ಬಾಲ್ಯದಲ್ಲಿ ನನಗೆ ಒಂದು ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ‘ಯಾವುದೇ ಒಂದು ವಸ್ತು ನನಗೆ ಕಂಡಂತೆಯೇ ಮತ್ತೊಬ್ಬನಿಗೆ ಕಾಣುತ್ತದೆಯೇ?’ ಎಂಬ ಪ್ರಶ್ನೆಯದು. ಪ್ರೌಢಶಾಲೆಯಲ್ಲಿ ನಾನು ಕಿಟಕಿಯ ಅಂಚಿನ ಡೆಸ್ಕಿನಲ್ಲಿ ಕೂರುತ್ತಿದ್ದೆ. ಆ ಕಿಟಕಿಯಿಂದ ವಿಶಾಲ ಆಟದ ಅಂಗಳ ಕಾಣುತ್ತಿತ್ತು. ಆ ಬಯಲಿನ ಅಂಚಿನ ಕಾಲುಹಾದಿಯಿಂದ ಜನರು ಪೇಟೆಗೆ ಸಾಗುತ್ತಿದ್ದರು. ಒಂದು ಕಡೆ ತರಗತಿಯೊಳಗೆ ನಿರಂತರ ಧೋ ಎಂದು ಟೀಚರು ಪಾಠದ ಮಳೆಯನ್ನು ಸುರಿಸುತ್ತಿದ್ದರೂ, ಅದರ ನಡುವೆ ನನ್ನ ದೃಷ್ಟಿಯು ಜನರು ಸರಿದಾಡುವ ಕಿಟಕಿಯಾಚೆಗಿನ ಈ ದೃಶ್ಯದತ್ತ ಸೆಳೆಯಲ್ಪಡುತ್ತಿತ್ತು. ಆಗೆಲ್ಲ ಈ ಚಿತ್ರವು ನನಗೆ ಕಂಡಂತೆಯೇ ನನ್ನ ಪಕ್ಕದಲ್ಲಿರುವವನಿಗೂ ಕಾಣಿಸುವುದೇ ಎಂಬ ಪ್ರಶ್ನೆ ನನಗೆ ಎದುರಾಗುತ್ತಿತ್ತು ಅಥವಾ ನೆನಪಾಗುತ್ತಿತ್ತು. ತುಂಬ ದಿನ ಇದನ್ನು ನನ್ನ ಸಹೋಪವಿಷ್ಟ ಮಿತ್ರನಿಗೆ ಕೇಳಿರಲಿಲ್ಲ. ಎಲ್ಲಿಯಾದರೂ ನಕ್ಕುಬಿಟ್ಟಾನು ಎಂದು. ಯಾಕೆಂದರೆ ಈ ಪ್ರಶ್ನೆಯು ತಾತ್ತ್ವಿಕವಾದುದು ಎಂಬುದು ನನಗೆ ಗೊತ್ತಿತ್ತು.
ಒಂದು ದಿನ ಆತನಿಗೂ ಕೇಳಿಯೇ ಬಿಟ್ಟೆ. ಆತ ‘ಹೆಹೆಹೆ..ಇದೆಂಥ ಪ್ರಶ್ನೆ’ ಎಂದು ನಕ್ಕುಬಿಟ್ಟ. ಆಗ ನನಗೆ ಆತನಿಗೆ ವಿವರಿಸಬೇಕಾದ ಪ್ರಸಂಗವೊದಗಿತು. ಆದರೆ ಹೇಗೆ ವಿವರಿಸುವುದು? ಆದರೂ ಆತನನ್ನು ಕೇಳಿದೆ. ‘ಅಲ್ಲಿ ದೂರದಲ್ಲಿ ನೋಡು. ಒಬ್ಬ ವ್ಯಕ್ತಿ ಹೋಗುತ್ತಿದ್ದಾನೆ. ಆತ ಕೆಂಪು ಅಂಗಿಯನ್ನು ತೊಟ್ಟಿದ್ದಾನೆ. ನಿನಗೂ ಹಾಗೆಯೇ ಕಾಣಿಸುತ್ತಿದೆಯೇ?’ ಎಂದು ಕೇಳಿದೆ. ಆತ ‘ಹೌದು ಮತ್ತೆ. ಹಾಗೆಯೇ ಕಾಣಿಸುತ್ತಿದೆ. ಕಣ್ಣು ಸರಿ ಇರುವ ಎಲ್ಲರಿಗೂ ಹಾಗೆಯೇ ಕಾಣಿಸುತ್ತದೆ’ ಎಂದ. ಆದರೆ ನನ್ನ ಪ್ರಶ್ನೆ ಅದಲ್ಲ ಎಂದೆ. ಆತನ ಅಂಗಿಯ ಬಣ್ಣ ಕೆಂಪು ಎಂದು ನಾವು ಹೇಳುತ್ತಿದ್ದೇವಲ್ಲ, ಆ ಕೆಂಪು ನನಗೆ ಯಾವ ರೀತಿಯಲ್ಲಿ ಅನುಭವವಾಗುತ್ತಿದೆಯೋ ಹಾಗೆಯೇ ನಿನಗೆ ಕಾಣಿಸುತ್ತಿದೆ ಎಂದು ಏನು ಗ್ಯಾರಂಟೀ ಎಂದು ಕೇಳಿದೆ. ಆತನಿಗೆ ಆ ಪ್ರಶ್ನೆ ಅರ್ಥವಾಗಲಿಲ್ಲ. ಆಮೇಲೆ ನಾನೇ ಆ ಪ್ರಶ್ನೆಯ ತಾತ್ಪರ್ಯವನ್ನು ತಿಳಿಸಿದೆ; ಈ ಜಗತ್ತಿನ ವಸ್ತುಗಳನ್ನು ಒಬ್ಬೊಬ್ಬನೂ ಒಂದೊಂದು ರೀತಿಯಲ್ಲಿ ಕಾಣುತ್ತಿರಬಹುದು. ಆದರೆ ಹೆಸರು ಮಾತ್ರ ಸಮಾನವಾಗಿ ಇರಬಹುದು. ಹಾಗಾಗಿ ನಾವೆಲ್ಲ ಒಂದೇ ಶಬ್ದದಿಂದ ಕರೆಯುತ್ತಿದ್ದರೂ ಹಾಗೆ ಕರೆಯಲ್ಪಡುವ ವಸ್ತುಗಳೆಲ್ಲ ಬೇರೆಯವೇ ಆಗಿರಬಹುದಲ್ಲ ಎಂಬುದಾಗಿ. ನನ್ನ ವಿವರಣೆಯಲ್ಲಿ ಆಗ ಇಷ್ಟು ಸ್ಪಷ್ಟತೆ ಇದ್ದಿರಲಿಕ್ಕಿಲ್ಲ. ಆದರೆ ಭಾವವಂತೂ ಇದೇ ಆಗಿತ್ತು.
ಈ ಪ್ರಶ್ನೆಗೆ ನನಗೆ ಉತ್ತರವೇನೂ ಸಿಗಲಿಲ್ಲ. ಆದರೆ ಪ್ರಶ್ನೆ ಮಾತ್ರ ನನ್ನ ತಲೆಯಲ್ಲಿ ಹಾಗೆಯೇ ಗಟ್ಟಿಯಾಗಿ ಉಳಿದುಬಿಟ್ಟಿತು. ಇದು ನನಗೆ ಅನಂತರದ ನನ್ನ ತತ್ತ್ವಶಾಸ್ತ್ರದ ಅಧ್ಯಯನ ಹಾಗೂ ಜೀವನಾನುಭವದ ಜೊತೆಗೆ ಮಿಳಿತವಾಗಿ ನನ್ನ ತಿಳಿವನ್ನು ವಿಸ್ತರಿಸಲು ಕಾರಣವಾಯಿತು. ನಮ್ಮ ಕಣ್ಣಿನಿಂದ ನಾವು ಯಾವುದೇ ವಸ್ತುವನ್ನು ಕಾಣುವಾಗ ಆ ವಸ್ತುವಿನ ಚಿತ್ರವು ರೆಟಿನಾ ಮೇಲೆ ತಲೆಕೆಳಗಾಗಿ ಬೀಳುತ್ತದೆ ಎನ್ನುತ್ತದೆ ವಿಜ್ಞಾನ. ಯಾರಿಗೆ ಗೊತ್ತು? ಜಗತ್ತನ್ನೂ ಉಲ್ಟಾಪಲ್ಟಾ ನೋಡುತ್ತಾ ಅದನ್ನೇ ಸತ್ಯವೆಂದು ಎಣಿಸಿದ್ದೇವೆಯೋ ಎಂದು ನನಗೆ ಬಲವಾಗಿ ಅನಿಸುತ್ತದೆ. ನಮ್ಮ ಮುಖ ಹೇಗಿದೆ ಎಂದು ನಮಗೆ ಗೊತ್ತಿಲ್ಲ. ಹಾಗಾಗಿ ನಾವು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಮ್ಮ ಮುಖ ಎಂಬುದಾಗಿ ನಂಬಿದ್ದೇವೆ. ನಿಜವಾಗಿ ಹೇಳಬೇಕೆಂದರೆ, ಬೇರೊಬ್ಬರ ಮುಖದ ಪ್ರತಿಬಿಂಬವನ್ನು ಕನ್ನಡಿಯಲ್ಲಿ ಕಂಡಾಗ, ಕನ್ನಡಿಯಲ್ಲಿನ ಪ್ರತಿಬಿಂಬವು ಹೇಗೆ ಎಡ-ಬಲ ತಿರುಗಾ-ಮುರುಗಾ ಆಗಿರುತ್ತದೆ ಎಂಬುದು ಅರ್ಥವಾಗುತ್ತದೆ. ನಮ್ಮ ಮುಖವನ್ನೂ ನಾವು ಎಡ-ಬಲ ವ್ಯತ್ಯಸ್ತವಾಗಿಯೇ ಕಾಣುತ್ತೇವೆ ಮತ್ತು ಅದೇ ಸತ್ಯವೆಂದು ಎಣಿಸಿದ್ದೇವೆ.
ನೆಲವು ನಮಗೆ ಸಪಾಟಾಗಿದೆ ಎಂದೇ ಎನಿಸುತ್ತದೆ. ಹಾಗಾಗಿ ಭೂಮಿ ಮೇಜಿನ ಮೇಲ್ಭಾಗದಂತೆ ಇದೆ ಎಂದು ಭಾವಿಸುತ್ತೇವೆ. ಹಾಗಿಲ್ಲ, ಬದಲಿಗೆ ಕಿತ್ತಳೆ ಹಣ್ಣಿನಂತೆ ಉರುಟುರುಟಾಗಿದೆ ಎಂಬುದು ವಿಜ್ಞಾನದ ಮೂಲಕ ಗೊತ್ತಾಗುತ್ತದೆ. ಅನುಭವಕ್ಕಂತೂ ಬರುವುದಿಲ್ಲ. ನಿತ್ಯವೂ ನಾವು ವ್ಯವಹರಿಸುವ ಮೇಲೆ, ಕೆಳಗೆ, ಪೂರ್ವ, ಪಶ್ಚಿಮ ಇವೆಲ್ಲ ಇಲ್ಲವೇ ಇಲ್ಲ ಎಂಬುದನ್ನು ಬೃಹತ್ ವಿಶ್ವವನ್ನು ಪರಿಕಲ್ಪಿಸಿಕೊಂಡಾಗ ಅರಿವಿಗೆ ಬರುತ್ತದೆ. ಆಕಾಶಕಾಯಗಳ ಸ್ಥಿತಿಯನ್ನು ಗಮನಿಸಿದಾಗ ಮೇಲೆ ಯಾವುದು? ಕೆಳಗೆ ಯಾವುದು? ಯಾವುದು ಪೂರ್ವ? ಯಾವುದು ಪಶ್ಚಿಮ? ಹಾಗೆಯೇ ‘ಸೂರ್ಯನ ಸುತ್ತ ಎಲ್ಲ ಗ್ರಹಗಳೂ ತಿರುಗುತ್ತವೆ’ ಎಂಬುದು ನಾವು ವಿಜ್ಞಾನದ ಮೂಲಕವೇ ತಿಳಿದುಕೊಂಡ ಸತ್ಯ. ಅಲ್ಲಿಗೆ ಭೂಮಿಯು ತನ್ನ ಸುತ್ತ ಸುತ್ತುತ್ತ ಸೂರ್ಯನ ಸುತ್ತಲೂ ಸುತ್ತುತ್ತಿದೆ. ಹಾಗಾಗಿ ನಾವು ಭೂಮಿಯ ಜೊತೆಗೆ ನಮ್ಮ ಸುತ್ತಲೇ ಸುತ್ತುತ್ತಾ, ಸೂರ್ಯನ ಸುತ್ತಲೂ ಸುತ್ತುತ್ತಿದ್ದೇವೆ. ಆದರೆ ಆ ಸೂರ್ಯನೂ ಗ್ಯಾಲಾಕ್ಸಿಯ ಸುತ್ತ ಸುತ್ತುತ್ತಿದ್ದಾನೆ. ಹಾಗಾಗಿ ನಮ್ಮ ಸುತ್ತುವಿಕೆ ಎಂಬುದು ವೃತ್ತಾಕಾರದಲ್ಲಿರದೇ ವಿಚಿತ್ರ ಸುರುಳಿಯಾಕಾರದಲ್ಲಿ ಇದೆ. ಇವೆಲ್ಲ ನಮ್ಮ ದೃಷ್ಟಿ ಹಾಗೂ ತರ್ಕಕ್ಕೆ ಮೀರಿದ್ದು.
ಹೀಗೆಯೇ ಮತ್ತೊಂದು ಗ್ಯಾಲಾಕ್ಸಿಯಲ್ಲಿ ಇರುವವನಿಗೆ ಇವೆಲ್ಲ ಮತ್ತೊಂದು ರೀತಿ ಕಾಣಿಸಬಹುದು. ಒಟ್ಟಿನಲ್ಲಿ ನಾವು ಎಲ್ಲಿ ನಿಂತು ನೋಡುತ್ತೇವೆ ಎಂಬುದೇ ಮುಖ್ಯ ಅದಕ್ಕನುಗುಣವಾಗಿ ನಮ್ಮ ಅನುಭವವೂ ಬೇರೆಯಾಗುತ್ತದೆ ಎಂಬುದಂತೂ ಪಕ್ಕಾ. ಹೀಗೆಯೇ ಯೋಚಿಸುತ್ತಾ ಹೋದರೆ, ನಮಗೆ ಇಡಿಯ ವಿಶ್ವದ ಒಂದು ಕೂದಲು ಕೂಡ ನಿಲುಕಿಲ್ಲ ಎಂಬುದು ಅರ್ಥವಾಗುತ್ತದೆ. ವಿಜ್ಞಾನದ ಅಂದಾಜಿಗೆ ನಿಲುಕಿದ್ದೇ ಕೂದಲಿನ ತುದಿಗೆ ಸಮ ಎಂದಾದರೆ ನಿತ್ಯ ನಮ್ಮ ಸೀಮಿತ ಇಂದ್ರಿಯಗಳ ವ್ಯಾಪ್ತಿಗೆ ಬಂದಿರುವ ಪ್ರಪಂಚ ಇನ್ನೆಷ್ಟು ಸಣ್ಣದಿರಬಹುದು!
ಇವೆಲ್ಲಕ್ಕಿಂತ ಮುಖ್ಯ ವಿಚಾರವೊಂದನ್ನು ಹೇಳಬೇಕು. ಅದೇನೆಂದರೆ, ಪ್ರಪಂಚ ಎಂಬುದು ಒಂದೇ ಅಲ್ಲ ಎಂಬುದು. ಅಂದರೆ ಈ ಜಗತ್ತಿನಲ್ಲಿ ತಲೆಗೊಂದು ಜಗತ್ತಿದೆ. ಅರ್ಥಾತ್ ಒಬ್ಬೊಬ್ಬನ ಜಗತ್ತೂ ಬೇರೆ ಬೇರೆ. ಅದು ಹೇಗೆ ಎಂಬುದನ್ನು ವಿವರಿಸುತ್ತೇನೆ ನೋಡಿ; ನಾವು ಯಾವುದೇ ವಸ್ತುವನ್ನು ನೋಡಿದಾಗ ಏನಾಗುತ್ತದೆ? ಅದರ ಜ್ಞಾನವುಂಟಾಗುತ್ತದೆ ಅಲ್ಲವೇ? ಈ ಜ್ಞಾನವೆಂದರೆ ಏನು? ನಮ್ಮ ಮನಸ್ಸಿನಲ್ಲಿ ಉಂಟಾದ ಒಂದು ಮೃದುಪ್ರತಿ(ಸಾಫ್ಟ್ʼಕಾಪಿ) ಅದು. ಈ ಜ್ಞಾನವು ಸಂಸ್ಕಾರವನ್ನು ಉಂಟುಮಾಡಿ ಹೋಗುತ್ತದೆ. ಇದೇ ಆಮೇಲೆ ಸ್ಮೃತಿ ಅಥವಾ ನೆನಪಾಗಿ ಪರಿಣಾಮವನ್ನು ಹೊಂದುತ್ತದೆ. ಈ ಜ್ಞಾನವೆಂಬುದು ಕೂಡ ಹೊರಗೆ ತೋರಿದ ವಸ್ತುವಿನ ಆಕಾರದಲ್ಲಿಯೇ ನಮ್ಮಲ್ಲಿ ಅಚ್ಚೊತ್ತುತ್ತದೆ. ನಾವು ಅತಿಯಾಗಿ ಪ್ರೀತಿಸುವ ವಸ್ತುವನ್ನು ನಾವು ಅದು ಸಮೀಪದಲ್ಲಿಲ್ಲದಾಗಲೂ ಧ್ಯಾನಿಸುತ್ತಿರುತ್ತೇವೆ. ಎಷ್ಟೋ ಸಲ, ಇಂಥ ಧ್ಯಾನದಿಂದ ಹತ್ತಿರವಿರದ ಆ ವಸ್ತುವೂ ಇದೆಯೆಂಬಂತೆ ಕೆಲವೊಮ್ಮೆ ಭ್ರಮೆಯುಂಟಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಣ್ಣು, ಕಿವಿ, ಮೂಗು ಇತ್ಯಾದಿ ಕಿಟಕಿಗಳ ಮೂಲಕ ಗ್ರಹಿಸಿದ ಜಗತ್ತನ್ನು ತನ್ನ ಅಂತಃಕರಣದಲ್ಲಿ ಕಾಪಿಟ್ಟುಕೊಳ್ಳುತ್ತಾನೆ. ಹಾಗೆ ತನ್ನ ಮನಸ್ಸಿನೊಳಗೆ ಹೊರಗಿನ ವಸ್ತುವಿನ ಪ್ರತಿಕೃತಿಯೊಂದು ರಚಿಸಲ್ಪಡುವಾಗ ಅದಕ್ಕೆ ನಮ್ಮ ಇಷ್ಟ-ಅನಿಷ್ಟಗಳು, ನಮ್ಮ ಪೂರ್ವಗ್ರಹಗಳು, ಅದರ ಬಗೆಗಿನ ಅಭಿಪ್ರಾಯಗಳು ಇತ್ಯಾದಿ ಬಣ್ಣಗಳು ಸೇರಿಕೊಳ್ಳುತ್ತವೆ. ಕೆಲವಷ್ಟು ಸಂಗತಿಗಳು ನಮಗೆ ‘ಬೇಕಾದವು’ಗಳೆಂಬ ಟ್ಯಾಗ್ ಅಂಟಿಸಿಕೊಂಡು, ಇನ್ನು ಕೆಲವು ‘ಬೇಡದವು’ಗಳೆಂಬ ಟ್ಯಾಗ್ ಅಂಟಿಸಿಕೊಂಡು, ಮತ್ತೆ ಕೆಲವು ಉಪೇಕ್ಷಿತವೆಂಬ ಟ್ಯಾಗ್ ಜೊತೆಗೂ, ನಾನಾವಿಧದ ಭಾವಗಳೆಂಬ ಬಣ್ಣಗಳನ್ನು ಪಡೆದು ಹೊರಗಿರುವ ಮೂಲವಸ್ತುವಿಗಿಂತ ಭಿನ್ನರೂಪದಲ್ಲಿ ಮನಸ್ಸಿನಲ್ಲಿ ಸಂಗ್ರಹಗೊಳ್ಳುತ್ತವೆ.
ಹೀಗೆ ಸಂಗ್ರಹಗೊಂಡ ವಸ್ತುಗಳ ಚಿತ್ರಣದೊಂದಿಗೆ ನಮ್ಮ ಸಂವಾದ ಮುಂದುವರೆಯುತ್ತದೆ. ಇದನ್ನೇ ಮಾನಸ ಪ್ರಪಂಚ ಎನ್ನಲಾಗುತ್ತದೆ. ಈ ಮಾನಸ ಪ್ರಪಂಚದೊಂದಿಗೆ ನಮ್ಮ ನಿತ್ಯದ ಸಂವಾದ ನಡೆಯುತ್ತಲೇ ಇರುತ್ತದೆ. ಬಾಹ್ಯ ಭೌತಿಕ ಜಗತ್ತಿನ ಜೊತೆ ಕೆಲವೊಮ್ಮೆ ಸಂಬಂಧವಿಲ್ಲದಂತೆಯೂ ಇರುವುದು.
ಉದಾಹರಣೆಗೆ, ದೂರದೇಶದಲ್ಲಿ ಇರುವ ಮಗ ಚೆನ್ನಾಗಿದ್ದಾನೆ ಎಂದು ಇಲ್ಲಿ ತಂದೆ ಸಮಾಧಾನದಿಂದ ಜೀವನ ನಡೆಸುತ್ತಿರುತ್ತಾನೆ. ಆದರೆ ಆತ ತೀರಿ ಹೋಗಿದ್ದು ತಂದೆಗೆ ಗೊತ್ತಿಲ್ಲ ಎಂದುಕೊಳ್ಳೋಣ. ಹಾಗಿದ್ದೂ ತಂದೆಯು ತನ್ನ ಮಗ ಕ್ಷೇಮದಿಂದಿದ್ದಾನೆ ಎಂದೇ ಭಾವಿಸಿರುತ್ತಾನೆ. ಆತನಿಗೆ ದುಃಖ ಎಂಬುದು ಉಂಟಾಗುವುದಿಲ್ಲ. ಇನ್ನೊಂದು ಉದಾಹರಣೆಯನ್ನು ನೋಡೋಣ; ಇದೇ ದೃಷ್ಟಾಂತದಲ್ಲಿ ಮಗನು ಕ್ಷೇಮದಿಂದ ಇದ್ದಾನೆ. ಆದರೆ ಬಹಳ ದಿನ ಮಗನ ಸುದ್ದಿಯಿಲ್ಲದ್ದರಿಂದ ತೀರಿಕೊಂಡ ಎಂದು ತಂದೆ ಭಾವಿಸಿದ ಎಂದುಕೊಳ್ಳೋಣ. ಆಗ ದುಃಖಕ್ಕೆ ಕಾರಣವಿಲ್ಲದಾಗ್ಯೂ ದುಃಖಕ್ಕೆ ಒಳಗಾಗುತ್ತಾನೆ.
ಈ ಎರಡೂ ಸಂದರ್ಭದಲ್ಲಿಯೂ ತಂದೆಯ ಸುಖಕ್ಕೆ ಮತ್ತು ದುಃಖಕ್ಕೆ ತಂದೆಯ ಮನಸ್ಸಿನೊಳಗಿರುವ ಪುತ್ರನೇ ಕಾರಣ. ಅರ್ಥಾತ್ ಮಗನು ತೀರಿಕೊಂಡಿದ್ದರೂ ಮನಸ್ಸಿನೊಳಗಿನ ಮಗ ತೀರಿಕೊಂಡಿರಲಿಲ್ಲ. ಮಗ ತೀರಿಕೊಂಡಿರದಿದ್ದರೂ ಮನಸ್ಸಿನೊಳಗಿನ ಮಗ ತೀರಿ ಹೋಗಿದ್ದ. ಹೀಗೆ ಭೌತಿಕ ಪ್ರಪಂಚದ ಒಂದು ಪ್ರತಿಕೃತಿ ನಮ್ಮ ಮನಸ್ಸಿನಲ್ಲಿರುತ್ತದೆ. ಈ ನಮ್ಮ ಮಾನಸ ಪ್ರಪಂಚ ಎಂಬುದು ಒಬ್ಬೊಬ್ಬರಿಗೆ ಒಂದೊಂದು ರೀತಿ. ಅದಕ್ಕೆ ಅನುಗುಣವಾಗಿ ನಮ್ಮ ಸುಖ ದುಃಖಗಳು ನಿರ್ಣಯಿಸಲ್ಪಡುತ್ತವೆ. ಈ ಮಾನಸ ಪ್ರಪಂಚವನ್ನು ನಾವೇ ನಮ್ಮ ಪೂರ್ವಜನ್ಮದ ವಾಸನೆಗಳಿಗನುಗುಣವಾಗಿ ಹಾಗೂ ಈ ಜನ್ಮದ ಅನುಭವಗಳಿಂದ ಕಟ್ಟಿಕೊಳ್ಳುತ್ತೇವೆ. ಹೊರಗಿನ ಪ್ರಪಂಚದಲ್ಲಿ ಇಲ್ಲದ ಸಂಗತಿಗಳೂ ನಮ್ಮ ಮನಸ್ಸಿನೊಳಗಿನ ಪ್ರಪಂಚದಲ್ಲಿ ಇರುತ್ತವೆ.
ಹಾಗಾಗಿಯೇ ಯಾವುದೇ ವ್ಯಕ್ತಿ ನಮ್ಮ ಮನಸ್ಸಿನಲ್ಲಿ ಕೇವಲ ವ್ಯಕ್ತಿಯಾಗಿರುವುದಿಲ್ಲ. ಬದಲಿಗೆ ಒಳ್ಳೆಯವನೋ, ಕೆಟ್ಟವನೋ ಆಗಿರುತ್ತಾನೆ. ಅಥವಾ ಆತನ ಬಗ್ಗೆ ನಮಗೊಂದು ಅಭಿಪ್ರಾಯ ಇರುತ್ತದೆ. ಆ ಅಭಿಪ್ರಾಯವನ್ನು ಆತನಿಗೆ ಅಂಟಿಸಿ ನಾವು ಆತನನ್ನು ಕಾಣುತ್ತೇವೆ. ಹೀಗೆ ನಮ್ಮ ನಮ್ಮ ಪ್ರಪಂಚದಲ್ಲಿ ಇರುವ ವಸ್ತು ಅಥವಾ ವ್ಯಕ್ತಿಗೂ, ಮತ್ತೊಬ್ಬನ ಪ್ರಪಂಚದಲ್ಲಿರುವ ವ್ಯಕ್ತಿ ಅಥವಾ ವಸ್ತುವಿಗೂ ವ್ಯತ್ಯಾಸವಿರಬಹುದು. ಇವೆರಡಕ್ಕಿಂತಲೂ ಹೊರಗಿರುವ ಅಸಲಿ ವ್ಯಕ್ತಿಗೆ ಕೂಡ ಭಿನ್ನತೆ ಇರಬಹುದು. ಒಟ್ಟಿನಲ್ಲಿ ನಾವೆಲ್ಲ ಅರ್ಧ ಸತ್ಯ, ಮತ್ತರ್ಧ ಊಹಾತ್ಮಕವಾದ ಪ್ರಪಂಚದಲ್ಲಿ ಸಾಗುತ್ತಿದ್ದೇವೆ. ಒಟ್ಟಿನಲ್ಲಿ ನಮ್ಮೆಲ್ಲರ ಪ್ರಪಂಚ ಬೇರೆ ಬೇರೆ. ಜೀವನದುದ್ದಕ್ಕೂ ನಾವೇ ಕಲ್ಪಿಸಿಕೊಂಡ ಪ್ರಪಂಚದ ಹೆಗಲ ಮೇಲೆ ಕೈ ಹಾಕಿ ಅದರೊಟ್ಟಿಗೆ ಸಾಗುತ್ತಿರುತ್ತೇವೆ ಎಂಬುದು ಒಂದು ವಿಚಿತ್ರ ಸತ್ಯ.
(ಲೇಖಕರು ಸಹಾಯಕ ಆಚಾರ್ಯರು, ವೇದಾಂತ ವಿಭಾಗ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಶೃಂಗೇರಿ)