ಕಥೆಗಳನ್ನು ಓದಿದ ಮಕ್ಕಳ್ಯಾರೂ ಮರೆಯಲು ಸಾಧ್ಯವೇ ಇಲ್ಲದಂತಹ ಪಾತ್ರಗಳವು. ಇಲಿಯೇ ಸೂಪರ್ ಹೀರೋ ಆಗುವ ‘ಡಿಂಗ’ನ ಕಥೆಯಲ್ಲಿ ಕೇರಗ ಪಾತ್ರಕ್ಕೆ ಮುಂದಿನ ಎಪಿಸೋಡಿನಲ್ಲಿ ತಕ್ಕ ಪಾಠ ಆಗುತ್ತದೋ, ಇಲ್ಲಾ ಡಿಂಗನೇ ಸೋಲುತ್ತಾನೋ ಎನ್ನುವುದನ್ನು ತಿಳಿಯಲು ಹದಿನೈದು ದಿನ ಕಾಯಲೇಬೇಕಾಗಿತ್ತು. 

ಸಾಮಾನ್ಯವಾಗಿ ಚಂದಮಾಮವನ್ನು ತರಗತಿಗೆ ಬರುತ್ತಿದ್ದ ಮಕ್ಕಳು ಓದದಿದ್ದರೂ ಬಾಲಮಂಗಳವನ್ನು ಓದುತ್ತಿದ್ದ ನಾಲ್ಕೈದು ಸ್ನೇಹಿತರು ಇದ್ದರು. ಎಲ್ಲಾ ಕಥೆಗಳ ಮುಂದಿನ ಭಾಗ ಏನಾದೀತು ಎಂಬ ಬಗ್ಗೆ ಮನೆಯಲ್ಲಿ ಈಗಾಗಲೇ ಎರಡು ಸುತ್ತಿನ ಮಾತುಕತೆ ಆಗಿರುತ್ತಿದ್ದ ಕಾರಣ ಸ್ನೇಹಿತರ ಮಧ್ಯೆ ಅದನ್ನೆಲ್ಲಾ ರಸವತ್ತಾಗಿ, ಬಣ್ಣ ಹಚ್ಚಿ ಹೇಳಲು ನಾನು ಜಾಸ್ತಿ ಯೋಚನೆ ಮಾಡಬೇಕಾದ್ದಿರಲಿಲ್ಲ. ಪುಗಸಟ್ಟೆ ಸೊಕ್ಕು ಮೆರೆಯಲು ಇದೇ ಸದವಕಾಶ!

ಹೀಗೆ ಹದಿನೈದು ದಿನ, ತಿಂಗಳ ಕಾಲ ಕಾದು ಓದಬೇಕಾಗಿದ್ದ ಈ ಪುಸ್ತಕಗಳು ಮನೆಗೆ ಬಂದ ದಿನವಂತೂ ದೊಡ್ಡ ಕುರುಕ್ಷೇತ್ರ! ‘ಯಾರು ಮೊದಲು ಓದುವುದು?’ ದ ಮಿಲಿಯನ್ ಡಾಲರ್ ಕ್ವೆಶ್ಚನ್! ಅಣ್ಣನದ್ದು ಯಾವಾಗಲೂ ವೇಗದ ಓದು. ನನ್ನದು ನಿಧಾನ. `ಹೇಗೂ ನೀನು ನಿಧಾನ ಓದುತ್ತೀಯ. ನಾನು ಪಟಪಟ ಓದಿ ಕೊಡ್ತೀನಿ’ ಎಂದು ಬೈ ಡಿಫಾಲ್ಟ್ ಅವನೇ ಮೊದಲ ಓದುಗನಾಗುತ್ತಿದ್ದ. ಕೆಲವೊಮ್ಮೆ ಹೊಂದಾಣಿಕೆ, ಮಗದೊಮ್ಮೆ ಕಿತ್ತಾಟದ ನಡುವೆಯೇ ಹಾಗೂ ಹೀಗೂ ಈ ಡಿಂಗ, ಲಂಬೋದರರು ನಮ್ಮ ಮನದ ಪುಟ್ಟ ಕಥಾಲೋಕದೊಳಗೆ ಚಕ್ಕಳಮಕ್ಕಳ ಹಾಕಿ ಕೂತು ಕಲ್ಪನೆಗಳನ್ನು ಅರಳಿಸುವ ಕೆಲಸ ಮಾಡುತ್ತಿದ್ದರು. ನಾನಂತೂ ಪ್ರತಿ ಬೇಸಿಗೆ ರಜೆಯಲ್ಲೂ ಮೊದಲು ಮಾಡುವ ಕೆಲಸ ಚಂದಮಾಮದ ಪುನರಾವರ್ತನೆಯ ಓದು. ಅಷ್ಟೂ ವರ್ಷದ ಎಲ್ಲಾ ಚಂದಮಾಮಗಳನ್ನು ನನ್ನ ಡೆಸ್ಕ್ ಮೇಲೆ ಅಟ್ಟಿ ಇಟ್ಟುಕೊಂಡು ಹೋದಲ್ಲಿ ಬಂದಲ್ಲಿ ಕೂತಲ್ಲಿ ಮತ್ತೆ ಮತ್ತೆ ಅವವೇ ಕಥೆಯನ್ನು ಓದುವುದು ಎಂದರೆ ಅದೇನೋ ಪಂಚಪ್ರಾಣ. ಇದಾದ ಮೇಲಷ್ಟೇ ಬೇರೆ ಕಥೆ ಪುಸ್ತಕಗಳು. 

ನಮ್ಮ ಬಾಲ್ಯವಷ್ಟೂ ಮಂಗಳೂರಿನ ಹತ್ತಿರದ ಕಿನ್ನಿಗೋಳಿಯಲ್ಲಾದರೂ ಮೂಲ ಊರು ಮಲೆನಾಡಿನ ಕುಗ್ರಾಮವಾದ ದರೆಮನೆ. ರಜೆ ಬಂತೆಂದರೆ ಅಜ್ಜಿಯ ಮನೆಗೆ ಹೊರಡುವ ಕಾರ್ಯಕ್ರಮ ಇರುತ್ತಿತ್ತಲ್ಲ. ಅಲ್ಲಿನ ಮನೆಗಳಿಗೆ ಈ ಬಾಲಮಂಗಳ, ಚಂದಮಾಮ, ಚಂಪಕಗಳೆಲ್ಲಾ ತೀರಾ ದೂರದ ಮಾತು. ಚಿಕ್ಕಪ್ಪ, ಅತ್ತೆ-ಮಾವನ ಮಕ್ಕಳೆಲ್ಲಾ ಸೇರಿ ಕಡಿಮೆ ಎಂದರೂ ಹತ್ತು ಮಕ್ಕಳಿರುತ್ತಿದ್ದೆವು. ಅವರಿಗೂ ನಾನು-ಅಣ್ಣ ಹೇಳುವ ಕಥೆ ಕೇಳುವುದೆಂದರೆ ಇಷ್ಟ. ಡಿಂಗನಿದ್ದ ಇಡೀ ಪಂಗಿಲ ಕಾಡನ್ನೇ ಅವರ ಮುಂದೆ ಬಣ್ಣಬಣ್ಣವಾಗಿ ತಂದು ನಿಲ್ಲಿಸಿರುತ್ತಿದ್ದೆವು. ಕಥೆ ಪುಸ್ತಕಗಳನ್ನು ಅಲ್ಲಿಗೆ ಕೊಂಡೊಯ್ಯುವುದೂ ಇತ್ತು. ಎಲ್ಲರೂ ಓದಿ ಆ ಪುಸ್ತಕದ ಕಿವಿ ಮಡಚಿ ಹೋಗುತ್ತಿತ್ತು. ಕಥೆಯಲ್ಲಿ ಓದಿದ ಕಾಡಿನ ಸಾಹಸಗಳನ್ನು ಶರಾವತಿಯ ಹಿನ್ನೀರಿನ ಸುತ್ತಲಿನ ಕಾಡಿನಲ್ಲಿ ನಾವಷ್ಟೂ ಮಂದಿ ಸೇರಿ ಮಾಡಿರುತ್ತಿದ್ದೆವು. ಬೆಟ್ಟಗಳನ್ನು ಹತ್ತಿ ಇಳಿಯುತ್ತಾ, ನದಿಗಳನ್ನು ದಾಟುತ್ತಾ, ಬಂಡೆಗಳಲ್ಲಿ ಜಾರುತ್ತಾ, ಕಲ್ಲುಸಂಕದ ಮೇಲೆ ವಾಲಾಡುತ್ತಾ, ಕಾಡಿನ ಬಳ್ಳಿ ಹಿಡಿದು ಜೋತಾಡುತ್ತಿದ್ದರೆ ಎಲ್ಲರೂ ಕಥೆಯೊಳಗಿನ ಸೂಪರ್ ಹೀರೋಗಳೇ!

ಈಗ ನನ್ನ ಹನ್ನೆರಡರ ಹರೆಯದ ದೊಡ್ಡ ಮಗ ಕಥೆ ಪುಸ್ತಕ ಹಿಡಿದು ಕೂತರೆ ಪ್ರಪಂಚದ ಪರಿವೆಯನ್ನೇ ಮರೆಯುತ್ತಾನೆ. ಚಿಕ್ಕವನಿಗೆ ಇನ್ನೂ ಓದುವ ವಯಸ್ಸಾಗಲಿಲ್ಲ. ಆದರೆ ಪುಸ್ತಕದೊಳಗಿನ ಕಥೆಯನ್ನು ಬಣ್ಣಿಸಿ ಹೇಳುವುದನ್ನು ಕೇಳಲು ಅವನಿಗೆ ಭಲೇ ಇಷ್ಟ. ಇಬ್ಬರೂ ಪುಸ್ತಕವನ್ನು ಬಹಳ ಇಷ್ಟಪಡುವ ಮಕ್ಕಳೇ. ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ; ಎಲ್ಲರೂ ಮೊಬೈಲ್, ಟಿವಿಗಳತ್ತ ಮುಖ ಮಾಡಿದ್ದಾರೆ ಎಂಬ ಆಪಾದನೆ ನಿಜವೇ ಆದರೂ ಅವುಗಳ ನಡುವೆಯೂ ಕಥೆ ಪುಸ್ತಕಗಳನ್ನು ಶ್ರದ್ಧೆಯಿಂದ ಓದುವ ಮಕ್ಕಳು ಬೇಕಷ್ಟಿದ್ದಾರೆ. ಆದರೆ ಒಂದೇ ವ್ಯತ್ಯಾಸ, ಮುಂದಿನ ಪುಸ್ತಕ ಕೈಗೆ ಬರುವ ತನಕದ ಕಾಯುವಿಕೆಯ ಅವಧಿಯಲ್ಲಿ ನಡೆಯುತ್ತಿದ್ದ ಮಂಥನ ಕ್ರಿಯೆಯ ಮಜಾ ಮರೆಯಾಗಿದೆ. ಖೋ ಕೊಟ್ಟಂತೆ ನಮ್ಮ ಜೊತೆಗಿದ್ದವರ ಕಲ್ಪನೆಯನ್ನೂ ವಿಸ್ತರಿಸುತ್ತಿದ್ದ ಘಟನೆಯೊಂದು ನಡೆಯುತ್ತಲೇ ಇಲ್ಲ. ಹದಿನೈದು ದಿನಗಳ ಅವಧಿಯಲ್ಲಿ ಒಂದು ಕುಟುಂಬ, ಸ್ನೇಹಿತರು, ಆ ಮೂಲಕ ಮಕ್ಕಳ ಸುತ್ತಲಿನ ಒಂದು ವಲಯವೇ ಕಥೆಯೊಳಗೆ ಬೆಳೆದು ಅರಳುತ್ತಿದ್ದ ಸೊಗಸು ಮರೆತೇ ಹೋಗಿರುವುದು ಕಾಲದ ಬದಲಾವಣೆಯೂ ಹೌದು. ಇದು ಕೇವಲ ಕಥೆ ಪುಸ್ತಕ ಒಂದಕ್ಕೇ ಸೀಮಿತವಾದ ಸಂಗತಿಯಲ್ಲ. ಸಿನಿಮಾಗಳೂ ವಾರಕ್ಕೊಂದೇ ಆಗಿತ್ತು. ಕಾಯಬೇಕಾಗಿತ್ತು. ಆ ವಾರವಿಡೀ ನೋಡಿದ ಅದೊಂದೇ ಸಿನಿಮಾದ ಹಾಡುಗಳನ್ನು ಬರೆದುಕೊಂಡು ಗುನುಗುನಿಸುತ್ತಿದ್ದೆವು. ಪಾತ್ರಗಳ ಕುರಿತು ಚರ್ಚಿಸುತ್ತಿದ್ದೆವು. ಒಂದು ಸಂಗತಿಯನ್ನು ಕೆಲ ದಿನಗಳ ಕಾಲ ಯೋಚಿಸುವ, ಆ ಬಗ್ಗೆಯೇ ಮಾತನಾಡುತ್ತಾ ಕಲ್ಪನೆಗಳನ್ನು ವಿಸ್ತರಿಸುವ, ಸಹಜವಾಗಿ ನಡೆಯುತ್ತಿದ್ದ ಮನನ ಕ್ರಿಯೆಯನ್ನು ಮಕ್ಕಳ ಎದುರಿಗಿರುವ ಬಗೆಬಗೆಯ ಆಯ್ಕೆಗಳು ನುಂಗಿವೆ ಎನ್ನುವಾಗಲೇ ಪರಿಹಾರವೂ ಅಲ್ಲೇ ಕಾಣುತ್ತದೆ. ಪಾಲಿಸುವಂತೆ ಮಾಡುವುದಷ್ಟೇ ಉಳಿದ ಕೆಲಸ. ಆಗ ಕಥೆಯೊಂದನ್ನು ತಿಂಗಳಲ್ಲದಿದ್ದರೂ ನಾಲ್ಕು ದಿನವಾದರೂ ಮಥಿಸಲು ಸಾಧ್ಯ! 
***
ಮೂಲತಃ ದಕ್ಷಿಣಕನ್ನಡದ ಕಿನ್ನಿಗೋಳಿಯವರಾದ ಶ್ರೀಕಲಾ ಡಿ.ಎಸ್, ಲೇಖಕಿ ಮತ್ತು ಭರತನಾಟ್ಯ ಕಲಾವಿದೆ. ಧಾರವಾಹಿ ಸಂಭಾಷಣೆ ಬರೆಯುವುದು ಇವರ ವೃತ್ತಿ. ‘ದ ಸಂಡೆ ಇಂಡಿಯನ್’ ನ್ಯೂಸ್ ಮ್ಯಾಗಜೀನ್, ‘ಕನ್ನಡಪ್ರಭ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿಯೂ ಕ್ರಿಯಾಶೀಲರು. ‘ಬಾಳಂತಿ ಪುರಾಣ’ ಅವರ ಚೊಚ್ಚಲ ಕೃತಿ.