-ಟಿ ಎಸ್ ಕೃತಿಕಾರಾಣಿ

ವಯುವಕರ ಈಡೇರದ ಕನಸಿನ ಪ್ರವಾಸೀ ತಾಣ! ಬೀಚು, ಮೋಜು, ಮಸ್ತಿ, ಪಾನೀಯಗಳ ಬೃಹತ್ ಕೇಂದ್ರ. ಭಾರತದಲ್ಲಿನ ಯುರೋಪ್, ಎಲ್ಲೆಡೆಯೂ ಚಡ್ಡಿ ಕಾಲ್ಗಳ ಹಿಂಡು... ನಾನೂ ಹೀಗೇ ಎಣಿಸಿದ್ದೆ, ನಾನಾಗಿ ನೋಡುವ ಮೊದಲು. ಇಲ್ಲಿಗೆಲ್ಲ ಯಾರೂ ಓದುವ ಕಾರಣಕ್ಕೆಲ್ಲ ಬರುವ ರೂಢಿಯಿಲ್ಲ, ಮಕ್ಕಳು ದಾರಿ ತಪ್ಪಿ ಬಿಡಬಹುದೆಂಬ ಭಯ ಪಾಲಕರಿಗೆ ಇದ್ದೇ ಇರುತ್ತದೆ. ಇಲ್ಲಿಯವರಿಗೂ ಅಷ್ಟೇ, ಹೊರ ರಾಜ್ಯಗಳಿಂದ ಓದಿಗಾಗಿ ಇಲ್ಲಿ ಬಂದವರ ಬಗ್ಗೆ ಕೇಳಿಯೂ ಗೊತ್ತಿಲ್ಲ. ರಜೆಯ ಮಜದ ದಿನಗಳಿಗಿದು ಹೆಸರುವಾಸಿ. ಅಂದಹಾಗೆ ಈ ವಿವರಣೆ ಯಾವುದರ ಕುರಿತೆಂದು ಬಾಯ್ಬಿಟ್ಟು ಹೇಳಬೇಕೆಂದೇನಿಲ್ಲ ತಾನೇ? 

‘ಗೋವೇ ಕೂಸುʼ, ‘ಗೋವಾ ಹುಡುಗಿʼ, ‘ಗ್ವಾವೆ ರಾಣಿʼ ಇವೆಲ್ಲ ಇತ್ತೀಚಿನ ನನ್ನ ಅನ್ವರ್ಥನಾಮಗಳು. ಊರಲ್ಲಿ ಆಚೀಚೆ ಹೋದರೆ, ನನ್ನ ನೋಡುತ್ತಿದ್ದಂತೆಯೇ ‘ಇದೆಲ್ಲಿಂದ ಮೀನು ವಾಸನೆ ಬರುತ್ತಿದೆ ಎಂದು ಯೋಚಿಸುತ್ತಿದ್ದೆ, ಅಷ್ಟೋತ್ತಗೇ ನೀನು ಬಂದೆʼ ಎನ್ನುವ ಮಾತುಗಳನ್ನು ಕೇಳಿ ಕೇಳಿ, ಇದ್ದರೂ ಇರಬಹುದು ಎನ್ನಿಸಿ, ಹೊರಡುವಾಗ ಎರಡು ಸುತ್ತು ಹೆಚ್ಚಿಗೆ ಸೆಂಟ್ ಸುರಿದುಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಇತ್ತ ಗೋವನ್ನರಿಗೆ ನಾನು ಅಪ್ಪಟ ಸಸ್ಯಹಾರಿ ಎಂಬುದನ್ನು ಕರಗಿಸಿಕೊಳ್ಳಲು ಚಿಕನ್ ಸಮೋಸ ತಿಂದ ಮೇಲೆಯೇ ಶಕ್ತಿ ಬರಬೇಕು! ಮೀನು-ಮೊಟ್ಟೆ ಶಾಖಾಹಾರದ ಪಟ್ಟಿಗೆ ಸೇರುವುದೆಂಬ ಜ್ಞಾನ ನನ್ನ ಸಂಗವಾದ ಮೇಲೆಯೇ ಇಲ್ಲಿ ಹಲವರಿಗೆ ತಿಳಿದಿದ್ದು ಎಂದರೆ ಅತಿಶಯೋಕ್ತಿ ಅಲ್ಲ. ಮೀನು ತಿನ್ನದೇ ಹೋದಲ್ಲಿ ಗಳಗಂಡ ಬಂದೀತು ಎಂದು ಎಚ್ಚರಿಸಿದವರೂ ಇದ್ದಾರೆ. ಇವೆಲ್ಲದರಿಂದಾಚೆಗೆ ನನಗೆ ಸೋಜಿಗವೆನಿಸುವುದು ಗೋವನ್ನರ ‘ಪಾವ್ʼ ಮೋಹ! ಎರಡು ವರ್ಷದಲ್ಲಿ ಜೀವನಕ್ಕಾಗುವಷ್ಟು ಪಾವ್ ತಿಂದುಬಿಟ್ಟಿದ್ದೇನೆ. ವೆಜ್-ನಾನ್‌ವೆಜ್ ಹಾಸ್ಟೆಲ್‌ಗಳನ್ನು ಧಿಕ್ಕರಿಸಿ ವಾಸ್ಥವ್ಯ ಹುಡುಕಿದವಳಿಗೆ, ಗೋವಾದ ವೃದ್ಧ ಮರಾಠೀ ಬ್ರಾಹ್ಮಣರ ಮನೆಯ ಪಿಜಿಯೇ ಗತಿಯಾಯಿತು. ಅದೂ ಸಿಕ್ಕಿದ್ದು ಅದೃಷ್ಟವೇ ಅನ್ನುವುದನ್ನು ಸದ್ಯಕ್ಕೆ ಬ್ರಾಕೆಟ್ಟಿನಲ್ಲಿಡೋಣ. ಹೊರ ದೇಶದಲ್ಲಿ ಸೆಟ್ಲಾದ ಮಕ್ಕಳೂ, ೩-೪ ಬಾಡಿಗೆಗೆ ಬಿಟ್ಟ ಫ್ಲ್ಯಾಟೂ, ತಿಂಗಳ ಕೊನೆಯ ಪೆನ್ಷನ್ನೂ ಇರುವ ದಂಪತಿಗಳಿಗೆ ಅಡುಗೆ ಮಾಡುವ ಗೋಜೂ ಇರಲಿಲ್ಲ, ಅಡುಗೆಯಾಕೆ ಪ್ರತಿದಿನವೂ ಹಾಜರಿ ಹಾಕುತ್ತಿದ್ದಳು. ಆದರೂ ಗೋವನ್ನರಿಗೆ ಪೋರ್ಚುಗೀಸರಿಂದ ಬಳುವಳಿ ಸಿಕ್ಕ ಪಾವು ತಿನ್ನದೇ ಇವರ ದಿನಕಳೆಯದು. ವಾರದಲ್ಲಿ ಕನಿಷ್ಟ ಮೂರು ದಿನವಾದರೂ ಬೆಳಗಿನ ಉಪಹಾರ, ರಾತ್ರಿಯ ಊಟ ಪಾವೇ! ಚೀ, ಯಕ್... ಜಿಗುಪ್ಸೆ ಬರುವಷ್ಟಾಗಿಬಿಟ್ಟಿದೆ. ಈ ಮೈದಾ ತಿಂದು ಹೆಚ್ಚಿರುವ ನನ್ನ ಮೈ-ಕೈ, ಹಲವರಿಗೆ ಚಟದ ಪರಿಣಾಮವಾಗಿಯೂ ಕಂಡದ್ದುಂಟು. ಇನ್ನು ನನ್ನ ಸಹಪಾಠಿಗಳು ಸಮೋಸಾ, ಮಿರ್ಚಿ ಭಜಿ, ಕಾಂದಾ ಭಜಿಯನ್ನು ಪಾವಿನೊಳಗೆ ನೂಕಿಸಿ ಇಷ್ಟಗಲ ಬಾಯೊಳಗೆ ಇಳಿಸುವುದ ನೋಡಿದ ಮೇಲೆ, ಇಲ್ಲಿಯ ಜನರ ಪಾವ್ ಬಗೆಗಿನ ಅಪಾರ ಶೃದ್ಧೆ ಮತ್ತು ಭಯಂಕರ ಭಕ್ತಿಯ ಸಮಗ್ರ ಪರಿಚಯವಾಗಿದ್ದು. 

ಇಲ್ಲಿ ನನ್ನ ದಿನಗಳು ಮಜವಾಗಿದ್ದವು. ಪ್ರತಿದಿನವೂ ಕಾಲೇಜಿನ ಹಾದಿಯಲ್ಲಿ ಸಿಗುತ್ತಿದ್ದ ತರಕಾರಿ ಮಾರುವ ಗಿಡ್ಡ ನೈಟಿಯ ಗಾವಡಿ ಅಜ್ಜಿಯರಿಗೆ ಹಾಯ್-ಬಾಯ್ ಹೇಳಿಯೇ ಸಾಗುತ್ತಿದ್ದೆ. ನನ್ನ ಸ್ನೇಹದ ಬಲೆಗೆ ಬಿದ್ದ ಅವರು ಒಮ್ಮೊಮ್ಮೆ ಉಪ್ಪು ಸವರಿದ ಸೌತೇಕಾಯಿ ಕೊಡುತ್ತಿದ್ದರು. ಐಸ್‌ಕ್ರೀಂ ಪಾರ್ಲರಿನ ಕ್ರಿಶ್ಚಿಯನ್ ಆಂಟಿಗೆ ಹೊಸ ಹೊಸ ಫ್ಲೇವರನ್ನು ನನಗೆ ಪರಿಚಯಿಸುವುದೇ ಖುಷಿಯಂತೆ ಕಾಣುತ್ತಿತ್ತು. ಎತ್ತರ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಇಣುಕುವ ಬಿಳಿ ಕೂದಲ ಮುದುಕಿ ಕ್ರಮೇಣ ಅಲ್ಲಿಂದಲೇ ಮಾತನಾಡಿಸಲು ಶುರು ಹಚ್ಚಿಕೊಂಡಿದ್ದಳು. ಕನ್ನಡದವಳೆಂದು ತಿಳಿದು, ಯಾವುದೇ ಸಮಯದಲ್ಲಿ ಏನೇ ಸಹಾಯಕ್ಕಾದರೂ ಕರೆ ಮಾಡೆಂದು ಹೇಳಿದ ಹುಬ್ಬಳ್ಳಿಯ ಪೈಲಟ್(ಬಾಡಿಗೆ ಬೈಕ್) ಮೆಹಬೂಬ್ ಸಾಬ, ನಮ್ಮ ಏರಿಯಾದಲ್ಲಿ ಪಾನಿಪುರಿ ಮಾರುವ ದಾಂಡೇಲಿಯ ಲಕ್ಷ್ಮಕ್ಕ, ಪ್ರತಿದಿನವೂ ಹೋಗುವ ನನ್ನ ಗುರುತಿಟ್ಟುಕೊಂಡು ನಾ ಹೋಗುತ್ತಲೇ ಮೆಲ್ಲಗೆ ನಕ್ಕು ಸಿಹಿ ಎಳನೀರನ್ನ ಕಡಿಯಲು ಪ್ರಾರಂಭಿಸುವ ಹೆಸರು ಗೊತ್ತಿಲ್ಲದ ಎತ್ತರದವ… ಇವರೆಲ್ಲ ನನಗೆ ಗೋವಾದ ಅನಿರೀಕ್ಷಿತ ಸ್ನೇಹಿತರು. 

ಇದೀಗ ಎರಡು ವರ್ಷ ನನ್ನ ಪೊರೆದ ಗೋವಾ, ಇನ್ನೂ ಹೇಳಬೇಕೆಂದರೆ ಮಡಗಾಂವನ್ನು ಬಿಟ್ಟು ಹೊರಡುವ ಸಮಯ; ಇಲ್ಲಿ ಹೇಳಿದ್ದರ ಹೊರತಾಗಿಯೂ ಗೋವಾದಲ್ಲಿ ಬಹಳಷ್ಟಿದೆ. ಊರುಗಳೇ ಹಾಗಲ್ಲವೇ? ಒಬ್ಬೊಬ್ಬರಿಗೆ ಒಂದೊಂದು ರೀತಿಯ ದರ್ಶನ ಮಾಡಿಸುತ್ತದೆ, ಬಗೆ ಬಗೆಯ ಅನುಭವ ಕೊಡುತ್ತದೆ. ಒಟ್ಟಿನಲ್ಲಿ ಮುಂದಿನ ಪಯಣಕ್ಕಾಗುವಷ್ಟು ಪಾಠ, ಮೂಟೆ ಹೊರಿಸಿ ಕಳುಹಿಸುತ್ತದೆ. 

(ಲೇಖಕರು ಹವ್ಯಾಸಿ ಬರಹಗಾರರು)