-ಪ್ರಧಾನ್ ಎನ್. ನಂದಾ

ಜೆ ಸಿಕ್ಕು ಮನೆಗೆ ಹೋದರೆ ಅಲ್ಲಿ ಯಾವ ಪುಸ್ತಕ ಓದುವುದು ಎಂಬ ಗೊಂದಲದಲ್ಲೇ ಎಷ್ಟೋ ದಿನಗಳು ಕಳೆದು ಹೋಗುತ್ತದೆ. ಮನೆತುಂಬ ಪುಸ್ತಕ ತುಂಬಿದ್ದರೆ ಅದೇ ಗತಿ ತಾನೆ? ಅಷ್ಟು ಪುಸ್ತಕ ತಂದಿಟ್ಟು, ಓದಿದ್ದ ಅಪ್ಪ ಎಂದಾದರೂ ತಾವೇ ಒಂದು ಪುಸ್ತಕ ಬರೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಬಾರಿ ಯೋಚಿಸಿದ್ದುಂಟು. ಆ ಕನಸು ಕೊನೆಗೂ ನನಸಾಗಿದ್ದು ಈ ರಜೆಯಲ್ಲಿ.

ಈ ಬಾರಿ ಮನೆಗೆ ತೆರಳಿ ಪುಸ್ತಕ ರಾಶಿಯಲ್ಲಿ ಹುಡುಕುವಾಗ ಧೂಳಿಡಿದ, ಅರೆಬರೆಯಾಗಿ ದಿನಪತ್ರಿಕೆ ತೊಟ್ಟುಕೊಂಡ ಒಂದು ಕಿಂಗ್ ಸೈಜ್ ನೋಟ್‌ಬುಕ್ ಸಿಕ್ಕಿತು. ತೆರೆದು ನೋಡಿದರೆ ಅಪ್ಪನ ಹಸ್ತಾಕ್ಷರ ಎಲ್ಲಾ ಪುಟಗಳಲ್ಲಿ ಚೆಲ್ಲಿದ್ದವು. ಆ ಹಸ್ತಾಕ್ಷರ ಅವರದ್ದೇ ಎಂದು ಖಚಿತಪಡಿಸಿಕೊಂಡು, ಆ ಪುಸ್ತಕ ಬರೆಯುವಾಗ ಅವರಿಗೆ ಕೇವಲ 15-17 ವರುಷ ಎಂಬ ಮಾಹಿತಿಯನ್ನೂ ಪಡೆದೆ. ಮನೆಯಲ್ಲಿದ್ದ ರಾಶಿ ಪುಸ್ತಕಗಳ ಜ್ಞಾನ ಸಂಪಾದಿಸಿ ಬರೆದ ಮಹಾಗ್ರಂಥ ಎಂದುಕೊಂಡಿದ್ದರೆ, ಅದನ್ನು ಬರೆಯುವ ವೇಳೆಗೆ ಅವರು ಮನೆಯಲ್ಲಿದ್ದ ಯಾವ ಪುಸ್ತಕವನ್ನು ಓದಿರಲಿಲ್ಲವೆಂಬುದು ತಿಳಿಯಿತು.

ಆ ಪುಸ್ತಕದ ಮೊದಲ ಪುಟದಲ್ಲಿ ಅವರ ಹೆಸರು ಹಾಗೂ ಕಾಲೇಜಿನ ವಿಳಾಸ ನನಗೆ ಅಪರಿಚಿತವಾಗಿದ್ದ ಅವರ ಹಸ್ತಾಕ್ಷರದಲ್ಲಿತ್ತು. ಎರಡನೆ ಪುಟದಲ್ಲಿ 'ಹುಚ್ಚು ಮನದ ಹಲವು ಮುಖ' ಎಂಬ ಸಾಲು. ಪುಟಗಳನ್ನ ತಿರುವುತ್ತ ಅದು ಅಪ್ರನ ಹದಿಹರೆಯದ ಮನದ ಕವನ ಸಂಕಲನವೆಂದು ತಿಳಿಯಿತು. ಕೊನೆ ಪುಟ ತಲುಪುವಾಗ ಯಾರೋ ಕೊಟ್ಟ ಪುಟ್ಟ ಪತ್ರವೊಂದು ಕೈಗೆ ಜಾರಿತು. ಕುತೂಹಲದಿಂದ ತೆರೆದು ಓದಿದರೆ, ಅನಾಮಿಕ ವ್ಯಕ್ತಿಯೊಬ್ಬರು ಅವರ ಕವನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೊನೆಯಲ್ಲಿ 'ಮುಚ್ಚಿಟ್ಟು ಜ್ಞಾನ ಕೊಳೆಯುತ್ತದೆ, ತೆರೆದಿಟ್ಟು ಜ್ಞಾನ ಹೊಳೆಯುತ್ತದೆ' ಎಂಬ ಸಾಲನ್ನು ಬರೆದಿದ್ದರು. ಆ ಸಾಲನ್ನು ಓದಿ ಸಾರ್ಥಕತೆಯ ಭಾವವೊಂದು ಮನವನ್ನ ಆವರಿಸಿತು.

ನಂತರ ಅಪ್ಪನೊಂದಿಗೆ ಅವರು ಬೆಳೆದಿದ್ದ ಹಳ್ಳಿ ಭದ್ರಾವತಿ ಸುತ್ತಿದಾಗ, ಆ 82-85 ರ ಕವನಗಳಿಗೆಲ್ಲ ರೆಕ್ಕೆ ಬಂದು ಮನದಲ್ಲಿ ಚಿಟ್ಟೆಗಳಾಗಿ ಹಾರಿದಂತೆ ಭಾಸವಾಯಿತು. (ಕವನಗಳು ಮನದಲ್ಲಿಳಿದು ಅರಳುವ ಸ್ಪೆಷಲ್ ಫ್ಲಾವರ್ಸ್! ಓದಿದಾಗ, ನೆನೆದಾಗ - ಆ ಹೂಗಳಿಗೆ ನೀರೆರೆದಾಗಲೆಲ್ಲ ಮನದ ಬನದಲ್ಲಿ ಚಿಟ್ಟೆಗಳನ್ನ ಹುಟ್ಟಿಸುತ್ತದೆ.) ಅವರ ಕವನಗಳನ್ನು ಅವರಿಗೆ ಕೇಳಿಸಿ, ನೆನಪುಗಳ ಮೆಲುಕು ಹಾಕಿ, ಅಮ್ಮನ ಜೊತೆ ಸೇರಿ ಕಾಲೆಳೆದು... ಹೀಗೆ ರಜೆ ಕಳೆಯಿತು.

ಕಾಲೇಜು ಮೆಟ್ಟಿಲೇರಿದ ನಂತರವಾದರೂ ಜೀವನದಲ್ಲಿ ಇಂತಹದೊಂದು ಅವಿಸ್ಮರಣೀಯ ರಜೆ ಅನುಭವ ಸಿಕ್ಕಿತಲ್ಲ ಎಂದು ಖುಷಿಪಡುವ ಹೊತ್ತಲ್ಲೇ... ಇದಿನ್ನೂ ಸ್ಟಡಿ ಹಾಲಿಡೇಸ್, ಎಕ್ಸಾಮ್ಸ್ ಅಭಿ ಭಿ ಬಾಕಿ ಹೈ ಎಂದು ನೆನಪಾಯಿತು. ಆದರೆ ಈ ಕವನ ಸಂಕಲನ ಪಕ್ಕಕ್ಕಿಟ್ಟು ಪರೀಕ್ಷೆಗೆ ತಯಾರಿ ನಡೆಸುವುದು ಸಾಧ್ಯಾನಾ? ನೋಡಬೇಕಷ್ಟೆ!

(ಲೇಖಕರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿ.)