ತೇಜಸ್ವಿಯವರ ಕರ್ವಾಲೋ ಓದಿದವರಿಗೆ ಗುರುಗಿ ಹಳುವಿನ ಬಗ್ಗೆ ವಿಶೇಷ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ನೀಲ ಕುರಿಂಜಿ ಎಂದೇ ಚಿರಪರಿಚಿತವಾದ ಇವುಗಳು ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳಲ್ಲಿ ಕಂಡು ಬರುತ್ತವೆ. ಈ ಸುಂದರ ಹೂ ತಳೆಯುವ ಸಸ್ಯಗಳು ಅಕಾಂತೇಸಿ ( ಕನಕಾಂಬರ) ಕುಟುಂಬಕ್ಕೆ ಸೇರಿದ್ದು ಸುಮಾರು 46 ಪ್ರಜಾತಿಯ ಸಸ್ಯಗಳನ್ನು ಕಾಣಬಹುದು. ಇವುಗಳಲ್ಲಿ 'ಸ್ಟ್ರೋಬಿಲ್ಯಾಂಥಸ್ ಕುಂಥಿಯಾನಾ' ಎಂಬ ವೈಜ್ಞಾನಿಕ ನಾಮವುಳ್ಳ, 12 ವರ್ಷಕ್ಕೊಮ್ಮೆ ಮಾತ್ರ ಅರಳೋ  ಸಸ್ಯಗಳಂತೂ ಬಹಳ ಫೇಮಸ್ಸು...! ಆದರೆ 8 ವರ್ಷಕ್ಕೊಮ್ಮೆ ಹೂವನ್ನರಳಿಸುವ ಪ್ರಜಾತಿಯ ಸಸ್ಯಗಳು ನಮ್ಮ ಕರ್ನಾಟಕದಲ್ಲಿ ಹೆಚ್ಚು. 

ಆದರೆ ತುಂಬಾ ಜನ ಗಮನಿಸದ ವಿಷಯವೋ ಏನೋ ಗೊತ್ತಿಲ್ಲ. ಗುಂಪಲ್ಲಿ ಅಲ್ಲದಿದ್ದರೂ ಗಿರಿಯ ಮೇಲಿರೋ ಅಸಂಖ್ಯಾತ ಹಳುಗಳಲ್ಲಿ ಎಲ್ಲೋ ಕೆಲವಾರು ಗುರುಗಿ ಹಳುಗಳು ಹೂವನ್ನು ತಳೆಯುತ್ತವೆ. ಇತ್ತೀಚೆಗೆ ದೇವಿರಮ್ಮ ಬೆಟ್ಟ ಹತ್ತುವಾಗ ಅಲ್ಲಲ್ಲಿ ಒಂದೊಂದು ಗಿಡಗಳಲ್ಲಿ ಹೂಗಳು ಅರಳಿದ್ದವು. ಹೋದ ವರ್ಷ ಮಾತ್ರ ಈ ಸಸ್ಯಗಳು ಅಸಂಖ್ಯಾತ ಹೂ ತಳೆದಿದ್ದಕ್ಕೋ ಏನೋ ಪ್ರವಾಸಿಗರ ದಂಡೇ ಚಿಕ್ಕಮಗಳೂರಿಗೆ ಆಗಮಿಸಿತ್ತು. ನಿಸರ್ಗದ ಮೇಲಿನ ಕಾಳಜಿಗಿಂತ, ಹೂವಿನ ಸೌಂದರ್ಯವೇ ಹೆಚ್ಚಾಗಿ ಕಂಡಿದ್ದಕ್ಕೆ ಅನಾಗರಿಕರಂತೆ ದಂಡಿ ದಂಡಿಯಾಗಿ ಹೂಗಳನ್ನು, ಮತ್ತು ಅದರ ಸಸ್ಯಗಳನ್ನು ಕಿತ್ತು ತಮ್ಮ‌ ಗಾಡಿಯ ಡಿಕ್ಕಿಯಲ್ಲಿ ತುಂಬಿಕೊಂಡು ಹೋಗಿದ್ದರು. ಆದರೆ ವಿಶೇಷ ಅಂದ್ರೆ ಆ ಹೂವು ಯಾರ ಮನೆಯ ಕುಂಡದಲ್ಲೂ ಬೆಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಆ ಹೂವು ಬೆಳೆಯುವ ವಿಶೇಷ ವಾತಾವರಣ ಇರುವುದು ನಮ್ಮ ಶೋಲಾ ಅರಣ್ಯಗಳಲ್ಲಿ ಮಾತ್ರ.

ಶೋಲಾ ಕೇವಲ ನೀಲಕುರಿಂಜಿಗಳಿಗಷ್ಟೇ ಅವಾಸವಲ್ಲ. ಜೀವ ಜಗತ್ತಿನ ಸಮತೋಲನಕ್ಕೆ ಇದೊಂದು ಪ್ರಧಾನ ಕೊಂಡಿ. ಕರ್ವಾಲೋದಲ್ಲಿ ನೀಲಕುರಿಂಜಿ ಅರಳಿದಾಗ ಜೇನು ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಆಗುತ್ತದೆ ಎಂದು ನಾವೆಲ್ಲಾ ಓದಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ. ಜೇನು ನೊಣಗಳ ಜೊತೆಗೆ ಶೋಲಾ ಪ್ರದೇಶವು ಕಣ್ಣರೆಯಾಗುತ್ತಿದೆ. ಜೇನು ಉತ್ಪಾದನೆ ಕುಸಿಯುತ್ತಿದೆ. ಒಂದೆಡೆ ಪ್ರವಾಸೋದ್ಯಮದ ಹೆಸರಲ್ಲಿ ತ್ಯಾಜ್ಯಗಳು ಕಣಿವೆಗಳನ್ನು ಸೇರುತ್ತಿದ್ದರೆ ಮತ್ತೊಂದೆಡೆ ಶೋಲಾ ಅರಣ್ಯವನ್ನು ಕಬಳಿಸುತ್ತಾ ಬರುತ್ತಿರೋ ಕಾಫಿ, ರಬ್ಬರ್ ಬೆಳೆ ಪ್ರದೇಶ ವಿಸ್ತರಣೆ, ಹೊಸ ರಸ್ತೆ, ಅಣೆಕಟ್ಟುಗಳ ನಿರ್ಮಾಣ, ನದಿ ತಿರುವಿನಂತಹ ಯೋಜನೆಗಳು ಪ್ರಕೃತಿಯ ಮೇಲೆ ಅಪಚಾರವೆಸಗುತ್ತಿವೆ. ಅನಿವಾರ್ಯತೆ ಹೊರತುಪಡಿಸಿ ಅನಗತ್ಯವಾದ ಇಂತಹ ಅನೇಕ ಯೋಜನೆಗಳಿಗೆ ಅಂಕುಶ ಬೀಳಲೇ ಬೇಕಾದ ತುರ್ತು ಅಗತ್ಯವಿದೆ.

ಅನುರಾಗ್‌ ಗೌಡ
(ಲೇಖಕರು ಉಜಿರೆ ಎಸ್‌ ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ)